ಉತ್ತರ ಪ್ರದೇಶದಲ್ಲಿ 6 ತಿಂಗಳು ಎಲ್ಲ ಮುಷ್ಕರ ನಿಷೇಧ

Update: 2021-12-20 02:18 GMT

ಲಕ್ನೋ: ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಸರ್ಕಾರ ಮುಂದಿನ ಆರು ತಿಂಗಳ ಕಾಲ ಎಲ್ಲ ಮುಷ್ಕರಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ದೇವೇಶ್ ಕುಮಾರ್ ಚತುರ್ವೇದಿ ಈ ಸಂಬಂಧ ರವಿವಾರ ಅಧಿಸೂಚನೆ ಹೊರಡಿಸಿದ್ದಾರೆ.

ಈ ಆದೇಶದ ಅನ್ವಯ ಯಾವುದೇ ಸರ್ಕಾರಿ ಸೇವೆ, ನಿಗಮಗಳು ಮತ್ತು ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಮುಷ್ಕರ ನಡೆಸುವಂತಿಲ್ಲ. ಇದನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಇದಕ್ಕೂ ಮುನ್ನ ಮೇ ತಿಂಗಳಲ್ಲಿ ಉತ್ತರ ಪ್ರದೇಶ ಸರ್ಕಾರ, ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ (ಎಸ್ಮಾ) ಹೇರಿ ಮುಷ್ಕರಗಳನ್ನು ನಿಷೇಧಿಸಿತ್ತು. ಎಸ್ಮಾ ಕಾಯ್ದೆಯಡಿ ಸರ್ಕಾರ ಮುಷ್ಕರ ನಿರತ ಅಥವಾ ಸಾಮಾನ್ಯ ಜನಜೀವನ ನಿರ್ವಹಿಸಲು ಅಗತ್ಯವಾದ ಸೇವೆಗಳನ್ನು ನಿರಾಕರಿಸುವ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ಎಸ್ಮಾ ಉಲ್ಲಂಘಿಸಿದವರನ್ನು ಪೊಲೀಸರು ಯಾವುದೇ ವಾರೆಂಟ್ ಇಲ್ಲೇ ಬಂಧಿಸಲು ಅವಕಾಶವಿದೆ. ಆಪಾದಿತರಿಗೆ ಒಂದು ವರ್ಷದ ವರೆಗೆ ಜೈಲು ಅಥವಾ 1000 ರೂಪಾಯಿ ದಂಡ, ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಮೇ ತಿಂಗಳಲ್ಲಿ ಹೊರಡಿಸಿದ ಆದೇಶದ ಅನ್ವಯ 2020ರ ನವೆಂಬರ್‌ವರೆಗೆ ಮುಷ್ಕರಗಳನ್ನು ನಿಷೇಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News