ಮಿಸ್ಟರ್ ಪ್ರೈಮ್‌ಮಿನಿಸ್ಟರ್.. ಮತಾಂತರ ಮಸೂದೆ ಬಗ್ಗೆ ಏಕೆ ಬಾಯಿ ಬಿಡುತ್ತಿಲ್ಲ?: ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವ

Update: 2022-01-12 02:13 GMT
ಮಾರ್ಗರೆಟ್ ಆಳ್ವ (ಫೋಟೊ-twitter.com)

ಬೆಂಗಳೂರು: ರಾಜ್ಯದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಮತಾಂತರ ತಡೆ ಕಾಯ್ದೆ ವಿರುದ್ಧ ಆತಂಕ ವ್ಯಕ್ತಪಡಿಸಿ ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಜತೆಗೆ ರಾಜ್ಯದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದಾಳಿಗಳಿಗೆ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಅಥವಾ ಕ್ರಮ ಇಲ್ಲ ಎಂದು ಆಕ್ಷೇಪಿಸಿದ್ದಾರೆ.

"ಮಿಸ್ಟರ್ ಪ್ರೈಮ್ ಮಿನಿಸ್ಟರ್.. ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರುವ ಬಗ್ಗೆ ಕಣ್ಣು ಮುಚ್ಚಿಕೊಂಡು ಮೌನದಿಂದ ಇರಲು ಹೇಗೆ ಸಾಧ್ಯ" ಎಂದು ನಾಲ್ಕು ಪುಟಗಳ ಪತ್ರದಲ್ಲಿ ಕಾಂಗ್ರೆಸ್ ನಾಯಕಿ ಪ್ರಶ್ನಿಸಿದ್ದಾರೆ.

"ಅಲ್ಪಸಂಖ್ಯಾತರ ವಿರುದ್ಧದ ಹಿಂಸೆಯ ವಿಚಾರದಲ್ಲಿ ನಿಮ್ಮ ಮೌನವನ್ನು ಅನುಮೋದನೆ ಅಥವಾ ಪ್ರೋತ್ಸಾಹ ಎಂದು ತಪ್ಪಾಗಿ ಭಾವಿಸಲಾಗುತ್ತಿದೆ. ನೀವು ಯಾವಾಗ ಮೌನ ಮುರಿಯುತ್ತೀರಿ ಹಾಗೂ ಈ ಹುಚ್ಚಾಟ ಮತ್ತು ಹಿಂಸೆಗೆ ಯಾವಾಗ ಅಂತ್ಯ ಹಾಡುತ್ತೀರಿ" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

"ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ಮಸೂದೆ’ ಕರಾಳ ಹಾಗೂ ನ್ಯಾಯಾಲಯಗಳು ಈ ಹಿಂದೆ ತಿರಸ್ಕರಿಸಿದ ಅಂಶಗಳನ್ನು ಒಳಗೊಂಡಿದೆ ಮತ್ತು ಸಂವಿಧಾನಾತ್ಮಕ ನಿಯಮಗಳನ್ನು ಉಲ್ಲಂಘಿಸಿದೆ. ಇದು ಎಲ್ಲ ಅಲ್ಪಸಂಖ್ಯಾತರು, ನಮ್ಮ ಸಂಸ್ಥೆಗಳು, ವಿಧಾನಗಳು, ಸೇವೆಗಳು ಮತ್ತು ದತ್ತಿ ಕಾರ್ಯಗಳನ್ನು ಸಂಶಯದಿಂದ ನೋಡುವಂತೆ ಮಾಡಿದೆ" ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಈ ಮಸೂದೆಗೆ ಇನ್ನೂ ವಿಧಾನ ಪರಿಷತ್ತಿನ ಒಪ್ಪಿಗೆ ಸಿಗಬೇಕಿದೆ. ಖಾಸಗಿತನ, ಧಾರ್ಮಿಕತೆ, ವಿವಾಹ ಮತ್ತು ನಿರ್ಧಾರ ಕೈಗೊಳ್ಳುವ ಹಕ್ಕಿನಂಥ ವೈಯಕ್ತಿಕ ಸ್ವಾತಂತ್ರ್ಯವನ್ನು ಈ ಉದ್ದೇಶಿತ ಕಾಯ್ದೆ ಕಿತ್ತುಕೊಳ್ಳಲಿದೆ. ಇಂಥ ಭಾರತವನ್ನು ಕಟ್ಟಲು ನಾವು 70 ವರ್ಷಗಳಿಂದ ಹೆಣಗಾಡಿದ್ದೇವೆಯೇ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News