ತ್ರಿಪುರಾ ಹಿಂಸಾಚಾರ : ಸಾಮಾಜಿಕ ಹೋರಾಟಗಾರನ ಟ್ವೀಟ್‌ಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸುಪ್ರೀಂ ಸೂಚನೆ

Update: 2022-01-11 17:56 GMT

ಹೊಸದಿಲ್ಲಿ, ಜ. 11:  ತ್ರಿಪುರಾದಲ್ಲಿ ಕಳೆದ ವರ್ಷ ನಡೆದ ಕೋಮು ಗಲಭೆ ಕುರಿತು ಸಾಮಾಜಿಕ ಹೋರಾಟಗಾರ ಸಮಿವುಲ್ಲಾ ಶಬ್ಬೀರ್ ಖಾನ್ ಅವರು ಮಾಡಿದ ಟ್ವೀಟ್‌ಗಳ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸುಪ್ರೀಂ ಕೋರ್ಟ್ ಸೋಮವಾರ ತ್ರಿಪುರಾ ಪೊಲೀಸರಿಗೆ ನಿರ್ಬಂಧ ವಿಧಿಸಿದೆ. ಖಾನ್ ಅವರ ಮನವಿಯ ಹಿನ್ನೆಲೆಯಲ್ಲಿ ನೋಟಿಸು ಜಾರಿ ಮಾಡಿರುವ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ ಹಾಗೂ ಎ.ಎಸ್. ಬೋಪಣ್ಣ ಅವರನ್ನು ಒಳಗೊಂಡ ಪೀಠ, ನ್ಯಾಯಾಲಯದ ಅನುಮತಿ ಇಲ್ಲದೆ ಅವರ ಟ್ವೀಟ್ ಅನ್ನು ಅಳಿಸುವಂತೆ ಟ್ವಿಟರ್‌ಗೆ ಹೇಳಬಾರದು. ತನಿಖೆಗೆ ಅವರ ಐಪಿ ವಿಳಾಸ ಹಾಗೂ ದೂರುವಾಣಿ ಸಂಖ್ಯೆಯನ್ನು ನೀಡುವಂತೆ ಸೂಚಿಸಬಾರದು ಎಂದು ರಾಜ್ಯ ಪೊಲೀಸ್‌ನ ಸೈಬರ್ ಸೆಲ್‌ಗೆ ನಿರ್ದೇಶಿಸಿದೆ.

ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳು ಹಾಗೂ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ಪ್ರಕರಣಗಳನ್ನು ದಾಖಲಿಸಿರುವುದನ್ನು ಉಲ್ಲೇಖಿಸಿ ತ್ರಿಪುರಾ ಪೊಲೀಸ್ ಕ್ರೈಮ್ ಬ್ರಾಂಚ್‌ನ ಪೊಲೀಸ್ ಅಧೀಕ್ಷಕ (ಸೈಬರ್ ಕ್ರೈಮ್)ರು 2021 ನವೆಂಬರ್ 22ರಂದು ಸಂವಹನ ನಡೆಸಿರುವ ಬಗ್ಗೆ ಟ್ವಿಟ್ಟರ್ ಖಾನ್‌ಗೆ ನೀಡಿದ ನೋಟಿಸಿನಲ್ಲಿ ತಿಳಿಸಿದೆ ಎಂದು ನ್ಯಾಯವಾದಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ನಿರ್ದಿಷ್ಟ ಟ್ವೀಟರ್ ಖಾತೆಯ ಅಂಶವನ್ನು ಅಳಿಸುವಂತೆ, ಅವರ ಬಳಕೆದಾರರು ಹಾಗೂ ಅವರ ಬ್ರೌಸಿಂಗ್ ಮಾಹಿತಿ ಹಾಗೂ ಫೋನ್ ಸಂಖ್ಯೆಯನ್ನು ಒದಗಿಸುವಂತೆ ತಮಗೆ ಪೊಲೀಸ್ ಅಧೀಕ್ಷರು ಸೂಚಿಸಿದ್ದರು ಎಂದು ಟ್ವಿಟರ್ ತಿಳಿಸಿದೆ ಎಂದು ವಕೀಲರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News