ಹರ್ಯಾಣ: ಭೂಕುಸಿತದಿಂದ ಸಿಲುಕಿಕೊಂಡ ಹತ್ತಾರು ಗಣಿಗಾರಿಕೆ ವಾಹನಗಳು,ಹಲವರು ನಾಪತ್ತೆ ಶಂಕೆ

Update: 2022-01-01 17:09 GMT
ಸಾಂದರ್ಭಿಕ ಚಿತ್ರ

ಚಂಡಿಗಡ,ಜ.1: ಹರ್ಯಾಣದ ಭಿವಾನಿ ಜಿಲ್ಲೆಯ ಗಣಿಗಾರಿಕೆ ಪ್ರದೇಶದಲ್ಲಿ ಶನಿವಾರ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು,ಇತರ ಹಲವರು ಅವಶೇಷಗಳಡಿ ಸಿಕ್ಕಿಕೊಂಡಿರುವ ಭೀತಿ ವ್ಯಕ್ತವಾಗಿದೆ.

ತೋಷಮ್ ಬ್ಲಾಕ್‌ನ  ದಡಮ್ ಗಣಿಗಾರಿಕೆ ವಲಯದಲ್ಲಿ ಈ ದುರಂತ ಸಂಭವಿಸಿದ್ದು, ಜಿಲ್ಲಾಡಳಿತವು ಬಿರುಸಿನ ರಕ್ಷಣಾ ಕಾರ್ಯಚರಣೆಯನ್ನು ನಡೆಸುತ್ತಿದೆ.

ರಕ್ಷಣಾ ಕಾರ್ಯಾಚರಣೆ ಚುರುಕಿನಿಂದ ನಡೆಯುವಂತಾಗಲು ಮತ್ತು ಗಾಯಾಳುಗಳಿಗೆ ತಕ್ಷಣದ ನೆರವನ್ನು ಒದಗಿಸಲು ತಾನು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಟ್ವೀಟಿಸಿದ್ದಾರೆ.

ಭೂಕುಸಿತ ಸಂಭವಿಸಿದಾಗ ಕಾರ್ಮಿಕರು ಇನ್ನೊಂದು ಸ್ಥಳಕ್ಕೆ ತೆರಳುತ್ತಿದ್ದು,ತಮ್ಮ ವಾಹನಗಳೊಂದಿಗೆ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದರು.

ಕೃಷಿ ಸಚಿವ ಜೆ.ಪಿ.ದಲಾಲ್ ಅವರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದು, ಕೆಲವರು ಮೃತಪಟ್ಟಿದ್ದಾರೆ ಮತ್ತು ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಕಂಟ್ರಾಕ್ಟರ್ ಹೇಳಿರುವಂತೆ ಅವಶೇಷಗಳಡಿ ಇನ್ನೂ 3-4 ಜನರು ಸಿಕ್ಕಿಕೊಂಡಿರಬಹುದು ಎಂದು ತಿಳಿಸಿದರು.

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಪ್ರದೇಶದಲ್ಲಿ ಗಣಿಗಾರಿಕೆಯ ಮೇಲಿನ ನಿಷೇಧವನ್ನು ಹಿಂದೆಗೆದುಕೊಂಡ ಬಳಿಕ ದಡಮ್ ಗಣಿಗಾರಿಕೆ ಪ್ರದೇಶ ಮತ್ತು ಕಣಕ್ ಪಹಾಡಿಯಲ್ಲಿ ಭಾರೀ ಪ್ರಮಾಣದಲ್ಲಿ ಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿವೆ. ಮಾಲಿನ್ಯದಿಂದಾಗಿ ಹೇರಲಾಗಿದ್ದ ನಿಷೇಧವನ್ನು ಎರಡು ತಿಂಗಳುಗಳ ಬಳಿಕ ಗುರುವಾರ ಹಿಂದೆಗೆದುಕೊಳ್ಳಲಾಗಿದ್ದು, ಶುಕ್ರವಾರವಷ್ಟೇ ಗಣಿಗಾರಿಕೆ ಚಟುವಟಿಕೆಗಳು ಪುನರಾರಂಭಗೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News