ಬ್ರಿಟನ್ ರಾಣಿಯನ್ನು ಹತ್ಯೆ ಮಾಡುವುದಾಗಿ ಘೋಷಿಸುವ ವೀಡಿಯೊ ವೈರಲ್: ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರ ತನಿಖೆ

Update: 2021-12-27 17:08 GMT
 ಬ್ರಿಟನ್‌ನ ರಾಣಿ ಎಲಿಜಬೆತ್‌(photo:PTI)

ಲಂಡನ್, ಡಿ.27:ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಬ್ರಿಟನ್‌ನ ರಾಣಿ ಎಲಿಜಬೆತ್‌ ರನ್ನು ಹತ್ಯೆ ಮಾಡುವುದಾಗಿ ಭಾರತ ಮೂಲದ ಸಿಖ್ ವ್ಯಕ್ತಿಯೊಬ್ಬ ಘೋಷಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸ್ನ್ಯಾಪ್‌ ಚಾಟ್‌ ನಲ್ಲಿ ಶೇರ್ ಆಗಿರುವ ವೀಡಿಯೊದಲ್ಲಿ ಮುಖವನ್ನು ಮಾಸ್ಕ್‌ ನಿಂದ ಮುಚ್ಚಿಕೊಂಡಿರುವ ವ್ಯಕ್ತಿಯೊಬ್ಬ ತನ್ನನ್ನು ಜಸ್ವಂತ್ ಸಿಂಗ್ ಚೈಲ್ ಎಂದು ಪರಿಚಯಿಸಿಕೊಂಡಿದ್ದು, 1919ರ ಜಲಿಯನ್ವಾಲಾ ಬಾಗ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಬ್ರಿಟನ್ ರಾಣಿ 2ನೇ ಎಲಿಜಬೆತ್‌ ರನ್ನು ಹತ್ಯೆ ಮಾಡಲು ಬಯಸುವುದಾಗಿ ಘೋಷಿಸಿದ್ದಾನೆ ಎಂದು ಸನ್ ದಿನಪತ್ರಿಕೆ ವರದಿ ಮಾಡಿದೆ. ನನ್ನನ್ನು ಕ್ಷಮಿಸಿ, ನಾನು ಏನು ಮಾಡಿದ್ದೇನೆ ಮತ್ತು ಮಾಡಲಿದ್ದೇನೆ ಎಂಬ ಬಗ್ಗೆಯೂ ಕ್ಷಮೆ ಇರಲಿ. ನಾನು ರಾಜಮನೆತನದ ರಾಣಿ ಎಲಿಜಬೆತ್‌ ರಮ್ಮಿ ಹತ್ಯೆ ಮಾಡಲು ಬಯಸಿದ್ದೇನೆ. ಎಂದು ಮಾಸ್ಕ್‌ ಧಾರಿ ವ್ಯಕ್ತಿ ಹೇಳಿದ್ದಾನೆ. 1991ರ ಜಲಿಯನ್ವಾಲಾ ಬಾಗ್ ಹತ್ಯಾಕಾಂಡಕ್ಕೆ ಇದು ಪ್ರತೀಕಾರವಾಗಿದೆ. ಅಲ್ಲದೆ ಜನಾಂಗದ ಆಧಾರದಲ್ಲಿ ಹತ್ಯೆಗೀಡಾದ, ಅವಮಾನಕ್ಕೆ ಒಳಗಾದ ಹಾಗೂ ತಾರತಮ್ಯಕ್ಕೆ ಒಳಗಾದ ಪ್ರಕರಣಕ್ಕೂ ಪ್ರತೀಕಾರವಾಗಿದೆ. ನಾನೋರ್ವ ಭಾರತೀಯ ಸಿಖ್. ನನ್ನ ಹೆಸರು ಜಸ್ವಂತ್ ಸಿಂಗ್ ಚೈಲ್ ಎಂದಾಗಿತ್ತು, ಈಗ ನನ್ನ ಹೆಸರು ಡಾರ್ತ್ ಜೋನ್ಸ್’ ಎಂದು ಆ ವ್ಯಕ್ತಿ ಹೇಳಿದ್ದಾನೆ.

ಈ ಮಧ್ಯೆ, 2 ದಿನದ ಹಿಂದೆ ಬರ್ಕ್‌ಶೈರ್‌ನ ವಿಂಡ್ಸರ್ ಕ್ಯಾಸಲ್ ಅರಮನೆಗೆ ಶಸ್ತ್ರ ಸಹಿತ ನುಗ್ಗಲು ಪ್ರಯತ್ನಿಸಿ ಬಂಧನಕ್ಕೆ ಒಳಗಾಗಿದ್ದ 19 ವರ್ಷದ ವ್ಯಕ್ತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದು ಮೆಟ್ರೊಪಾಲಿಟನ್ ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News