ಜಗತ್ತಿನಾದ್ಯಂತ 293 ಪತ್ರಕರ್ತರು ಜೈಲಿನಲ್ಲಿ: ಚೀನಾದಲ್ಲಿ ಗರಿಷ್ಠ, ಭಾರತ 13ನೇ ಸ್ಥಾನದಲ್ಲಿ

Update: 2021-12-09 18:41 GMT

ನ್ಯೂಯಾರ್ಕ್, ಡಿ.9: ವಿಶ್ವದಾದ್ಯಂತ ಜೈಲಿನ ಕಂಬಿಗಳ ಹಿಂದಿರುವ ಪತ್ರಕರ್ತರ ಸಂಖ್ಯೆ 2021ರಲ್ಲಿ ದಾಖಲೆ ಗರಿಷ್ಟ ಮಟ್ಟ ತಲುಪಿದೆ. ಈ ವರ್ಷದ ಡಿಸೆಂಬರ್ 1ರವರೆಗೆ ವಿಶ್ವದಾದ್ಯಂತ 293 ಪತ್ರಕರ್ತರು ಜೈಲಿನಲ್ಲಿದ್ದಾರೆ ಎಂದು ‘ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್’(ಸಿಪಿಜೆ)ಯ ನೂತನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿ ಮಾಡುತ್ತಿದ್ದ ಸಂದರ್ಭ ಕನಿಷ್ಟ 24 ಪತ್ರಕರ್ತರ ಹತ್ಯೆಯಾಗಿದೆ. ಇತರ 18 ಪತ್ರಕರ್ತರು ಸಾವನ್ನಪ್ಪಿರುವ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಮಾಧ್ಯಮ ಸ್ವಾತಂತ್ರ್ಯ ಮತ್ತು ಮಾಧ್ಯಮಗಳ ಮೇಲಿನ ದಾಳಿಯ ಕುರಿತು ವಾರ್ಷಿಕ ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವರದಿಗಾರರನ್ನು ಜೈಲಿಗಟ್ಟುವ ಕಾರಣ ವಿವಿಧ ದೇಶಗಳಲ್ಲಿ ಬದಲಾಗಿದ್ದರೂ, ದಾಖಲೆ ಸಂಖ್ಯೆಯ ಬಂಧನವಾಗಿರುವುದು ರಾಜಕೀಯ ವಿಪ್ಲವ ಮತ್ತು ಸ್ವತಂತ್ರ್ಯ ವರದಿಗಾರಿಕೆಯ ಕುರಿತ ಅಸಹಿಷ್ಣುತೆಯ ಪ್ರತೀಕವಾಗಿದೆ ಎಂದು ಅಮೆರಿಕ ಮೂಲದ ಸಂಘಟನೆ ವರದಿ ಮಾಡಿದೆ. 

ಸತತ 6ನೇ ವರ್ಷ ವಿಶ್ವದಾದ್ಯಂತ ಬಂಧನದಲ್ಲಿರುವ ಪತ್ರಕರ್ತರ ಸಂಖ್ಯೆ ದಾಖಲೆ ಮಟ್ಟಕ್ಕೇರಿದೆ . ಈ ಸಂಖ್ಯೆ 2 ಬಗೆಹರಿಸಲಾಗದ ಸವಾಲುಗಳನ್ನು ಪ್ರತಿಬಿಂಬಿಸಿದೆ. ಸರಕಾರವು ಮಾಹಿತಿಯನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ಪ್ರಯತ್ನಿಸುತ್ತಿದೆ ಮತ್ತು ಈ ಪ್ರಯತ್ನದಲ್ಲಿ ಅವರು ಲಜ್ಜೆಗೆಟ್ಟ ವರ್ತನೆ ತೋರುತ್ತಿದ್ದಾರೆ. ಸುದ್ಧಿಯನ್ನು ವರದಿ ಮಾಡಿದ್ದಕ್ಕಾಗಿ ಪತ್ರಕರ್ತರನ್ನು ಬಂಧಿಸುವುದು ಸರ್ವಾಧಿಕಾರಿ ಆಡಳಿತದ ಲಕ್ಷಣ ಎಂದು ಸಿಪಿಜೆ ಕಾರ್ಯನಿರ್ವಾಹಕ ನಿರ್ದೇಶಕ ಜೊಯೆಲ್ ಸೈಮನ್ ಹೇಳಿದ್ದಾರೆ.

2021ರ ಜನವರಿ 1ರಿಂದ ಡಿಸೆಂಬರ್ 1ರ ಅವಧಿಯಲ್ಲಿ ಕನಿಷ್ಟ 108 ಪತ್ರಕರ್ತರನ್ನು ಜೈಲಿಗೆ ತಳ್ಳಲಾಗಿದ್ದು ಇದರೊಂದಿಗೆ ಬಂಧನದಲ್ಲಿರುವ ಪತ್ರಕರ್ತರ ಸಂಖ್ಯೆ 293ಕ್ಕೇರಿದೆ. ಇದು ಜೈಲು ಪಾಲಾಗಿರುವ ಪತ್ರಕರ್ತರ ಮಾಹಿತಿ ಸಂಗ್ರಹಿಸುವ ಕಾರ್ಯ 1992ರಿಂದ ಆರಂಭವಾದಂದಿನಿಂದ ಅತ್ಯಂತ ಗರಿಷ್ಟ ಪ್ರಮಾಣವಾಗಿದೆ ಎಂದು ಸಂಸ್ಥೆ ಹೇಳಿದೆ. 1992ರಿಂದ 2021ರ ಡಿಸೆಂಬರ್ 1ರವರೆಗೆ ಜಾಗತಿಕವಾಗಿ ಕನಿಷ್ಟ 1440 ಪತ್ರಕರ್ತರ ಹತ್ಯೆಯಾಗಿದೆ.
 
2021ರಲ್ಲಿ ಹತ್ಯೆಯಾದ ಪತ್ರಕರ್ತರಲ್ಲಿ ಅಫ್ಘಾನಿಸ್ತಾನದಲ್ಲಿ ಜುಲೈಯಲ್ಲಿ ತಾಲಿಬಾನ್ ದಾಳಿಯಿಂದ ಮೃತಪಟ್ಟ ರಾಯ್ಟರ್ಸ್ ಫೋಟೋಗ್ರಾಫರ್ ದ್ಯಾನಿಶ್ ಸಿದ್ದಿಖಿ, ಮೆಕ್ಸಿಕೋದಲ್ಲಿ ಜೂನ್‌ನಲ್ಲಿ ಗುಂಡೇಟಿನಿಂದ ಮೃತಪಟ್ಟ ಗುಸ್ತಾವೊ ಸ್ಯಾಂಚೆಸ್ ಕ್ಯಾಬ್ರೆರಾ ಸೇರಿದ್ದಾರೆ. ಹಾಂಕಾಂಗ್, ಚೀನಾ, ಮ್ಯಾನ್ಮಾರ್‌ನಲ್ಲಿ ವರದಿಗಾರರನ್ನು ಗುರಿಯಾಗಿಸಲು ಬಳಸಿಕೊಂಡ ಕಾನೂನುಗಳ ಬಗ್ಗೆ , ಉತ್ತರ ಇಥಿಯೋಪಿಯಾದಲ್ಲಿ ನಡೆಯುತ್ತಿರುವ ಯುದ್ಧ, ಬೆಲಾರೂಸ್‌ನಲ್ಲಿ ವಿರೋಧಿಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಚೀನಾದಲ್ಲಿ 50 ಪತ್ರಕರ್ತರು ಬಂಧನದಲ್ಲಿದ್ದು ಇದು ಗರಿಷ್ಟವಾಗಿದೆ. ಆ ಬಳಿಕ ಮ್ಯಾನ್ಮಾರ್(26), ಈಜಿಪ್ಟ್(25), ವಿಯೆಟ್ನಾಮ್(23) ಮತ್ತು ಬೆಲರೂಸ್(19) ಇವೆ. ಹಾಂಕಾಂಗ್‌ನಲ್ಲಿ ಬಂಧನದಲ್ಲಿರುವ ಪತ್ರಕರ್ತರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಭ್ರಷ್ಟ ಅಧಿಕಾರಿಗಳ ಕ್ರಿಮಿನಲ್ ಗ್ಯಾಂಗ್ ಬಗ್ಗೆ ವರದಿ ಮಾಡುವ ಪತ್ರಕರ್ತರನ್ನು ನಿರಂತರ ಗುರಿಯಾಗಿಸಿ ದಾಳಿ ನಡೆಯುತ್ತಿರುವ ಮೆಕ್ಸಿಕೋ ವರದಿಗಾರರಿಗೆ ಅತ್ಯಂತ ಮಾರಣಾಂತಿಕ ದೇಶ ಎಂದು ವರದಿ ಹೇಳಿದೆ.

ಟರ್ಕಿ ಮತ್ತು ಸೌದಿ ಅರೆಬಿಯಾದಲ್ಲಿ ಪತ್ರಕರ್ತರ ಬಂಧನ ಪ್ರಕರಣ ಕಡಿಮೆ ಸಂಖ್ಯೆಯಲ್ಲಿದ್ದರೂ ಇದು ಪ್ರಗತಿಯನ್ನು ಸೂಚಿಸುವುದಿಲ್ಲ. ಜೈಲಿಗೆ ತಳ್ಳುವ ಬದಲು ಸ್ವತಂತ್ರ ವರದಿಗಾರರು ಹಾಗೂ ಮಾಧ್ಯಮ ಸಂಸ್ಥೆಗಳನ್ನು ತಡೆಯುವ ಇನ್ನಷ್ಟು ಅತ್ಯಾಧುನಿಕ ಮಾರ್ಗಗಳನ್ನು(ಇಂಟರ್ನೆಟ್ ಸ್ಥಗಿತ, ಅತ್ಯಾಧುನಿಕ ತಂತ್ರಜ್ಞಾನದ ಸ್ಪೈವೇರ್ ಬಳಸಿ ನಿಗಾವ್ಯವಸ್ಥೆ ಹೆಚ್ಚಿಸುವುದು) ಸರ್ವಾಧಿಕಾರಿ ಮುಖಂಡರು ಕಂಡುಕೊಳ್ಳುತ್ತಿದ್ದಾರೆ ಎಂದು ವರದಿ ಹೇಳಿದೆ.
ಪತ್ರಕರ್ತರ ಹತ್ಯೆ, ಸೆನ್ಸಾರ್ಶಿಪ್, ಜೈಲಿಗಟ್ಟುವುದು, ದೈಹಿಕ ಹಿಂಸೆ, ಬೆದರಿಕೆಯನ್ನು ಕಳೆದ 40 ವರ್ಷಗಳಿಂದ ಸಿಪಿಜೆ ಖಂಡಿಸುತ್ತಾ ಬಂದಿದೆ. ಪ್ರತೀ ವರ್ಷ ಇನ್ನಷ್ಟು ದೇಶಗಳು ಈ ಪಟ್ಟಿಗೆ ಸೇರ್ಪಡೆಯಾಗುತ್ತಿರುವುದು ದುಃಖದ ವಿಷಯವಾಗಿದೆ. ಆದರೆ ಮ್ಯಾನ್ಮಾರ್ ಮತ್ತು ಇಥಿಯೋಪಿಯಾಗಳು ಮಾಧ್ಯಮ ಸ್ವಾತಂತ್ರ್ಯದ ಬಾಗಿಲನ್ನು ನಿರ್ದಯವಾಗಿ ಮತ್ತು ಕ್ರೂರವಾಗಿ ಮುಚ್ಚಿಬಿಟ್ಟಿರುವುದು ಭಯಾನಕವಾಗಿದೆ ಎಂದು ಸೈಮನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News