ಕೋವಿಡ್ ನಿಯಂತ್ರಣ ಕುರಿತು ಮಂಗಳವಾರ ತಜ್ಞರ ಜೊತೆ ಸಭೆ: ಸಿಎಂ ಬೊಮ್ಮಾಯಿ

Update: 2022-01-03 06:32 GMT

ಬೆಂಗಳೂರು, ಜ.3: 'ದೇಶದಲ್ಲಿ ಕೋವಿಡ್ ಹಾಗೂ ಒಮೈಕ್ರಾನ್ರ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ದೇಶಾದ್ಯಂತ, ರಾಜ್ಯದಲ್ಲಿ, ಅದೇರೀತಿ ನೆರೆಯ ರಾಜ್ಯಗಳಲ್ಲಿ ಕೋವಿಡ್, ಒಮೈಕ್ರಾನ್ ಬಹಳ ವೇಗವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ(ಜ.4) ತಜ್ಞರ ಜೊತೆ ಸಭೆ ನಡೆಸಿ ಚರ್ಚೆಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಈ ಕುರಿತು ಇಂದು ಬೆಳಗ್ಗೆ ತಮ್ಮ ಆರ್.ಟಿ.ನಗರದ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿರುವ ಬೊಮ್ಮಾಯಿ, ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಒಟ್ಟಾರೆ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಲಾಗುವುದು. ಎಲ್ಲ ವಿಚಾರಗಳನ್ನು ಸಂಪುಟ ಸಹೋದ್ಯೋಗಿಗಳ ಜೊತೆ ಚರ್ಚಿಸಿ ಸೋಂಕು ನಿಯಂತ್ರಣಕ್ಕೆ ದೀರ್ಘಾವಧಿ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಕೋವಿಡ್ ಮತ್ತು ಒಮಿಕ್ರಾನ್ ವೈರಸ್ ವೇಗವಾಗಿ ದೇಶ ಹಾಗೂ ರಾಜ್ಯಗಳಲ್ಲಿ ಹರಡುತ್ತಿದೆ. ಈ ಬಗ್ಗೆ  ತಜ್ಞರೊಂದಿಗೆ  ನಾಳೆ ಸಂಜೆ ಸಭೆ ನಡೆಸಿ ಚರ್ಚಿಸಲಾಗುವುದು. ಹಿಂದೆ ಎರಡು ಅಲೆಗಳನ್ನು ನಿಭಾಯಿಸಿರುವ  ಅನುಭವದ ಹಿನ್ನೆಲೆಯಲ್ಲಿ ಆದಷ್ಟೂ ಜನಜೀವನಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕರೊನಾ ನಿಯಂತ್ರಣಕ್ಕೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಬಗ್ಗೆ ಸೂಚನೆ ನೀಡುವಂತೆ ತಜ್ಞರಿಗೆ ಸೂಚನೆ ನೀಡಲಾಗಿದೆ ಎಂದರು. 

 ಜನತೆ ಸ್ವಯಂ ನಿಯಂತ್ರಣ ಹಾಕಿಕೊಂಡು, ಮಾಸ್ಕ್ ಧಾರಣೆ, ಅಂತರ ಕಾಯ್ದುಕೊಳ್ಳುವ  ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಸಿಎಂ ವಿನಂತಿ ಮಾಡಿದರು. 

ಪಾದಯಾತ್ರೆ : ಒಮೈಕ್ರಾನ್ ಭೀತಿಯ ನಡುವೆಯೂ  ಕಾಂಗ್ರೆಸ್ ಪಾದಯಾತ್ರೆ ಕೈಗೊಳ್ಳುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯ ಮಂತ್ರಿ, ಕಾಂಗ್ರೆಸ್ ನಡೆಯನ್ನು ಗಮನಿಸುತ್ತಿದ್ದು, ಸಾರ್ವತ್ರಿಕ ನಡವಳಿಕೆಯ ಬಗ್ಗೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News