ಶಾಲೆ ಮುಚ್ಚಲು ತರಾತುರಿ ಬೇಡ

Update: 2022-01-13 10:49 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕಾಗಿ ಮಕ್ಕಳ ವ್ಯಾಸಂಗಕ್ಕೆ ಚೇತರಿಸಲಾಗದ ಪೆಟ್ಟು ಬಿದ್ದಿದೆ. ಈ ಸಲ ಮತ್ತೆ ಒಮೈಕ್ರಾನ್ ರೂಪದಲ್ಲಿ ಕೊರೋನ ಕಾಣಿಸಿಕೊಂಡಿದೆ. ದಿನದಿಂದ ದಿನಕ್ಕೆ ಸೋಂಕು ವ್ಯಾಪಿಸುತ್ತಿರುವುದರಿಂದ ಮತ್ತೆ ಶಾಲೆಗಳನ್ನು ಮುಚ್ಚಲು ರಾಜ್ಯ ಸರಕಾರ ಚಿಂತನೆ ನಡೆಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಎರಡು ವಾರಗಳ ಕಾಲ ಶಾಲೆಗಳನ್ನು ಮುಚ್ಚುವ ತೀರ್ಮಾನವನ್ನು ಈಗಾಗಲೇ ಕೈಗೊಳ್ಳಲಾಗಿದೆ. ವಿದ್ಯಾಗಮ ಪ್ರಾರಂಭಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಆತುರದ ತೀರ್ಮಾನ ಕೈಗೊಳ್ಳುವ ಮುನ್ನ ಕಳೆದ ಎರಡು ಬಾರಿ ವ್ಯಾಪಕವಾಗಿ ಕಾಣಿಸಿಕೊಂಡ ಕೋವಿಡ್ ಅನುಭವವನ್ನು ದೃಷ್ಟಿ ಯಲ್ಲಿಟ್ಟುಕೊಂಡು ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದರೆ ಸೂಕ್ತವಾಗುತ್ತಿತ್ತು.

'ಮನೆಯೆ ಮೊದಲ ಪಾಠಶಾಲೆ' ಎಂಬ ಗಾದೆಯ ಮಾತಿದ್ದರೂ ಬದಲಾದ ಸಾಮಾಜಿಕ ಸನ್ನಿವೇಶದಲ್ಲಿ ಶಾಲೆಯ ವ್ಯಾಸಂಗವೇ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಗೆ ಸೂಕ್ತ ಎಂಬುದು ಕೊರೋನ ಕಾಲಘಟ್ಟದ ಅನುಭವದಿಂದ ಸ್ಪಷ್ಟವಾಗಿದೆ.

ಶಾಲೆಗಳಲ್ಲಿ ಮಕ್ಕಳು ನಿರ್ದಿಷ್ಟ ಪಠ್ಯವನ್ನು ಗ್ರಹಿಸುತ್ತಾರೆ. ಇದರ ಜೊತೆಗೆ ತಮ್ಮ ಸಹಪಾಠಿಗಳನ್ನು ನೋಡಿ ಕಲಿಯುವ ಸ್ವಯಂ ಕಲಿಕೆಯೂ ಬೇಕಾದಷ್ಟಿರುತ್ತದೆ.ಮಕ್ಕಳ ಭವಿಷ್ಯದ ಸಾಮಾಜಿಕ ಬದುಕನ್ನು ರೂಪಿಸುವಲ್ಲಿ ಶಾಲಾ ಕಲಿಕೆ ಮಹತ್ವದ ಪಾತ್ರವನ್ನು ವಹಿಸುತ್ತದೆ. ವಿಭಿನ್ನವಾದ ಸಾಮಾಜಿಕ-ಸಾಂಸ್ಕೃತಿಕ ಹಿನ್ನೆಲೆಯ ಮಕ್ಕಳು ಒಂದೆಡೆ ಸೇರುವುದರಿಂದ ಮಕ್ಕಳಿಗೆ ಹೊಸ ಅನುಭವವನ್ನು ನೀಡುತ್ತದೆ.

ಬರೀ ಇದಷ್ಟೇ ಅಲ್ಲ. ಕಳೆದ ಎರಡು ವರ್ಷಗಳ ಕಾಲಾವಧಿಯಲ್ಲಿ ಕೊರೋನದಿಂದ ಬಹುತೇಕ ಶಾಲೆಗಳು ಮುಚ್ಚಿದ್ದರಿಂದ ಲಕ್ಷಾಂತರ ಮಕ್ಕಳ ಪೋಷಣೆ, ಪೌಷ್ಟಿಕತೆ ಸಮಸ್ಯೆ ತೀವ್ರಗೊಂಡು ಆರೋಗ್ಯದ ಮೇಲೆ ಪರಿಣಾಮ ಬೀರಿರುವುದು ಹಲವಾರು ಅಧ್ಯಯನ ವರದಿಗಳಿಂದ ತಿಳಿದು ಬಂದಿದೆ. ದೀರ್ಘಕಾಲ ಶಾಲೆಗಳು ಮುಚ್ಚಿದ್ದರಿಂದಾಗಿ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಕೌಟುಂಬಿಕ ದೌರ್ಜನ್ಯಗಳು, ಮಕ್ಕಳ ಭಿಕ್ಷಾಟನೆ ಮುಂತಾದವು ಹೆಚ್ಚಾಗಿರುವುದು ಅಧ್ಯಯನ ವರದಿಗಳಿಂದ ತಿಳಿದು ಬಂದಿದೆ.

ಕೊರೋನ ಕಾರಣಕ್ಕಾಗಿ ಶಾಲೆಗಳನ್ನು ಮುಚ್ಚಿದ್ದರಿಂದಾಗಿ ಬಹುತೇಕ ಮಕ್ಕಳಲ್ಲಿ ಅದರಲ್ಲೂ ಹಳ್ಳಿಗಾಡಿನ ತಳ ಸಮುದಾಯಗಳ ಕುಟುಂಬಗಳಿಗೆ ಸೇರಿದ ಮಕ್ಕಳ ಕಲಿಕೆಯ ಮೇಲೆ ದುಷ್ಪರಿಣಾಮ ಉಂಟಾಗಿದೆ. ಕೋವಿಡ್‌ಗೆ ಮೊದಲು ಶಾಲೆಗಳಲ್ಲಿ ಕಲಿತಿದ್ದ ಭಾಷಾ ಜ್ಞಾನ ಮತ್ತು ಗಣಿತವನ್ನು ಅವರು ಮರೆತಿದ್ದಾರೆ. ಮಕ್ಕಳು ರಚನಾತ್ಮಕ ಕಲಿಕೆಯ ಅವಕಾಶದಿಂದ ವಂಚಿತರಾದ ಕಾರಣಕ್ಕಾಗಿ ತೀವ್ರ ಸ್ವರೂಪದ ಶೈಕ್ಷಣಿಕ ಬಿಕ್ಕಟ್ಟು ಉಂಟಾಗಿದೆಯೆಂದು ಅಧ್ಯಯನ ವರದಿಗಳಿಂದ ತಿಳಿದು ಬಂದಿದೆ.

ಚಿಕ್ಕ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೂ ಕೂಡ ಶಾಲೆಗಳು ಅವಶ್ಯಕ. ಶಾಲೆಗಳಲ್ಲಿ ಗೆಳೆಯರ ಜೊತೆಗಿನ ಒಡನಾಟ ಮಕ್ಕಳನ್ನು ಚೈತನ್ಯಶೀಲರನ್ನಾಗಿ ಮಾಡುತ್ತದೆ. ಶಾಲೆಗಳು ಕೊಡುವ ಖುಷಿಯನ್ನು ಆನ್‌ಲೈನ್ ತರಗತಿಗಳು ಕೊಡುವುದಿಲ್ಲ ಎಂಬುದು ಅಧ್ಯಯನ ವರದಿಗಳಿಂದ ಸ್ಪಷ್ಟವಾಗಿದೆ. ಮಕ್ಕಳನ್ನು ಮಾನಸಿಕವಾಗಿ, ದೈಹಿಕವಾಗಿ ಕ್ರಿಯಾಶೀಲರನ್ನಾಗಿ ಮಾಡಲು ಶಾಲಾ ತರಗತಿಗಳು ಮಾತ್ರವಲ್ಲ, ಶಾಲಾ ಬಯಲಿನಲ್ಲಿ ನಡೆಯುವ ಕ್ರೀಡಾ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯ. ಮನೆಯಲ್ಲಿ ನಾಲ್ಕು ಗೋಡೆಗಳ ನಡುವೆ ಆ ಖುಷಿ ಸಿಗುವುದಿಲ್ಲ.

 ದೀರ್ಘ ಕಾಲ ಕಲಿಕೆಯಿಂದ ಮಕ್ಕಳು ವಂಚಿತರಾದರೆ ಕಲಿಕಾ ಅಭ್ಯಾಸಗಳು ಮರೆತು ಹೋಗುತ್ತವೆ. ನಿರಂತರ ಓದುವುದು, ಬರೆಯುವುದು ಹಾಗೂ ಇತರ ಮೂಲ ಕೌಶಲಗಳನ್ನು ಆಲಿಸುವುದು ತಪ್ಪಿಹೋಗಿ ಕಲಿಕೆಯಲ್ಲಿ ನಿರಾಸಕ್ತಿ ಮೂಡುತ್ತದೆ ಎಂದು ಕಳೆದ ವರ್ಷ ಶಾಲಾ ಪುನರಾರಂಭದ ನಂತರ ನಡೆದ ಅಧ್ಯಯನದಿಂದ ತಿಳಿದು ಬಂದಿದೆ.

ಕಳೆದ ಎರಡು ವರ್ಷಗಳ ಕಾಲಾವಧಿಯಲ್ಲಿ ಕೋವಿಡ್‌ನಿಂದ ಮಕ್ಕಳ ಸಾವು, ನೋವುಗಳು ಸಂಭವಿಸಿರುವುದು ಅತ್ಯಂತ ಕಡಿಮೆಯೆಂಬುದು ಅಧ್ಯಯನ ವರದಿಗಳಿಂದ ತಿಳಿದು ಬಂದಿದೆ. ಸಾರ್ವಜನಿಕ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸೋಂಕು ಹಬ್ಬುವುದನ್ನು ತಡೆದು ಶಾಲೆಗಳನ್ನು ಮುಚ್ಚದೇ ನಡೆಸಿಕೊಂಡು ಹೋಗಬಹುದಾಗಿದೆ. ಆಕಸ್ಮಿಕವಾಗಿ ಯಾವುದೇ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೆ ಅವರನ್ನು ಉಳಿದವರಿಂದ ಪ್ರತ್ಯೇಕಿಸಿ ಚಿಕಿತ್ಸೆ ಮಾಡಬಹುದಾಗಿದೆ. ಈ ಎಲ್ಲ ಅಂಶಗಳನ್ನು ಕಡೆಗಣಿಸಿ ಶಾಲೆಗಳನ್ನು ಮುಚ್ಚುವ ತೀರ್ಮಾನ ಅವೈಜ್ಞಾನಿಕ ಮಾತ್ರವಲ್ಲ ಸರಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ.
ಸೋಂಕು ಹರಡುವ ಕಾರಣ ಮುಂದೆ ಮಾಡಿ ಶಾಲೆಗಳನ್ನು ಮುಚ್ಚುವುದು ಸರಿಯಲ್ಲ. ಜಗತ್ತಿನ ಇತರ ದೇಶಗಳಲ್ಲಿ ಕೊರೋನ ಇದ್ದರೂ ಶಾಲೆಗಳನ್ನು ಮುಚ್ಚದೆ ತೆರೆಯುವುದಕ್ಕೆ ಆದ್ಯತೆ ನೀಡಲಾಗಿದೆ.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕಲಿಯುವ ಬಹುತೇಕ ಮಕ್ಕಳು ಸುರಕ್ಷಿತ ರಾಗಿದ್ದಾರೆ ಎಂಬುದು ದೃಢ ಪಟ್ಟಿದೆ. ಈ ಶಾಲೆಗಳಲ್ಲಿ ಬಿಸಿಯೂಟವನ್ನು ತುರ್ತಾಗಿ ನೀಡಬೇಕು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಒಣ ಪಡಿತರ ನೀಡುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ. ಶಾಲೆಗಳಲ್ಲಿ ನೀಡುವ ಬಿಸಿಯೂಟವು ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ನಿವಾರಿಸಿ ಅವರ ಆರೋಗ್ಯವನ್ನು ಕಾಪಾಡುತ್ತದೆ. ಶಾಲೆ ತೆರೆಯುವ ಇಲ್ಲವೇ ಮುಚ್ಚುವ ತೀರ್ಮಾನವನ್ನು ಜಿಲ್ಲಾ ಪಂಚಾಯತ್ ಹಂತದ ಸ್ಥಳೀಯ ಆಡಳಿತ ವ್ಯವಸ್ಥೆ ಹಾಗೂ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳು ಕೈಗೊಳ್ಳಬೇಕೇ ಹೊರತು ವಿಧಾನಸೌಧದಲ್ಲಿ ಕುಳಿತವರು ಅಲ್ಲ.

ಕೋವಿಡ್ ನೆಪದಲ್ಲಿ ಶಾಲೆಗಳನ್ನು ಮುಚ್ಚುವುದು ಮಕ್ಕಳ ಕಲಿಕೆಗೆ ಮಾತ್ರವಲ್ಲ ಅವರ ಸರ್ವತೋಮುಖ ಏಳಿಗೆಯ ಮೇಲೆ ಅತ್ಯಂತ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಸರಕಾರ ಈ ಬಗ್ಗೆ ಮರು ವಿಮರ್ಶೆ ಮಾಡಿ ನೈರ್ಮಲ್ಯೀಕರಣದಂತಹ ಸೂಕ್ತವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶಾಲೆಗಳಲ್ಲಿ ಸಮರ್ಪಕವಾದ ನೀರಿನ ಸೌಲಭ್ಯ ಕಲ್ಪಿಸಬೇಕು. ಸಾಬೂನು, ಸ್ಯಾನಿಟೈಸರ್ ಮತ್ತು ಮುಖಗವಸಿನಂತಹ ಸಂಪನ್ಮೂಲಗಳನ್ನು ಒದಗಿಸಿ, ಚೆನ್ನಾಗಿ ಗಾಳಿ, ಬೆಳಕು ಬರುವ ಕೋಣೆಗಳಲ್ಲಿ ತರಗತಿಗಳನ್ನು ನಡೆಸುವ ವ್ಯವಸ್ಥೆ ಮಾಡಿ ಶಾಲೆಗಳನ್ನು ನಡೆಸಬೇಕು. ಪರಿಸ್ಥಿತಿ ತೀರ ಉಲ್ಬಣಿಸಿದರೆ ಮಾತ್ರ ಶಾಲೆ ಮುಚ್ಚುವ ಬಗ್ಗೆ ಯೋಚಿಸಬೇಕು.ಆದರೆ ಯಾವುದೇ ಆತುರದ ತೀರ್ಮಾನವನ್ನು ಈಗ ಕೈಗೊಳ್ಳುವುದು ಸೂಕ್ತವಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News