ಅಸ್ಸಾಂನಲ್ಲಿ ಅಕ್ರಮವಾಗಿ ಜಾನುವಾರು ಮಾರಾಟ ಮಾಡುವ ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಅವಕಾಶ !

Update: 2021-12-24 05:58 GMT
ಹಿಮಾಂತ ಬಿಸ್ವ ಶರ್ಮಾ

ಗುವಾಹತಿ: ಅಕ್ರಮವಾಗಿ ಜಾನುವಾರು ಮಾರಾಟ ಮಾಡುವ ಆರೋಪಿಗಳ ಮನೆ ಪ್ರವೇಶಿಸಿ, ತಪಾಸಣೆ ನಡೆಸಿ, ಕಳೆದ ಆರು ವರ್ಷಗಳಲ್ಲಿ ಅಕ್ರಮ ಜಾನುವಾರು ಮಾರಾಟದಿಂದ ಸಂಗ್ರಹಿಸಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡುವ ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆಯ ತಿದ್ದುಪಡಿ ಪ್ರಸ್ತಾವವನ್ನು ವಿಧಾನಸಭೆ ಗುರುವಾರ ಅಂಗೀಕರಿಸಿದೆ.

ವಿಧಾನ ಸಭೆಯಲ್ಲಿ ಕಾವೇರಿದ ಚರ್ಚೆಯ ನಡುವೆ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ, "ಕಾನೂನು ಬಾಹಿರವಾಗಿ ಜಾನುವಾರ ಮಾರಾಟ ಮಾಡಲು ಅಸ್ಸಾಂ ಅತ್ಯಂತ ಕಠಿಣ ರಾಜ್ಯ" ಎನ್ನುವ ಸಂದೇಶವನ್ನು ರವಾನಿಸಲು ಬಯಸುತ್ತೇನೆ ಎಂದು ಹೇಳಿದರು.

ಡಿಸೆಂಬರ್ 20ರಂದು ಮಂಡಿಸಿದ ಈ ಮಸೂದೆಯ ಬಗ್ಗೆ ಬಹುತೇಕ ವಿರೋಧ ಪಕ್ಷಗಳ ಸದಸ್ಯರ ವಿರೋಧವನ್ನು ವಾಪಾಸು ಪಡೆಯಲಾಯಿತು. ಆದರೆ ಪಕ್ಷೇತರ ಶಾಸಕ ಅಖಿಲ್ ಗೊಗೋಯ್ ಮಾತ್ರ ತಮ್ಮ ನಿಲುವಿಗೆ ಅಂಟಿಕೊಂಡು ಈ ಮಸೂದೆ ಅಸಂವಿಧಾನಿಕ ಮತ್ತು ಕೋಮು ಸ್ವರೂಪದ್ದು ಎಂದು ಪ್ರತಿಪಾದಿಸಿದರು.

ಕಳೆದ ಆಗಸ್ಟ್ 13ರಂದು ಅಸ್ಸಾಂ ಜಾನುವಾರು ಸಂರಕ್ಷಣಾ ಮಸೂದೆ-2021ನ್ನು ವಿಧಾನಸಭೆ ಆಂಗೀಕರಿಸಿತ್ತು. ಇದರ ಅನ್ವಯ ಹಿಂದೂ, ಜೈನರು ಮತ್ತು ಸಿಕ್ಖರು ಅಧಿಕವಾಗಿರುವ ಪ್ರದೇಶದಲ್ಲಿ ಅಥವಾ ದೇವಸ್ಥಾನಗಳು ಅಥವಾ ಸತ್ರಗಳು ಇರುವ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಗೋವಧೆ ಮತ್ತು ಗೋಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿತ್ತು.

ಇದೀಗ ಕಾಯ್ದೆಗೆ ಹೊಸ ಸೆಕ್ಷನ್ ಸೇರಿಸಲಾಗಿದ್ದು, ಇದರ ಅನ್ವಯ ತನಿಖಾಧಿಕಾರಿಗೆ ಆರೋಪಿಯ ಮನೆ ಪ್ರವೇಶಿಸಿ, ತಪಾಸಣೆ ಮತ್ತು ಶೋಧ ನಡೆಸಲು ಮತ್ತು ಆರೋಪಿಯನ್ನು ಬಂಧಿಸಲು ಅವಕಾಶ ನೀಡಲಾಗಿದೆ. ಜತೆಗೆ ಅಕ್ರಮ ಜಾನುವಾರು ಮಾರಾಟದಿಂದ ಬಂದ ಹಣದಲ್ಲಿ ಕಳೆದ ಆರು ವರ್ಷಗಳಲ್ಲಿ ಕ್ರೋಢೀಕರಿಸಿದ ಚರ ಮತ್ತು ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News