ಬೆಂಗಳೂರು: ಹನ್ನೊಂದನೆ ದಿನಕ್ಕೆ ಕಾಲಿಟ್ಟ ಐಟಿಐ ಗುತ್ತಿಗೆ ನೌಕರರ ಧರಣಿ

Update: 2021-12-11 17:27 GMT

ಬೆಂಗಳೂರು, ಡಿ.11: ನಗರದ ಕೆ.ಆರ್.ಪುರಂ ಬಳಿಯಿರುವ ಕೇಂದ್ರ ಸರಕಾರ ಒಡೆತನದ ಐಟಿಐ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಪ್ರತಿಭಟನೆ ಹನ್ನೊಂದನೆ ದಿನಕ್ಕೆ ಕಾಲಿಟ್ಟಿದೆ. ಡಿ.1ರಂದು ಕಾರ್ಖಾನೆಯ ಆಡಳಿತ ಮಂಡಳಿಯು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ 80ಜನ ನೌಕರರನ್ನು ಯಾವುದೇ ನೋಟಿಸ್ ನೀಡದೆ ಕೆಲಸದಿಂದ ಕೈಬಿಟ್ಟಿದೆ. ಆದುದರಿಂದ ನೌಕರರು ಒಗ್ಗೂಡಿ ಕಾರ್ಖಾನೆಯ ಆವರಣದಲ್ಲಿ ಪ್ರತಿಭಟನೆ ನೆಡಸುತ್ತಿದ್ದಾರೆ. 

ಐಟಿಐ ಕಾರ್ಖಾನೆಯು ದೇಶದ ರಕ್ಷಣಾ ವ್ಯವಸ್ಥೆ, ದೂರ ಸಂಪರ್ಕ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಕೊಡುಗೆ ನೀಡುತ್ತಿದೆ. ಇದಕ್ಕೆ ಕಾರಣವಾಗಿರುವ ಕಾರ್ಮಿಕರನ್ನು ಕೇಂದ್ರ ಸರಕಾರವು ಕಡೆಗಣಿಸಿರುವುದು ಸರಿಯಲ್ಲ. ಕಳೆದ ಮೂರು ದಶಕಗಳ ಹಿಂದೆ ಕಾರ್ಖಾನೆಯಲ್ಲಿ ಮಹಿಳಾ ಸಹಕಾರ ಸಂಘದಿಂದ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ದಶಕಗಳಿಂದಲೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕರರಿಗೆ ಸೇವಾ ಭದ್ರತೆ ನೀಡಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಕಳೆದ ವರ್ಷ ಪಿಎಸ್‍ಎಸ್ ಕಂಪನಿಗೆ ನೌಕರರನ್ನು ಸೇರ್ಪಡೆ ಮಾಡಿದೆ. 

ಈಗ ದೆಹಲಿ ಮೂಲದ ಸಾಯಿ ಕಮ್ಯುನಿಕೇಷನ್ ಕಂಪನಿಗೆ ಒತ್ತಾಯಪೂರ್ವಕವಾಗಿ ಕಾರ್ಮಿಕರನ್ನು ಸೇರ್ಪಡೆ ಮಾಡಲಾಗುತ್ತಿದೆ. ಇದು ಕಾರ್ಮಿಕರ ಭವಿಷ್ಯಕ್ಕೆ ಮಾರಕವಾಗಿದ್ದು, ನೂತನ ಗುತ್ತಿಗೆ ಕಂಪನಿಗೆ ಸೇರಿಕೊಡರೆ ಕಾರ್ಮಿಕರ ಸೇವಾನುಭವವನ್ನು ಪರಿಗಣಿಸುವುದಿಲ್ಲ. ಸುಮಾರು 5ರಿಂದ 30 ವರ್ಷಗಳವರೆಗೂ ದುಡಿಸಿಕೊಂಡು ಈಗ ಕಾರ್ಮಿಕರನ್ನು ಅತಂತ್ರಗೊಳಿಸಲಾಗಿದೆ ಎಂದು ಎಐಸಿಸಿಟಿಯು ಸಂಘಟನೆಯ ಮುಖ್ಯಸ್ಥೆ ಮೈತ್ರೀಯಿ ಕೃಷ್ಣನ್ ಆರೋಪಿಸಿದ್ದಾರೆ.

ಶನಿವಾರದಂದು ರಾಜ್ಯದ ಅಂಬೇಡ್ಕರ್ ಸ್ಲಂ ನಿವಾಸಿಗಳ ಹೋರಾಟ ಸಂಘ, ಮಹಿಳಾ ಸಂಘ ಸೇರಿದಂತೆ ನಗರದ ಐದು ಸಂಘಟಣೆಗಳು ನೌಕರರ ಪ್ರತಿಭಟನೆಗೆ ಬೆಂಬಲ ನೀಡಿವೆ. ಕಾರ್ಮಿಕರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಮಾಡಲಾಗುವುದು. ಮುಂದಿನ ದಿನಗಳಲ್ಲಿ ನೂರಾರು ಕಾರ್ಮಿಕರೊಂದಿಗೆ ರ್ಯಾಲಿ, ಧರಣಿ ನಡೆಸಿ, ರಾಷ್ಟ್ರೀಯತೆಯ ಹೆಸರಿನಲ್ಲಿ ಆಳುತ್ತಿರುವ ಕೇಂದ್ರ ಸರಕಾರದ ಬಂಡವಾಳಶಾಹಿ ಧೋರಣೆಯ ಮುಖವಾಡವನ್ನು ದೇಶದ ಜನರಿಗೆ ತೋರಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಸರಕಾರಿ ಒಡೆತನದ ಕಾರ್ಖಾನೆಯೊಂದು ಕಾರ್ಮಿಕರಿಗೆ ಸೇವಾ ಭದ್ರತೆಯನ್ನು ನೀಡಲಾಗದೆ, ಗುತ್ತಿಗೆ ಕಂಪನಿಗಳ ಮೊರೆ ಹೋಗುತ್ತಿರುವುದು ಹೊಸದೇನು ಅಲ್ಲ. ಕಾರ್ಮಿಕರನ್ನು ಕಾರ್ಖಾನೆಯ ಆಡಳಿತ ಮಂಡಳಿ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳುತ್ತದೆ. ಆಯ್ಕೆಯಾದ ಕಾರ್ಮಿಕರನ್ನು ಕಾರ್ಖಾನೆಗಳ ಉತ್ಪಾದನಾ, ಮಾರುಕಟ್ಟೆ ವಿಭಾಗಗಳಿಗೆ ಕೆಲಸಕ್ಕೆ ನೇಮಿಸುತ್ತದೆ. ಆದರೆ ಕಾರ್ಮಿಕರಿಗೆ ಕೆಲವೊಂದು ಸವಲತ್ತುಗಳನ್ನು ನೀಡಬೇಕು ಎಂಬ ಕಾರಣಕ್ಕಾಗಿ ಗುತ್ತಿಗೆ ಕಂಪನಿಯ ಮೂಲಕ ಅವರಿಗೆ ಸಂಬಳ ಪಾವತಿ ಮಾಡಲಾಗುವುದು. ಹೀಗೆ ಸರಕಾರವು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತ ಬಂಡವಾಳಶಾಹಿಯನ್ನು ಬೆಳೆಸುತ್ತಿದೆ. 

-ಮೈತ್ರೀಯಿ ಕೃಷ್ಣನ್, ಮುಖ್ಯಸ್ಥೆ, ಎಐಸಿಸಿಟಿಯು ಸಂಘಟನೆ.  

ಲಾಕ್ ಡೌನ್ ಸಮಯದಲ್ಲಿ ಐಟಿಐ ಕಾರ್ಖಾನೆಯು ಸಂಬಳವನ್ನು ಪಾವತಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಪ್ರಾದೇಶಿಕ ಕಾರ್ಮಿಕ ಆಯುಕ್ತರ ಬಳಿ ದಾವೆ ಹೂಡಲಾಯಿತು. ಅಲ್ಲಿ ವಿಚಾರಣೆ ನಡೆಸಿ ಕಾರ್ಮಿಕರ ಪರವಾಗಿ ತೀರ್ಪು ನೀಡಿದರು. ಅಲ್ಲದೇ ಕಳೆದ ಮೂರು ದಶಕಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಆಡಳಿತ ಮಂಡಳಿಯನ್ನು ಮನವಿ ಮಾಡಲಾಯಿತು. ಮಂಡಳಿ ಅದನ್ನು ತಿರಸ್ಕರಿಸಿದ ಕಾರಣ ಈ ವಿಚಾರವಾಗಿ ಆಯುಕ್ತರಿಗೆ ದೂರು ನೀಡಲಾಗಿದೆ. ವಿಚಾರಣೆ ನಡೆಯುವವರೆಗೂ ಕಾರ್ಮಿಕರ ಸೇವಾ ಷರತ್ತುಗಳನ್ನು ಬದಲಿಸಬಾರದು ಎಂದು ಆಯುಕ್ತರು ಐಟಿಐ ಆಡಳಿತ ಮಂಡಳಿಗೆ ಆದೇಶಿಸಿದ್ದರೂ, ಅದನ್ನು ಲೆಕ್ಕಿಸದೆ ನಮ್ಮನ್ನು ಕೆಲಸದಿಂದ ತೆಗೆಯಲಾಗಿದೆ. 

-ಪಳಿನಿ, ಪೀಲ್ಡ್ ಇಂಜಿನಿಯರ್, ಐಟಿಐ ಬೆಂಗಳೂರು 

ದಶಕಗಳಿಂದ ಕೆಲಸ ಮಾಡುತ್ತಿದ್ದೇವೆ. ನಮಗೆ ಯಾವುದೇ ಸೇವಾ ಭದ್ರತೆಯನ್ನು ಐಟಿಐ ಕಾರ್ಖಾನೆ ನೀಡುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಗುತ್ತಿಗೆ ಕಂಪನಿಗಳಿಗೆ ನಮ್ಮನ್ನು ಮಾರಾಟ ಮಾಡುತ್ತಿದ್ದಾರೆ. ಈಗ ದೆಹಲಿ ಮೂಲದ ಸಾಯಿ ಕಮ್ಯುನಿಕೇಷನ್ ಗುತ್ತಿಗೆ ಕಂಪನಿಯಲ್ಲಿ ಹೊಸದಾಗಿ ಕಾರ್ಮಿಕರು ರಿಜಿಸ್ರ್ಟೇಷನ್ ಮಾಡಿಕೊಳ್ಳಬೇಕು ಎಂದು ಐಟಿಐ ಆಡಳಿತ ಮಂಡಲಿ ತಿಳಿಸಿದೆ. ಇದರಿಂದ ನಮ್ಮ ಸೇವಾನುಭವವು ಶೂನ್ಯವಾಗಲಿದೆ. ಹೊಸದಾಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳಲು ಸಾಯಿ ಕಮ್ಯುನಿಕೇಷನ್‍ಗೆ ಜಿಎಸ್‍ಟಿ ಸೇರಿದಂತೆ 900 ರೂ.ಗಳನ್ನು ಪಾವತಿಸಬೇಕಾಗಿದೆ. 

-ಅರುಣ್ ಕುಮಾರ್, ಮಿಷನ್ ಆಪರೇಟರ್, ಐಟಿಐ ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News