ಮಧ್ಯಪ್ರದೇಶ: 2.5 ಲಕ್ಷ ಕೋಟಿ ಸಾಲದ ಹೊರೆಯ ನಡುವೆ 2 ಸಾವಿರ ಕೋಟಿ ವೆಚ್ಚದ ಪುತ್ಥಳಿ ಸ್ಥಾಪನೆ!

Update: 2022-01-11 02:02 GMT

ಭೋಪಾಲ್: 2.5 ಲಕ್ಷ ಕೋಟಿ ಸಾಲದ ಹೊರೆ ಹೊಂದಿರುವ ಮಧ್ಯಪ್ರದೇಶ ಸರ್ಕಾರ ಇದೀಗ 2000 ಕೋಟಿ ರೂಪಾಯಿ ವೆಚ್ಚದಲ್ಲಿ ಆದಿ ಶಂಕರರ ಪ್ರತಿಮೆ ಸ್ಥಾಪನೆಗೆ ಮುಂದಾಗಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

108 ಅಡಿ ಎತ್ತರದ ಪ್ರತಿಮೆ ಸ್ಥಾಪನೆ ಸಂಬಂಧ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಈಗಾಗಲೇ ಆಚಾರ್ಯ ಶಂಕರ ಸಂಸ್ಕೃತ ಏಕತಾ ನ್ಯಾಸ್ ಟ್ರಸ್ಟಿಗಳ ಜತೆ ಚರ್ಚೆ ನಡೆಸಿದ್ದಾರೆ. ಸ್ವಾಮಿ ಅವೆಧಾಶಾನಂದ ಮಹಾರಾಜ್ ಸೇರಿದಂತೆ ಟ್ರಸ್ಟ್ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಯೋಜನೆಯ ಬಗ್ಗೆ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಸಂದೇಹ ವ್ಯಕ್ತಪಡಿಸಿದ್ದು, ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಮಂಜೂರು ಮಾಡಿದ ಬಳಿಕವಷ್ಟೇ ಈ ಬಗ್ಗೆ ಚರ್ಚಿಸುವುದಾಗಿ ಪ್ರತಿಕ್ರಿಯಿಸಿದೆ.

ಓಕಾಂರೇಶ್ವರದಲ್ಲಿ 108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆ ಮತ್ತು ಅಂತರರಾಷ್ಟ್ರೀಯ ವೇದಾಂತ ಸಂಸ್ಥಾನ ನಿರ್ಮಾಣವು ರಾಜ್ಯ ಹಾಗೂ ವಿಶ್ವದ ನಡುವೆ ಸಂಪರ್ಕ ಸೇತುವಾಗಲಿದೆ ಎಂದು ಮುಖ್ಯಮಂತ್ರಿ ಈ ಯೋಜನೆ ಬಗ್ಗೆ ವಿವರ ನೀಡಿದ್ದಾರೆ.

ಈ ಏಕತೆಯ ಪ್ರತಿಮೆ 108 ಅಡಿ ಎತ್ತರದ್ದಾಗಿದ್ದು, 54 ಅಡಿಯ ಪ್ಲಾಟ್‌ ಫಾರಂನಲ್ಲಿ ಸ್ಥಾಪಿಸಲಾಗುತ್ತದೆ. ಮಂಧಾತಾ ಪರ್ವತದ 7.5 ಹೆಕ್ಟೇರ್ ಪ್ರದೇಶದಲ್ಲಿ ಪ್ರತಿಮೆ ಹಾಗೂ ಶಂಕರ ಮ್ಯೂಸಿಯಂ ಸ್ಥಾಪಿಸಲಾಗುತ್ತದೆ. ನರ್ಮದಾ ನದಿಯ ತಟದ 5 ಹೆಕ್ಟೇರ್ ಜಾಗದಲ್ಲಿ ಗುರುಕುಲಮ್ ಮತ್ತು 10 ಹೆಕ್ಟೇರ್ ಪ್ರದೇಶದಲ್ಲಿ ಆಚಾರ್ಯ ಶಂಕರ ಅಂತರರಾಷ್ಟ್ರೀಯ ಅದ್ವೈತ ವೇದಾಂತ ಸಂಸ್ಥಾನವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ರಾಜ್ಯದ ಒಟ್ಟು ಬಜೆಟ್ ಗಾತ್ರ 2.41 ಲಕ್ಷ ಕೋಟಿ ಆಗಿದ್ದು, ಈಗಾಗಲೇ 2.56 ಲಕ್ಷ ಕೋಟಿ ರೂಪಾಯಿ ಸಾಲದಲ್ಲಿ ರಾಜ್ಯ ಸರ್ಕಾರ ಸಿಲುಕಿಕೊಂಡಿದೆ. ರಾಜ್ಯದ ಜನತೆಯ ತಲಾ ಸಾಲ ಸುಮಾರು 34 ಸಾವಿರ ರೂಪಾಯಿ ಆಗಿದೆ. ಸಾಲದ ಬಗ್ಗೆ ಶ್ವೇತಪತ್ರ ಮಂಡಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.

ಏತನ್ಮಧ್ಯೆ ಈ ಬಗ್ಗೆ ಪ್ರತಿಕ್ರಿಸಿರುವ ವಿರೋಧ ಪಕ್ಷದ ನಾಯಕ ಕಮಲ್‌ ನಾಥ್, ಯೋಜನೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ. ಬಜೆಟ್‌ನಲ್ಲಿ ಈ ಯೋಜನೆಗೆ ಹಣ ಹಂಚಿಕೆ ಮಾಡಿದಾಗ ಆ ಬಗ್ಗೆ ಚರ್ಚಿಸೋಣ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News