ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್‍ನ ಯೂಸುಫ್ ಷರೀಫ್ ಅಭ್ಯರ್ಥಿತನ ಅಸಿಂಧುಗೊಳಿಸಲು ಬಿಜೆಪಿ ಆಗ್ರಹ

Update: 2021-12-09 18:40 GMT

ಬೆಂಗಳೂರು, ಡಿ.9: ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಷರೀಫ್ ಯಾನೆ ಕೆಜಿಎಫ್ ಬಾಬು ಅವರಿಂದ ಚುನಾವಣಾ ನೀತಿಸಂಹಿತೆಯ ಉಲ್ಲಂಘನೆ ಆಗಿದ್ದನ್ನು ಪರಿಗಣಿಸಿ ಅವರ ಅಭ್ಯರ್ಥಿತನವನ್ನು ಅಸಿಂಧುಗೊಳಿಸಲು ಆಗ್ರಹಿಸಿ ರಾಜ್ಯ ಬಿಜೆಪಿ ವತಿಯಿಂದ ಗುರುವಾರ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸ್ಥಳೀಯ ಸಂಸ್ಥೆಯ ಚುನಾಯಿತ ಸದಸ್ಯರಿಂದ ಚುನಾಯಿಸಲ್ಪಡುವ ವಿಧಾನಪರಿಷತ್ ಅಭ್ಯರ್ಥಿಯಾದ ಯೂಸುಫ್ ಷರೀಫ್ ಅವರು ಇಂದಿನ ದಿನಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟಿದ್ದು ಅದರ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿಯು ಪ್ರತಿಯೊಬ್ಬ ಸದಸ್ಯರಿಗೆ ಕುಡಿಯಲಿಕ್ಕೆ ಯಾವ ರೀತಿ ಹಣ ಕೊಡುತ್ತೇವೆ ಎಂಬುದನ್ನು ಹೇಳಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ಡಿ.1ರಂದು ಸಹ ಈ ಅಭ್ಯರ್ಥಿಯ ಮೇಲೆ ಭಾರತೀಯ ಜನತಾ ಪಾರ್ಟಿ ವತಿಯಿಂದ ನೀತಿಸಂಹಿತೆ ಉಲ್ಲಂಘನೆ ಕುರಿತ ದೂರು ಕೊಡಲಾಗಿತ್ತು. ಆದರೆ ಅವರ ಪ್ರಚಾರ ನಿರಂತರ ಇದೇ ರೀತಿಯಲ್ಲಿ ಮುಂದುವರೆಯುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅ.9ರಂದು ಕೊಡುವ ಎಲ್ಲಾ ಚುನಾವಣಾ ಜಾಹೀರಾತು ಚುನಾವಣಾ ಆಯೋಗದ ನೀತಿಸಂಹಿತೆ ಸಮಿತಿಯ (ಎಂಸಿಎಂಸಿ) ಅನುಮತಿ ಪಡೆಯಬೇಕು ಎಂಬ ನಿಯಮವಿದ್ದರೂ ಯಾವ ಆಧಾರದ ಮೇಲೆ ಇದು ಸಮರ್ಥನೀಯ ಎಂದು ಚುನಾವಣಾ ಆಯೋಗ ಅನುಮತಿ ಕೊಟ್ಟಿದೆ (ಕೊಟ್ಟಿದ್ದರೆ) ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಬಿಜೆಪಿ ಕೋರಿದೆ.

ಡಿ.1ರಂದು ಕೊಟ್ಟ ದೂರಿನ ಪ್ರತಿಯನ್ನು ಸಹ ಈ ಪತ್ರದೊಂದಿಗೆ ಲಗತ್ತಿಸಲಾಗಿದೆ. ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಯೂಸುಫ್ ಷರೀಫ್ (ಕೆ.ಜಿ.ಎಫ್. ಬಾಬು) ಅವರ ಅಭ್ಯರ್ಥಿತನವನ್ನು ಅಸಿಂಧುಗೊಳಿಸಬೇಕು ಎಂದು ಮತ್ತೊಮ್ಮೆ ಆಗ್ರಹಿಸಲಾಗಿದೆ ಎಂದು ಬಿಜೆಪಿ ಹೇಳಿದೆ.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಕಾನೂನು ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಯೋಗೇಂದ್ರ ಹೊಡಾಘಟ್ಟ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಅವರಿದ್ದ ನಿಯೋಗವು ಈ ಮನವಿ ಸಲ್ಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News