ಸರಕಾರದ ಅನುಭವದ ಕೊರತೆಗೆ ಜನಸಾಮಾನ್ಯರು ಬೆಲೆ ತೆರಬೇಕೇ?

Update: 2022-01-08 06:47 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಘೋಷಿಸಿರುವುದರಿಂದ ಜನಸಾಮಾನ್ಯರಲ್ಲಿ ಆಕ್ರೋಶ ಭುಗಿಲೆದ್ದಿದೆ. ವಾರದಲ್ಲಿ ಎರಡು ದಿನ ಕಫ್ಯೂ ವಿಧಿಸುವುದರಿಂದ ಕೊರೋನವನ್ನು ನಿವಾರಿಸಲು ಸಾಧ್ಯವಿಲ್ಲ ಎನ್ನುವುದು ಈಗಾಗಲೇ ಹಲವು ತಜ್ಞರು ಸ್ಪಷ್ಟಪಡಿಸಿದ್ದಾರಾದರೂ, ಅದಾವುದೋ ಲಾಬಿಗಳಿಗೆ ಮಣಿದು ವಾರಾಂತ್ಯ ಕರ್ಫ್ಯೂವನ್ನು ವಿಧಿಸಲು ಸರಕಾರ ಮುಂದಾಗಿದೆ. ಜನಸಾಮಾನ್ಯರು ‘ನಮಗೆ ಕೊರೋನದ ಭಯವಿಲ್ಲ, ಸರಕಾರ ಹೇರುತ್ತಿರುವ ಕರ್ಫ್ಯೂ ಕುರಿತಂತೆ ಭಯವಿದೆ’ ಎಂದು ಸಾರ್ವಜನಿಕವಾಗಿ ಸಿಟ್ಟನ್ನು ವ್ಯಕ್ತಪಡಿಸುತ್ತಿದ್ದಾರೆ. ಜನರ ಸಿಟ್ಟು ಸರಕಾರದೊಳಗಿರುವ ಸಚಿವರಿಗೂ ಮುಟ್ಟಿದಂತಿದೆ. ಇದೀಗ ಹಲವು ಸಚಿವರು ವೀಕೆಂಡ್ ಕರ್ಫ್ಯೂ ವಿರುದ್ಧ ಮಾತನಾಡತೊಡಗಿದ್ದಾರೆ. ಸರಕಾರದೊಳಗೆ ಈ ಕುರಿತಂತೆ ಭಿನ್ನಮತವೆದ್ದಿದೆ. ಸಚಿವ ಈಶ್ವರಪ್ಪ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಕೆಲವು ಕಡೆ ಕೊರೋನ ಜಾಸ್ತಿಯಾಗಿದೆ ಎಂದು ಇಡೀ ಕರ್ನಾಟಕಕ್ಕೆ ವೀಕೆಂಡ್ ಕರ್ಫ್ಯೂ ವಿಧಿಸಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ. ವೀಕೆಂಡ್ ಕರ್ಫ್ಯೂ ಘೋಷಿಸುವ ಮುನ್ನವೇ ರಾತ್ರಿ ಕರ್ಫ್ಯೂವನ್ನು ಹೇರಲಾಗಿತ್ತು. ಈ ರಾತ್ರಿ ಕರ್ಫ್ಯೂ ಅವೈಜ್ಞಾನಿಕ ಎಂದು ಈಗಾಗಲೇ ಹಲವು ಅಂತರ್‌ರಾಷ್ಟ್ರೀಯ ಮಟ್ಟದ ತಜ್ಞರು ಹೇಳಿಕೆ ನೀಡಿದ್ದಾರಾದರೂ, ರಾಜಕಾರಣಿಗಳು ಅದನ್ನು ಆಲಿಸುವುದಕ್ಕೆ ಸಿದ್ಧರಿಲ್ಲ. ಯಾವುದೋ ಒತ್ತಡಕ್ಕೆ ಬಲಿಯಾದವರಂತೆ ಪದೇ ಪದೇ ಕರ್ಫ್ಯೂವನ್ನು ಜನರ ಮೇಲೆ ಹೇರುತ್ತಾ ಜನರನ್ನು ಆರ್ಥಿಕವಾಗಿ ಇನ್ನಷ್ಟು ಶೋಷಣೆಗೀಡು ಮಾಡುತ್ತಿದ್ದಾರೆ.

ದೇಶಾದ್ಯಂತ ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಜನರು ಲಸಿಕೆ ಪಡೆದಿದ್ದಾರೆ. ಇದರ ಜೊತೆಗೆ, ಲಕ್ಷಾಂತರ ಮಂದಿಗೆ ಕೊರೋನ ಬಂದು ಹೋಗಿದೆ. ಈ ಮೂಲಕವೂ ಅವರು ಪ್ರತಿರೋಧ ಶಕ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಹೀಗಿದ್ದರೂ ಮತ್ತೆ ಮತ್ತೆ ಕೊರೋನದ ಹೆಸರಲ್ಲಿ ಲಾಕ್‌ಡೌನ್ ವಿಧಿಸುವುದಾಗಿದ್ದರೆ, ಜನರು ಲಸಿಕೆಗಳನ್ನು ಯಾಕಾದರೂ ಪಡೆದುಕೊಳ್ಳಬೇಕು ಎಂಬ ಪ್ರಶ್ನೆಯೆದ್ದಿದೆ. ಸದ್ಯ ಸರಕಾರ ಹೇರಿರುವ ಕರ್ಫ್ಯೂವನ್ನು ಎರಡು ರೀತಿಯಲ್ಲಿ ವಿಮರ್ಶಿಸಲಾಗುತ್ತಿದೆ. ಕಾಂಗ್ರೆಸ್ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆಯನ್ನು ದಮನಿಸುವುದಕ್ಕಾಗಿಯೇ ಈ ಕರ್ಫ್ಯೂವನ್ನು ಹೇರಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಒಂದು ವೇಳೆ ಇದು ನಿಜವೇ ಆಗಿದ್ದರೆ, ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಇಡೀ ರಾಜ್ಯದ ಜನತೆಗೆ ಕಿರುಕುಳವನ್ನು ನೀಡುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಏಳುತ್ತದೆ. ಇನ್ನೊಂದು ವಾದದ ಪ್ರಕಾರ ಅವಧಿ ಮೀರುತ್ತಿರುವ ಲಸಿಕೆಗಳನ್ನು ಜನರ ಮೇಲೆ ಹೇರುವುದಕ್ಕಾಗಿ, ಕೇಂದ್ರದಿಂದ ಲಾಕ್‌ಡೌನ್ ಬೆದರಿಕೆಯನ್ನು ಒಡ್ಡಲು ರಾಜ್ಯಗಳಿಗೆ ಒತ್ತಡ ಬರುತ್ತಿದೆ. ಕೇಂದ್ರದ ಒತ್ತಡವಿದ್ದುದರಿಂದಲೇ, ರಾಜ್ಯಗಳು ಪದೇ ಪದೇ ಲಾಕ್‌ಡೌನ್‌ಗಳಿಂದ ಜನರಿಗೆ ತೊಂದರೆ ನೀಡುತ್ತಿವೆೆ. ಇದೊಂದು ರೀತಿ ಬ್ಲಾಕ್‌ಮೇಲ್ ತಂತ್ರ ಎಂದು ತಜ್ಞರು ಆರೋಪಿಸುತ್ತಿದ್ದಾರೆ. ದೇಶದಲ್ಲಿ ಜನಸಾಮಾನ್ಯರು ‘ನಮಗೆ ಲಸಿಕೆ ಬೇಕು’ ಎಂದು ಸರಕಾರವನ್ನು ಒತ್ತಾಯಿಸುತ್ತಿಲ್ಲ. ಬದಲಿಗೆ ‘ನಮ್ಮನ್ನು ನಮ್ಮಷ್ಟಕ್ಕೇ ದುಡಿದು ಉಣ್ಣುವುದಕ್ಕೆ ಬಿಡಿ’ ಎಂದು ಕೇಳುತ್ತಿದ್ದಾರೆ. ಆದರೆ ಸರಕಾರ ಮಾತ್ರ, ‘ಲಸಿಕೆಯೇ ಜನರ ಇಂದಿನ ಬೇಡಿಕೆ’ ಎಂದು ಮಾಧ್ಯಮಗಳ ಮೂಲಕ ಬಿಂಬಿಸುತ್ತಿದೆ ಮತ್ತು ಅದಕ್ಕೆ ಪೂರಕವಾಗಿ ಲಾಕ್‌ಡೌನ್‌ನ್ನು ಬಳಸುತ್ತಿದೆ.

ಇದೇ ಸಂದರ್ಭದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ‘‘ಕೋವಿಡ್ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್ ಪರಿಹಾರವಲ್ಲ. ಇನ್ನು ಮುಂದೆ ರಾಜ್ಯದಲ್ಲಿ ಎಂದೂ ಲಾಕ್‌ಡೌನ್ ಜಾರಿ ಮಾಡುವುದಿಲ್ಲ. ಅನುಭವದ ಕೊರತೆಯಿಂದ ಲಾಕ್‌ಡೌನ್ ಜಾರಿಗೊಳಿಸಿದ್ದೆವು. ಇನ್ನು ಮುಂದೆ ಹಾಗಾಗುವುದಿಲ್ಲ’’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸರಕಾರ ಹೇರಿದ ಲಾಕ್‌ಡೌನ್‌ನಿಂದ ಸಾವಿರಾರು ಜನರು ನಷ್ಟಕ್ಕೀಡಾಗಿದ್ದಾರೆ. ಹಸಿವಿನಿಂದ ತತ್ತರಿಸಿದ್ದಾರೆ. ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಇದೀಗ ಬಿಜೆಪಿ ಸರಕಾರ ‘ಲಾಕ್‌ಡೌನ್ ಜಾರಿ ಮಾಡಿರುವುದು ಅನುಭವದ ಕೊರತೆಯಿಂದ’ ಎಂದು ಒಪ್ಪಿಕೊಂಡಿದೆ. ಈ ಅನುಭವದ ಕೊರತೆಗೆ ಈ ರಾಜ್ಯದ ಸಾವಿರಾರು ಜನರು ಬಲಿಯಾಗಿದ್ದಾರೆ. ಅವರಿಗಾದ ನಷ್ಟವನ್ನು ತುಂಬಿಸುವವರು ಯಾರು? ಸುದೀರ್ಘ ಲಾಕ್‌ಡೌನ್ ಕೊರೋನ ನಿಯಂತ್ರಣಕ್ಕೆ ಪರಿಹಾರವಲ್ಲ ಎಂದು ಆರೋಗ್ಯ ಸಚಿವರೇ ಒಪ್ಪಿಕೊಂಡಿರುವಾಗ, ವೀಕೆಂಡ್ ಕರ್ಫ್ಯೂ, ರಾತ್ರಿ ಕರ್ಫ್ಯೂನಿಂದ ಕೊರೋನವನ್ನು ತಡೆಯಲು ಹೇಗೆ ಸಾಧ್ಯ? ಸರಕಾರದ ಅನುಭವದ ಕೊರತೆಗೆ ಜನಸಾಮಾನ್ಯರು ಬಲಿಯಾಗಬೇಕೆ ಎಂಬ ಪ್ರಶ್ನೆಯನ್ನು ಜನರು ಬೀದಿಗಿಳಿದು ಕೇಳುವ ಸಮಯ ಬಂದಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ಲಾಕ್‌ಡೌನ್‌ನ್ನು ಬಳಸಿಕೊಳ್ಳುತ್ತಿದೆ.

ಇಂದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿಯೂ ಇಷ್ಟೊಂದು ಭೀಕರವಾಗಿರಲಿಲ್ಲ. ಚುನಾವಣೆಯ ಸಂದರ್ಭದಲ್ಲಿ, ರಾಜಕಾರಣಿಗಳ ರ್ಯಾಲಿಗಳ ಸಂದರ್ಭದಲ್ಲಿ ಇಲ್ಲದ ಕೊರೋನ, ಜನಸಾಮಾನ್ಯರು ದೈನಂದಿನ ದುಡಿಮೆಗಾಗಿ ಬೀದಿಗಿಳಿದಾಗ ಕಾಣಿಸಿಕೊಳ್ಳುವುದೇಕೆ ಎಂಬ ಪ್ರಶ್ನೆಗೆ ರಾಜಕಾರಣಿಗಳು ಉತ್ತರಿಸಲೇಬೇಕು. ಸರಕಾರದ ಬೇಜವಾಬ್ದಾರಿಯಿಂದ ಹೇರಲಾಗಿರುವ ಲಾಕ್‌ಡೌನ್‌ನಿಂದ ನಾಶ, ನಷ್ಟಕೀಡಾದ ಜನರಿಗೆ ಪರಿಹಾರವನ್ನು ನೀಡುವವರು ಯಾರು? ಈ ಪ್ರಶ್ನೆಗೆ ಜನರೇ ಸಂಘಟಿತರಾಗಿ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News