ಆಸ್ಟ್ರಿಯಾ: ಕೋವಿಡ್ ನಿರ್ಬಂಧ ವಿರೋಧಿಸಿ ಪ್ರತಿಭಟನಾ ರ್ಯಾಲಿ

Update: 2021-12-12 18:28 GMT
ಸಾಂದರ್ಭಿಕ ಚಿತ್ರ

ವಿಯೆನ್ನಾ, ಡಿ.12: ಕೊರೋನ ವಿರುದ್ಧದ ಲಸಿಕೆ ಕಡ್ಡಾಯಗೊಳಿಸಿರುವುದು, ಲಸಿಕೆ ಪಡೆಯದವರು ಮನೆಯಲ್ಲೇ ಕ್ವಾರಂಟೈನ್‌ನಲ್ಲಿರಬೇಕು ಎಂಬ ನಿಯಮ ಜಾರಿ ಸಹಿತ ಜಾರಿಗೊಳಿಸಿರುವ ಹಲವು ನಿರ್ಬಂಧಗಳನ್ನು ವಿರೋಧಿಸಿ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ಸಹಸ್ರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ದೈನಂದಿನ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರಿಯಾ ಕಳೆದ ತಿಂಗಳು ಲಾಕ್‌ಡೌನ್ ಅನ್ನು ಮತ್ತೆ ಜಾರಿಗೊಳಿಸಿದ್ದು ಈ ಕ್ರಮ ಕೈಗೊಂಡ ಪಶ್ಚಿಮ ಯುರೋಪ್‌ನ  ಪ್ರಥಮ ದೇಶವಾಗಿದೆ. ಅಲ್ಲದೆ ಫೆಬ್ರವರಿಯಿಂದ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸುವುದಾಗಿ ಸರಕಾರ ಘೋಷಿಸಿದೆ. ಇದಕ್ಕೆ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಕಳೆದ ವಾರವೂ ವಿಯೆನ್ನಾದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಸುಮಾರು 44,000 ಮಂದಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಶನಿವಾರದ ಪ್ರತಿಭಟನೆ ಸಂದರ್ಭ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು ಸುಮಾರು 1,400 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಪ್ರತಿಭಟನೆ ಸಂದರ್ಭ ಸುಡುಮದ್ದು ಬಳಕೆ, ಮಾಸ್ಕ್ ಧರಿಸುವ ನಿಯಮ ಉಲ್ಲಂಘನೆಗೆ ಸಂಬಂಧಿಸಿ 3 ಮಂದಿಯನ್ನು ಬಂಧಿಸಲಾಗಿದೆ. ಪ್ರತಿಭಟನಾ ರ್ಯಾಲಿಯ ವರದಿ ಮಾಡುತ್ತಿದ್ದ ಪತ್ರಕರ್ತರ ಮೇಲೆ ಹಿಮಗಡ್ಡೆಯ ಚೆಂಡಿನಿಂದ ದಾಳಿ ನಡೆಸಲಾಗಿದೆ . ಓರ್ವ ಪತ್ರಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಲಪಂಥೀಯ ಆಸ್ಟ್ರಿಯನ್ ಫ್ರೀಡಂ ಪಕ್ಷದ ಮುಖಂಡ ಹರ್ಬರ್ಟ್ ಕಿಕ್ಲ್, ತಮ್ಮ ಹಿಂಭಾಗಕ್ಕೆ ಸರಕಾರ ಒದೆದಿದೆ ಎಂಬುದು ಇನ್ನೂ ಜನತೆಗೆ ಅರಿವಾಗಿಲ್ಲ ಎಂದರು ಹಾಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಕ್ಲಾಗೆನ್ಫರ್ಟ್ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು 2,500 ಮಂದಿ, ಲಿಂರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ 150 ಮಂದಿ ಪಾಲ್ಗೊಂಡಿದ್ದರು. ಸುಮಾರು 8.9 ಮಿಲಿಯನ್ ಜನಸಂಖ್ಯೆ ಇರುವ ಆಸ್ಟ್ರಿಯಾದಲ್ಲಿ 1.2 ಮಿಲಿಯನ್ ಕೊರೋನ ಪ್ರಕರಣ ದಾಖಲಾಗಿದ್ದು 13,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News