ಬಿಟ್ ಕಾಯಿನ್ ಪ್ರಕರಣ: ಶ್ರೀಕಿ ನಾಪತ್ತೆ, ಜಾಮೀನು ರದ್ದತಿಗೆ ಪೊಲೀಸರ ಕೋರಿಕೆ

Update: 2021-12-12 02:24 GMT

ಬೆಂಗಳೂರು: ಕುಖ್ಯಾತ ಹ್ಯಾಕರ್ ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ "ತಲೆ ಮರೆಸಿಕೊಂಡಿದ್ದಾನೆ" ಆದ್ದರಿಂದ ಆತನಿಗೆ ನೀಡಿರುವ ಜಾಮೀನು ಆದೇಶವನ್ನು ವಾಪಾಸು ಪಡೆಯಬೇಕು ಎಂದು ನ್ಯಾಯಾಲಯಕ್ಕೆ ಮೊರೆ ಹೋಗಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.

ಜಾಮೀನು ಷರತ್ತುಗಳನ್ನು ಶ್ರೀಕಿ ಉಲ್ಲಂಘಿಸಿದ್ದು, ಪ್ರಸ್ತುತ ನಾಪತ್ತೆಯಾಗಿದ್ದಾನೆ ಎಂದು ಬೆಂಗಳೂರು ನಗರ ಪೊಲೀಸ್ ಮೂಲಗಳು ಹೇಳಿವೆ. ಜೀವನಭೀಮಾನಗರ ಠಾಣೆಯಲ್ಲಿ ದಾಖಲಾದ ಪ್ರಕರಣದ ಸಂಬಂಧ ನೀಡಿರುವ ಜಾಮೀನು ಷರತ್ತಿನ ಪ್ರಕಾರ, ಪ್ರತಿ ಶನಿವಾರ ಶ್ರೀಕಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ರಿಜಿಸ್ಟರ್‌ನಲ್ಲಿ ಸಹಿ ಮಾಡಬೇಕಿತ್ತು ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೂರು ವಾರಗಳ ಹಿಂದೆ ಜೈಲಿನಿಂದ ಬಿಡುಗಡೆಯಾದ ಬಳಿಕ ಆತ ಪೊಲೀಸರ ಎದುರು ಹಾಜರಾಗಿಲ್ಲ. ತನಿಖೆಗೂ ಆತ ಸಹಕರಿಸುತ್ತಿಲ್ಲ ಎಂದು ಅಧಿಕಾರಿ ಬಹಿರಂಗಪಡಿಸಿದ್ದಾರೆ.

"ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿರುವುದರಿಂದ ನಾವು ತನಿಖಾ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಆದರೆ ಮೂರು ವಾರಗಳಿಂದ ಆತ ಎಲ್ಲಿದ್ದಾನೆ ಎನ್ನುವುದು ನಮಗೆ ಗೊತ್ತಿಲ್ಲ. ಆತ ವೈದ್ಯಕೀಯ ಚಿಕಿತ್ಸೆ ಅಥವಾ ಇತರ ತುರ್ತು ಸ್ಥಿತಿ ಎದುರಿಸುತ್ತಿದ್ದರೆ, ಆತ ಇದನ್ನು ತನಿಖಾಧಿಕಾರಿಗಳ ಗಮನಕ್ಕೆ ತರಬೇಕಿತ್ತು. ಆತನ ಚಲನ ವಲನಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದ್ದರಿಂದ ಆತನ ಜಾಮೀನು ಆದೇಶವನ್ನು ವಾಪಾಸು ಪಡೆಯುವಂತೆ ಕೋರ್ಟ್‌ನ ಮೊರೆ ಹೋಗಲು ತನಿಖಾ ತಂಡಕ್ಕೆ ಸೂಚಿಸಿದ್ದೇವೆ" ಎಂದು ವಿವರಿಸಿದ್ದಾರೆ.

ಶ್ರೀಕಿ ಜೀವಕ್ಕೆ ಅಪಾಯ ಇದೆ ಎಂದು ವಿರೋಧ ಪಕ್ಷಗಳ ಮುಖಂಡರು ಆಪಾದಿಸಿದ ಬಳಿಕ ಹ್ಯಾಕರ್‌ಗೆ ಭದ್ರತೆ ಒದಗಿಸಲಾಗಿತ್ತು. ಆದರೆ ಭದ್ರತಾ ಪೊಲೀಸರಿಗೂ ಆತನ ಚಲನ ವಲನಗಳ ಬಗ್ಗೆ ಮಾಹಿತಿ ಇಲ್ಲ. ಮಾದಕ ವಸ್ತು ಸೇವಿಸಿದ ಬಳಿಕ ಹೋಟೆಲ್ ಸಿಬ್ಬಂದಿಗೆ ಹೊಡೆದ ಆರೋಪದಲ್ಲಿ ಶ್ರೀಕಿ ವಿರುದ್ಧ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News