ವಿಶ್ವವಿದ್ಯಾನಿಲಯಗಳಲ್ಲಿ ಭ್ರಷ್ಟಾಚಾರ ಮತ್ತು ಕೋಮುವಾದ

Update: 2021-12-22 05:56 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತೀಯ ಜನತಾ ಪಕ್ಷ ಒಕ್ಕೂಟ ಸರಕಾರದ ಸೂತ್ರ ಹಿಡಿದ ನಂತರ ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರವಾಗಿ ರಾಜಕೀಯ ಹಸ್ತಕ್ಷೇಪ ನಡೆದಿದೆ. ಅದರಲ್ಲೂ ವಿಶ್ವ ವಿದ್ಯಾನಿಲಯಗಳಲ್ಲಿ ಮೊದಲಿನ ಅಕಾಡಮಿಕ್ ವಾತಾವರಣ ಉಳಿದಿಲ್ಲ. ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಿಯಾದ ಆರೆಸ್ಸೆಸ್ ತನ್ನ ವಿಭಜನಕಾರಿ ಕಾರ್ಯಸೂಚಿಯನ್ನು ಜಾರಿಗೆ ತರಲು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮನಬಂದಂತೆ ಬಳಸಿಕೊಳ್ಳುತ್ತಿದೆ. ಇದಕ್ಕೆ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಹಸ್ತಕ್ಷೇಪ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಮತ್ತು ಗೂಂಡಾ ದೌರ್ಜನ್ಯ ಜ್ವಲಂತ ಉದಾಹರಣೆಯಾಗಿದೆ.

ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡುವ ಅಧ್ಯಾಪಕರು ತಮ್ಮ ನೌಕರಿಗಳನ್ನು ಉಳಿಸಿಕೊಳ್ಳಲು, ಹಗರಣಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಸರಕಾರದ ಮಂತ್ರಿಗಳನ್ನು ಮಾತ್ರವಲ್ಲ ಆರೆಸ್ಸೆಸ್ ನಾಯಕರನ್ನು ಒಲೈಸುತ್ತಿರುವುದು ಗುಟ್ಟಿನ ಸಂಗತಿಯಲ್ಲ.ಇದಕ್ಕೆ ಇತ್ತೀಚಿನ ಉದಾಹರಣೆ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯ. ಈ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಬಸವರಾಜ ಡೋಣೂರ ಅವರು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತರಿಗೆ ಬರೆದರೆನ್ನಲಾದ ಪತ್ರ ಇದೀಗ ಬಹಿರಂಗವಾಗಿದೆ. ಈ ಪತ್ರದಲ್ಲಿ ಡೋಣೂರ ಅವರು ಮೋಹನ್ ಭಾಗವತರ ಭೇಟಿಗೆ ಸಮಯವನ್ನು ಕೇಳಿದ್ದಾರೆ. ಈ ರೀತಿ ಅವರು ದಿಢೀರನೇ ಪತ್ರ ಬರೆಯಲು ಕಾರಣ ಕಳೆದ ವರ್ಷ ವಿಶ್ವವಿದ್ಯಾನಿಲಯದ ಉಪನ್ಯಾಸಕರ ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಆರೋಪ. ಇದರಲ್ಲಿ ಡೋಣೂರ ನೇರವಾಗಿ ಆರೋಪಿಯಾಗಿದ್ದಾರೆ. ಈ ಹಗರಣದ ಆರೋಪದಿಂದ ಪಾರಾಗಲು ಅವರು ಭಾಗವತರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಹನ್ನೊಂದು ವರ್ಷಗಳ ಹಿಂದೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯ ಬಳಿ ಸ್ಥಾಪನೆಯಾದ ಈ ವಿಶ್ವವಿದ್ಯಾನಿಲಯ ಶೈಕ್ಷಣಿಕ ಗುಣಮಟ್ಟ, ಸಂಶೋಧನೆ, ಪಾರದರ್ಶಕ ಆಡಳಿತ, ಬೋಧನೆಗಳಿಗೆ ಹೆಸರಾಗಿತ್ತು. ಈಗ ಈ ವಿಶ್ವವಿದ್ಯಾನಿಲಯ ಭ್ರಷ್ಟಾಚಾರದ ಹಗರಣದಲ್ಲಿ ಸಿಲುಕಿದೆ.

ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಅಕ್ರಮ ನೇಮಕಾತಿ ಹಗರಣದ ಹಿನ್ನೆಲೆಯಲ್ಲಿ ಹಂಗಾಮಿ ರಿಜಿಸ್ಟ್ರಾರ್ ಬಸವರಾಜ ಡೋಣೂರ ಅವರು ಮೋಹನ್ ಭಾಗವತರಿಗೆ ಪತ್ರ ಬರೆದಿರುವುದು ಸಹಜವಾಗಿ ವಿವಾದಕ್ಕೆ ಕಾರಣವಾಗಿದೆ. ವಿಶ್ವವಿದ್ಯಾನಿಲಯಕ್ಕೂ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತರಿಗೂ ಏನು ಸಂಬಂಧ? ಇವರು ನಾಗಪುರಕ್ಕೆ ಹೋಗಿ ಅವರನ್ನೇಕೆ ಭೇಟಿಯಾಗಬೇಕು? ಇದಕ್ಕೆ ಡೋಣೂರ ಈ ವರೆಗೆ ಸ್ಪಷ್ಟೀಕರಣ ನೀಡಿಲ್ಲ.

ಡೋಣೂರ ಭಾಗವತರ ಜೊತೆಗಿನ ವೈಯಕ್ತಿಕ ಭೇಟಿಗಾಗಿ ವಿಶ್ವವಿದ್ಯಾನಿಲಯದ ಲೆಟರ್‌ಹೆಡ್ ಬಳಸಿದ್ದೇಕೆ? ಅಲ್ಲದೆ ವಿಶ್ವವಿದ್ಯಾನಿಲಯದ ಲೆಟರ್‌ಹೆಡ್ ದುರ್ಬಳಕೆಯಾದ ಬಗ್ಗೆ ಕುಲಪತಿ ಪ್ರೊ.ಬಿ. ಸತ್ಯನಾರಾಯಣ ಅವರು ಈವರೆಗೆ ಕ್ರಮ ಕೈಗೊಂಡಿಲ್ಲ ಏಕೆ? ಎಂಬ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ.

ಈ ಹಿಂದೆ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮತ್ತು ಅಸೋಸಿಯೇಟ್ ಪ್ರೊಫೆಸರ್ ಸ್ಥಾನಗಳಿಗೆ ಅಕ್ರಮವಾಗಿ ನೇಮಕ ಮಾಡಿಕೊಂಡ ಆರೋಪ ಕೇಳಿಬಂದಿತ್ತು. ಇದನ್ನು ಗಮನಿಸಿದ ವಿಶ್ವವಿದ್ಯಾನಿಲಯದ ಅತ್ಯುನ್ನತ ಆಡಳಿತವಾದ ಎಕ್ಸಿಕ್ಯೂಟಿವ್ ಕೌನ್ಸಿಲ್ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಲು ಕ್ರಮ ಕೈಗೊಂಡಿತು. ಹಿಂದಿನ ಕುಲಪತಿ ಮಹೇಶ್ವರಯ್ಯನವರು ಹುದ್ದೆಗೆ ನೇಮಕಗೊಂಡವರಿಗೆ ನೇಮಕಾತಿ ಪತ್ರ ನೀಡಲು ಎಕ್ಸಿಕ್ಯೂಟಿವ್ ಕೌನ್ಸಿಲ್ ಮತ್ತು ಕೇಂದ್ರ ಸರಕಾರ ಅವಕಾಶ ನೀಡಲಿಲ್ಲ. ಈಗ ನಾಗಪುರದ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತರಿಂದ ಒತ್ತಡ ತರಲು ಡೋಣೂರ ಪತ್ರ ಬರೆದಿರುವುದು ಸ್ಪಷ್ಟವಾಗುತ್ತದೆ.

 ಇದು ಕೇಂದ್ರೀಯ ವಿಶ್ವವಿದ್ಯಾನಿಲಯದ ಕತೆ ಮಾತ್ರವಲ್ಲ. ಹಂಪಿಯ ಪ್ರತಿಷ್ಠಿತ ಕನ್ನಡ ವಿಶ್ವವಿದ್ಯಾನಿಲಯದ ಹಗರಣಗಳೂ ಒಂದೊಂದಾಗಿ ಬಯಲಿಗೆ ಬರುತ್ತಿವೆ. ಕೃತಿ ಚೌರ್ಯದ ಆರೋಪ ಕೂಡ ಕೇಳಿ ಬರುತ್ತಿದೆ. ಇಷ್ಟೇ ಅಲ್ಲ ಕಳೆದ ಎರಡು ವರ್ಷಗಳಿಂದ ಸದರಿ ವಿಶ್ವವಿದ್ಯಾನಿಲಯಕ್ಕೆ ರಾಜ್ಯ ಸರಕಾರ ಅನುದಾನ ಸ್ಥಗಿತಗೊಳಿಸಿದ ಪರಿಣಾಮವಾಗಿ ಅಲ್ಲಿನ ಉಪನ್ಯಾಸಕರ ಸಂಬಳ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಶಿಷ್ಯವೇತನ ಸ್ಥಗಿತಗೊಂಡಿದೆ. ಆದರೆ ಎಲ್ಲ ವಿಶ್ವವಿದ್ಯಾನಿಲಯಗಳನ್ನು ವಶಪಡಿಸಿಕೊಂಡು ಕೋಮುವಾದದ ವಿಷ ಲೇಪನ ಮಾಡಲು ಸಂಘಪರಿವಾರದ ಹುನ್ನಾರಗಳು ನಡೆಯುತ್ತಲೇ ಇವೆ.

ರಾಜ್ಯದ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ ಸಂಘಪರಿವಾರದ ಅಂಗ ಸಂಘಟನೆಗಳಿಗೆ ಸೇರಿದವರನ್ನು ಸಿಂಡಿಕೇಟ್ ಮತ್ತು ಸೆನೆಟ್ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಇನ್ನು ಕೆಲ ವಿಶ್ವವಿದ್ಯಾಲಯಗಳಲ್ಲಿ ಭ್ರಷ್ಟಾಚಾರದ ಭಾರೀ ಹಗರಣಗಳು ನಡೆದರೂ, ಸರಕಾರಕ್ಕೆ ಗೊತ್ತಿದ್ದರೂ ಭ್ರಷ್ಟರು ಆರೆಸ್ಸೆಸ್ ಗುರಾಣಿಯನ್ನು ಬಳಸಿಕೊಳ್ಳುತ್ತಿರುವುದರಿಂದ ಭ್ರಷ್ಟರ ಮೇಲೆ ಸರಕಾರ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ಗಳಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮಾತಾಡಿಕೊಳ್ಳುತ್ತಾರೆ

ವಿಶ್ವವಿದ್ಯಾನಿಲಯಗಳು ಬಾಹ್ಯ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು. ಇದಕ್ಕಿಂತ ಮೊದಲು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯ ಮತ್ತು ಇತರ ವಿಶ್ವವಿದ್ಯಾನಿಲಯಗಳಲ್ಲಿ ನಡೆದಿದೆಯೆನ್ನಲಾದ ಹಗರಣಗಳಲ್ಲಿ ಕೋಮುವಾದಿ ಶಕ್ತಿಗಳ ಕೈವಾಡದ ಬಗ್ಗೆ ಸರಕಾರ ಪಾರದರ್ಶಕವಾದ ಕ್ರಮಕೈಗೊಳ್ಳಲು ಹಿಂದೆ ಮುಂದೆ ನೋಡಬಾರದು. ವಿಶ್ವವಿದ್ಯಾನಿಲಯಗಳು ಸ್ವಾಯತ್ತ ಸಂಸ್ಥೆಗಳು. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪೂರಕವಾದ ವಾತಾವರಣವನ್ನು ಅಲ್ಲಿ ಕಲ್ಪಿಸಬೇಕು. ಬಾಹ್ಯ ಹಸ್ತಕ್ಷೇಪಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು.

ಅಷ್ಟೇ ಅಲ್ಲ ವಿಶ್ವವಿದ್ಯಾಲಯಗಳಲ್ಲಿ ಪಾಠ ಮಾಡುವ ಉಪನ್ಯಾಸಕರ ನೇಮಕಗಳು ಅರ್ಹತೆಯನ್ನು ಆಧರಿಸಿ ನಡೆಯಬೇಕು. ಆದರೆ ಯುಜಿಸಿ ವೇತನ ಶ್ರೇಣಿ ಒಮ್ಮಿಂದೊಮ್ಮೆಲೇ ಜಾಸ್ತಿಯಾದ ನಂತರ ಅಲ್ಲಿನ ನೇಮಕಾತಿಗಳಲ್ಲಿ ಭ್ರಷ್ಟಾಚಾರದ ಗಬ್ಬು ವಾಸನೆ ಎಲ್ಲೆಡೆ ಹರಡುತ್ತಿದೆ. ಇದಕ್ಕೆ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಹಗರಣ ಒಂದು ಪ್ರತ್ಯಕ್ಷ ಉದಾಹರಣೆಯಾಗಿದೆ

ವಿಶ್ವವಿದ್ಯಾನಿಲಯಗಳ ಕುಲಪತಿಗಳ ನೇಮಕದಲ್ಲೂ ಭ್ರಷ್ಟಾಚಾರ ಮತ್ತು ಕೋಮುವಾದಿ ಸಂಘಟನೆಯೊಂದರ ಹಸ್ತಕ್ಷೇಪದ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ.ಇನ್ನು ಮುಂದೆ ಹೀಗಾಗದಂತೆ ಸರಕಾರ ನೋಡಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News