ವರ್ಚುವಲ್ ರ‍್ಯಾಲಿ, ಆನ್‌ಲೈನ್ ಮತದಾನ: ಉತ್ತರಾಖಂಡ ಹೈಕೋರ್ಟ್ ಸಲಹೆ

Update: 2022-01-06 01:56 GMT
ಉತ್ತರಾಖಂಡ ಹೈಕೋರ್ಟ್

ಡೆಹ್ರಾಡೂನ್: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ವರ್ಚುವಲ್ ರ‍್ಯಾಲಿ ಆಯೋಜಿಸುವ ಮತ್ತು ಮತದಾರರು ಆನ್‌ಲೈನ್‌ನಲ್ಲಿ ಮತದಾನ ಮಾಡುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಉತ್ತರಾಖಂಡ ಹೈಕೋರ್ಟ್ ಭಾರತದ ಚುನಾವಣಾ ಆಯೋಗಕ್ಕೆ ಸಲಹೆ ನೀಡಿದೆ.

ಭವಿಷ್ಯದ ಎಲ್ಲ ಚುನಾವಣೆಗಳಿಗೂ ಆನ್‌ಲೈನ್ ಮತದಾನ ಮಾಡುವ ಸಾಧ್ಯತೆಯನ್ನು ಪರಿಶೀಲಿಸುವಂತೆಯೂ ಸೂಚಿಸಿದೆ. ಈ ಸಂಬಂಧ ಮುಂದಿನ ವಿಚಾರಣೆ ನಡೆಯುವ ಜನವರಿ 12ರ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಭಾರತದ ಚುನಾವಣಾ ಆಯೋಗಕ್ಕೆ ಸೂಚಿಸಲಾಗಿದೆ ಎಂದು ವಕೀಲ ಶೋಬಿತ್ ಸಹಾರಿಯಾ ಹೇಳಿದ್ದಾರೆ.

"ಉತ್ತರಾಖಂಡ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದೊಡ್ಡ ರ್ಯಾಲಿಗಳನ್ನು ನಿಷೇಧಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಭಾರತದ ಚುನಾವಣಾ ಆಯೋಗ ನಿರ್ದೇಶನ ನೀಡಲಿ. ವರ್ಚುವಲ್ ವಿಧಾನದಲ್ಲಿ ಪ್ರಚಾರ ಮಾಡುವ ಸಾಧ್ಯತೆಯ ಬಗ್ಗೆಯೂ ಪರಿಶೀಲಿಸಲಿ. ಅಂತೆಯೇ ಭವಿಷ್ಯದಲ್ಲಿ ಪರ್ಯಾಯವಾಗಿ ವರ್ಚುವಲ್ ಮತದಾನದ ಸಾಧ್ಯತೆಯನ್ನೂ ಪರಿಶೀಲಿಸುವಂತೆ ಮನವಿ ಮಾಡುತ್ತಿದ್ದೇವೆ. ಈ ಆದೇಶದ ಪ್ರತಿಯನ್ನು ಶೋಬಿತ್ ಸಹಾರಿಯಾ ಅವರಿಗೆ ನೀಡಲಾಗುತ್ತದೆ. ಸಂಬಂಧಪಟ್ಟವರಿಗೆ ಅವರು ಈ ಮಾಹಿತಿ ನೀಡಿ ಸೂಕ್ತ ಸೂಚನೆಗಳನ್ನು ಪಡೆಯಲಿ" ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಉತ್ತರಾಖಂಡದಲ್ಲಿ ಚುನಾವಣಾ ರ‍್ಯಾಲಿ ನಡೆಸಿದ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೋವಿಡ್-19 ಸೋಂಕಿಗೆ ತುತ್ತಾದ ಹಿನ್ನೆಲೆಯಲ್ಲಿ ಕೋರ್ಟ್ ಈ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸಂಜಯ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಅಲೋಕ್ ಕುಮಾರ್ ಶರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ಸಚ್ಚಿದಾನಂದ ದರ್ಬಾಲ್ ಎಂಬುವವರು ರಾಜ್ಯದ ಕೋವಿಡ್-19 ಸ್ಥಿತಿಗೆ ಸಂಬಂಧಿಸಿದ ಹಲವು ಐಪಿಎಲ್‌ಗಳ ವಿಚಾರಣೆ ವೇಳೆ ಅವರ ವಕೀಲ ಶಿವ ದತ್ ಅವರು ಮಾಡಿಕೊಂಡ ಮನವಿ ಹಿನ್ನೆಲೆಯಲ್ಲಿ ಕೋರ್ಟ್ ಈ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News