ಪ.ಬಂಗಾಳ: ಕಾಳಿ ಮೂರ್ತಿಗಳ ಧ್ವಂಸದ ಬಳಿಕ ಸ್ಥಳದಲ್ಲಿ ಉದ್ವಿಗ್ನತೆ: ʼಶಿಲ್ಪಿಯನ್ನೇʼ ಬಂಧಿಸಿದ ಪೊಲೀಸರು !

Update: 2023-05-08 05:58 GMT
Photo: indiatoday.in

ಕೊಲ್ಕತ್ತಾ: ಅಕ್ಟೋಬರ್ 24 ರಂದು ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್‌ನಲ್ಲಿ ಹಲವಾರು ಕಾಳಿ ದೇವಿಯ ವಿಗ್ರಹಗಳು ಧ್ವಂಸಗೊಂಡಿರುವುದು ಕಂಡುಬಂದಿದ್ದು, ಉದ್ವಿಗ್ನತೆ ಉಂಟಾಗಿದೆ. ನಂತರ ಶಿಲ್ಪಿಯೇ ವಿಗ್ರಹಗಳನ್ನು ಒಡೆದಿರುವುದು ಬೆಳಕಿಗೆ ಬಂದಿದೆ.

 
ದೀಪಾವಳಿ/ಕಾಳಿ ಪೂಜೆಯಂದು ಮುಕಂದಪುರ ಪ್ರದೇಶದಲ್ಲಿನ ಶಿಲ್ಪಿ ಪ್ರಭಾತ್ ಸರ್ದಾರ್ ಅವರ ಮೂರ್ತಿ ನಿರ್ಮಾಣದ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ರಾತ್ರಿ ಅವರ ವರ್ಕ್‌ಶಾಪ್‌ಗೆ ನುಗ್ಗಿ ಹಲವಾರು ವಿಗ್ರಹಗಳಿಗೆ ಹಾನಿ ಮಾಡಿದ್ದಾರೆ ಎಂದು ಸರ್ದಾರ್ ಆರೋಪಿಸಿದ್ದರು. ವಿಧ್ವಂಸಕತೆಯ ಸುದ್ದಿ ಸ್ಥಳೀಯರನ್ನು ಕೆರಳಿಸಿದ್ದು, ತಂಡೋಪತಂಡವಾಗಿ ಪ್ರದೇಶಕ್ಕೆ ಜಮಾಯಿಸತೊಡಗುತ್ತಿದ್ದಂತೆ ಉದ್ವಿಗ್ನತೆ ಉಂಟಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಸ್‌ಡಿಪಿಒ ನೇತೃತ್ವದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

 
ನಂತರ ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದ್ದು, ಸಾಕಷ್ಟು ಖರೀದಿದಾರರನ್ನು ಪಡೆಯಲು ಸಾಧ್ಯವಾಗದಾಗ, ಸರ್ದಾರ್ ಅವರೇ ವಿಗ್ರಹಗಳನ್ನು ಒಡೆದು ಹಾಕಿರುವುದು ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳು ಅಪರಾಧಿಯ ಪತ್ತೆಗೆ ಪೊಲೀಸರಿಗೆ ಸಹಾಯ ಮಾಡಿದೆ.
 
ವಿಚಾರಣೆ ನಡೆಸಿದಾಗ, ಸರ್ದಾರ್ ಕಾಳಿ ಪೂಜೆಗೆ ಮುನ್ನ ತನ್ನ ವಿಗ್ರಹಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂಬ ಸುದ್ದಿ ಹರಡಿದರೆ ತನ್ನ ಖ್ಯಾತಿ ಹಾಳಾಗುತ್ತದೆ ಎಂಬ ಭಯವಿತ್ತು ಎಂದು ಬಹಿರಂಗಪಡಿಸಿದ್ದಾರೆ. ಇದು ಅವರ ಭವಿಷ್ಯದ ವ್ಯವಹಾರದ ಮೇಲೂ ಪರಿಣಾಮ ಬೀರಲಿದೆ ಎಂದು ಅವರು ಆತಂಕಗೊಂಡಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅದಕ್ಕಾಗಿಯೇ ಅವರು ವಿಗ್ರಹಗಳನ್ನು ಹಾನಿ ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.


ಸರ್ದಾರ್ ಸೇರಿದಂತೆ ಮೂವರನ್ನು ಇಲ್ಲಿಯವರೆಗೆ ಬಂಧಿಸಲಾಗಿದೆ ಎಂದು ದಕ್ಷಿಣ 24 ಪರಗಣ ಪೊಲೀಸ್ ವರಿಷ್ಠಾಧಿಕಾರಿ ಧೃತಿಮಾನ್ ಸರ್ಕಾರ್ ಹೇಳಿದ್ದಾರೆ. ಯಾವುದೇ ವದಂತಿಗಳಿಗೆ ಜನರು ಗಮನ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News