ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ನಿಂದನೆ: ಪಕ್ಷಾತೀತವಾಗಿ ಸಮಸ್ಯೆ ಪರಿಹಾರವಾಗಬೇಕು ಎಂದ ಸ್ಮೃತಿ ಇರಾನಿ

Update: 2022-01-11 08:09 GMT
ಕೇಂದ್ರ ಸಚಿವೆ ಸ್ಮೃತಿ ಇರಾನಿ (PTI)

ಹೊಸದಿಲ್ಲಿ: ಮಹಿಳೆಯರು ಅವರು ಯಾವುದೇ ಧರ್ಮದವರಿರಲಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಘನತೆಯನ್ನು ನಿರಾಕರಿಸಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರಲ್ಲದೆ ಈ ಸಮಸ್ಯೆ ಪರಿಹರಿಸಲು ಪಕ್ಷಾತೀತವಾಗಿ ಜನರು ಮುಂದೆ ಬರಬೇಕು ಎಂದು ಹೇಳಿದರು ಎಂದು The Indian Express ವರದಿ ಮಾಡಿದೆ.

'ಬುಲ್ಲಿ ಬಾಯ್' ಆ್ಯಪ್ ಮುಖಾಂತರ ಮುಸ್ಲಿಂ ಮಹಿಳೆಯರನ್ನು ಗುರಿ ಮಾಡಲಾದ ಪ್ರಕರಣದ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸುತ್ತಿದ್ದರು. 

ಅಂತರ್ಜಾಲದಲ್ಲಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುವ ಕುರಿತಂತೆ ಐಟಿ ಸಚಿವಾಲಯ ಹಾಗೂ ಟೆಲಿಕಮ್ಯುನಿಕೇಶನ್ಸ್ ಇಲಾಖೆಯ ಜತೆ ತಾವು ಶ್ರಮಿಸುತ್ತಿರುವುದಾಗಿಯೂ ಅವರು ತಿಳಿಸಿದರು.

"ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿನ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂಬ ಬಗ್ಗೆ ನನಗೆ ಖಂಡಿತ ನಂಬಿಕೆಯಿದೆ. ಶಿಕ್ಷೆಯಾಗಬೇಕೆಂದು ನನ್ನ ಆಸೆ ಕೂಡ,'' ಎಂದು ಅವರು ಹೇಳಿದ್ದಾರೆ.

ಪೋರ್ನೋಗ್ರಾಫಿ ಅಥವಾ ಅಶ್ಲೀಲತೆಯು ಯುವಜನತೆಯ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮ ಉಂಟು ಮಾಡುತ್ತಿದೆ ಎಂಬ ಕುರಿತು ಗಂಭೀರವಾಗಿ ಚಿಂತಿಸಬೇಕಿದೆ ಎಂದು ಅವರು ಹೇಳಿದರು.

ಪ್ರಧಾನಿಯ ಭದ್ರತಾ ಲೋಪ ಪ್ರಕರಣ ಕುರಿತಂತೆ ಬ್ಯಾಡ್ಮಿಂಟನ್ ತಾರೆ ನೈನಾ ನೆಹ್ವಾಲ್ ಮಾಡಿದ ಟ್ವೀಟ್ ಒಂದಕ್ಕೆ ಕುಚೋದ್ಯಕರವಾಗಿ ಹಾಗೂ ನಿಂದನಾತ್ಮಕವಾಗಿ ನಟ ಸಿದ್ಧಾರ್ಥ್ ಪ್ರತಿಕ್ರಿಯಿಸಿದ ವಿಚಾರದ ಕುರಿತೂ ಮಾತನಾಡಿದ ಸ್ಮೃತಿ ಇರಾನಿ, "ನೆಹ್ವಾಲ್ ಅವರು ಒಂದು ಅಭಿಪ್ರಾಯ ಹೊಂದಿದ್ದರು. ಅದಕ್ಕಾಗಿ ಅವರನ್ನು ನಿಂದಿಸಲಾಗಿದೆ. ಇಂತಹ ಪುರುಷರಿಗೂ ಶಿಕ್ಷೆಯಾಗಬೇಕಲ್ಲವೇ?'' ಎಂದು ಅವರು ಕೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News