ಮೊಬೈಲ್ ರೀಚಾರ್ಜ್, ಡಾಟಾ ಪ್ಯಾಕ್ ದರ ಹೆಚ್ಚಳ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ

Update: 2022-01-01 17:37 GMT

ಬೆಂಗಳೂರು, ಜ. 1: ಮೊಬೈಲ್ ಫೋನ್ ಪ್ರಿಪೇಯ್ಡ್ ರೀಚಾರ್ಜ್ ದರ ಅಸಮಂಜಸ ಹೆಚ್ಚಳವನ್ನು ತಕ್ಷಣವೇ ಹಿಂಪಡೆಯಬೇಕು. ಅತ್ಯಗತ್ಯ ಸೇವೆಯಾಗಿರುವ ಟೆಲಿಕಾಂ ವಲಯದ ಖಾಸಗಿಕರಣವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಓ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದರು.

ಶನಿವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಖಾಸಗಿ ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಡೆಸುತ್ತಿವೆ ಎಂದು ಆರೋಪಿಸಿದರು. ಅಲ್ಲದೆ, ಖಾಸಗಿ ಟೆಲಿಕಾಂ ಕಂಪೆನಿಗಳಲ್ಲಿ ಸಕ್ರಿಯ ಪಾತ್ರ ವಹಿಸಲು ಮತ್ತು ಮೊಬೈಲ್ ಬಳಕೆದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಟ್ರಾಯ್ ಮೂಕ ಪ್ರೇಕ್ಷಕರಾಗಿ ಉಳಿಯದೇ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಶರಣಪ್ಪ ಉದ್ಬಾಳ್, ಕೋವಿಡ್ ಹಿನ್ನೆಲೆಯಲ್ಲಿ ಸಾಮಾನ್ಯ ಜನರ ಆರ್ಥಿಕ ಸ್ಥಿತಿ ತೀವ್ರ ಸಂಕಷ್ಟದಲ್ಲಿದೆ. ಆದರೆ, ತಮ್ಮ ಲಾಭದಾಹಕ್ಕಾಗಿ ಖಾಸಗಿ ಟಿಲಿಕಾಂ ಕಂಪೆನಿಗಳು ಮೊಬೈಲ್ ರೀಚಾರ್ಜ್ ದರ ಹಾಗೂ ಡಾಟಾ ಪ್ಲಾನ್ ದರಗಳನ್ನು ವರ್ಷದಲ್ಲಿ ಪ್ರತಿಶತ ಶೇ.100ರಷ್ಟು ಹೆಚ್ಚಿಸಿವೆ. ಫೋನ್ ಮತ್ತು ಇಂಟರ್‍ನೆಟ್ ಮೇಲಿನ ಅವಲಂಬನೆಯು ಅಸಾಧಾರಣವಾಗಿ ಹೆಚ್ಚಾಗಿದೆ. ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರು ತಮ್ಮ ಜೀವನ ಮತ್ತು ಜೀವನೋಪಾಯಕ್ಕಾಗಿ ಮೊಬೈಲ್ ಬಳಕೆಯನ್ನು ಅಗಾಧವಾಗಿ ಅವಲಂಬಿಸಿದ್ದಾರೆ ಎಂದು ಗಮನ ಸೆಳೆದರು.

ಆನ್‍ಲೈನ್ ತರಗತಿಗಳು, ಆನ್‍ಲೈನ್ ಅಪ್ಲಿಕೇಶನ್‍ಗಳು, ಆನ್‍ಲೈನ್ ವಹಿವಾಟುಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈ ಎಲ್ಲವುಗಳಿಂದ ಮೊಬೈಲ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಸ್ಥಿತಿಯಲ್ಲಿ, ಏರ್‍ಟೆಲ್, ಜಿಯೋ, ವೊಡಾಫೋನ್ ಐಡಿಯಾ ಸೇರಿ ಎಲ್ಲ್ಲ ಮೊಬೈಲ್ ಕಂಪೆನಿಗಳು ನೆಟ್ ಪ್ಯಾಕ್ ಮತ್ತು ರೀಚಾರ್ಜ್ ದರಗಳನ್ನು ಶೇ.20ರಿಂದ 25ರ ವರೆಗೆ ಹೆಚ್ಚಿಸಿವೆ. ಇದು ಸಂಪೂರ್ಣ ಜನವಿರೋಧಿ ಎಂದು ಅವರು ಟೀಕಿಸಿದರು.

ಸೇವಾ ಪೂರೈಕೆದಾರರು ಮತ್ತು ಗ್ರಾಹಕರ ನಡುವೆ ತೀರ್ಪುಗಾರರ ಪಾತ್ರವನ್ನು ವಹಿಸಬೇಕಾದ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಸಂಪೂರ್ಣವಾಗಿ ಮೌನವಾಗಿರುವುದು ಆಘಾತಕಾರಿಯಾಗಿದೆ. ಈ ಕೂಡಲೇ ಟ್ರಾಯ್ ಮಧ್ಯ ಪ್ರವೇಶಿಸಿ ಖಾಸಗಿ ಟೆಲಿಕಾಂ ಕಪೆನಿಗಳ ಈ ಹಗಲು ದರೋಡೆಯನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಉಪಾಧ್ಯಕ್ಷ ವಿನಯ್ ಸಾರಥಿ ಮಾತನಾಡಿ, ಸಾರ್ವಜನಿಕ ಉದ್ಯಮವಾಗಿದ್ದ ಬಿಎಸ್‍ಎಲ್‍ಎಲ್ ದುರ್ಬಲಗೊಂಡ ನಂತರ, ಖಾಸಗಿ ಮೊಬೈಲ್ ಕಂಪೆನಿಗಳು ದೇಶದಲ್ಲಿ ಇಂಟರ್ ನೆಟ್ ಮತ್ತು ಮೊಬೈಲ್ ಸೇವಾ ಮಾರುಕಟ್ಟೆಯ ಗಣನೀಯ ಭಾಗದ ಮೇಲೆ ತಮ್ಮ ಬಿಗಿಹಿಡಿತ ಸಾಧಿಸಿವೆ. ಆದುದರಿಂದ ಈ ಖಾಸಗಿ ಮೊಬೈಲ್ ಕಂಪೆನಿಗಳು ಲಾಭ ಗಳಿಸಲು ತಮ್ಮ ಮೂಗಿನ ನೇರಕ್ಕೆ ದರಗಳನ್ನು ನಿಗದಿಮಾಡಿ, ಬಳಕೆದಾರರು ಅನಿವಾರ್ಯವಾಗಿ ಅಧಿಕ ಹಣ ಪಾವತಿಸುವಂತೆ ಮಾಡಿವೆ. ಕೂಡಲೇ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News