ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ಮಾರ್ಗಸೂಚಿ, ನಿರ್ಬಂಧಗಳ ಬಗ್ಗೆ ನಿರ್ಧಾರ: ಸಿಎಂ ಬೊಮ್ಮಾಯಿ

Update: 2021-12-09 02:40 GMT

ಬೆಂಗಳೂರು: ರಾಜ್ಯದ ಹಲವು ಕಡೆಗಳಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಕೋವಿಡ್ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಗುರುವಾರ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳ ಮುಂದುವರಿದರೆ ಸರ್ಕಾರ ಹೊಸದಾಗಿ ನಿರ್ಬಂಧಗಳನ್ನು ಜಾರಿಗೊಳಿಸಲಿದೆ ಎಂಬ ಸುಳಿವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಆದಾಗ್ಯೂ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಹೊಸ ಮಾರ್ಗಸೂಚಿ ಮತ್ತು ನಿರ್ಬಂಧಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನವೆಂಬರ್ ತಿಂಗಳಲ್ಲಿ ರಾಜ್ಯದ ಕೋವಿಡ್ ಸ್ಥಿತಿಗತಿ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ, ಸಂಪುಟಸಭೆಯ ಮುಂದೆ ಇಡುವುದಾಗಿ ಅವರು ಹೇಳಿದ್ದಾರೆ. ರಾಜ್ಯದಲ್ಲಿನ ಒಮೈಕ್ರಾನ್ ಪ್ರಭೇದದ ವೈರಸ್ ಸೋಂಕು ಮತ್ತು ಕೋವಿಡ್ ಕ್ಲಸ್ಟರ್‌ಗಳ ಚಿತ್ರಣವನ್ನೂ ಸಭೆಯ ಮುಂದೆ ಇಡಲಾಗುವುದು. ಅದಕ್ಕೆ ಅನುಸಾರವಾಗಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ವಿವರ ನೀಡಿದ್ದಾರೆ.

ಕೆಲ ಜಿಲ್ಲೆಗಳಲ್ಲಿ ಮಾತ್ರ ಕೋವಿಡ್ ಪ್ರಕರಣಗಳು ಕಂಡುಬಂದಿದ್ದು, ಇತರ ಜಿಲ್ಲೆಗಳಲ್ಲಿ ನಿಯಂತ್ರಣದಲ್ಲಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಆದರೆ ಹೊಸ ಮಾರ್ಗಸೂಚಿ ಬಿಡುಗಡೆಯಾಗುವುದಾದರೆ ಇದು ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಡಿಸೆಂಬರ್ ಹಾಗೂ ಜನವರಿಯಲ್ಲಿ ಕೋವಿಡ್ ನಿಯಂತ್ರಿಸುವುದು ಮತ್ತು ಹೊಸ ಮಾರ್ಗಸೂಚಿ ಬಿಡುಗಡೆಯ ಅಗತ್ಯತೆಯನ್ನು ವಿವರವಾಗಿ ಸಂಪುಟ ಸಭೆ ಚರ್ಚಿಸಲಿದೆ ಎಂದು ಸಿಎಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News