ಭಾರತವು ನರಮೇಧದ ಹೊಸ್ತಿಲಲ್ಲಿದೆಯೇ?: ಮುಸ್ಲಿಮರ ಸಾಮೂಹಿಕ ಹತ್ಯೆಯ ಕರೆ ಮತ್ತು ಮೋದಿಯ ಮೌನ ಸಮ್ಮತಿ

Update: 2022-01-12 07:32 GMT

ಈ ದೇಶದಲ್ಲಿ ದಲಿತ ಮತ್ತು ಅತಿ ಶೂದ್ರ ಹಾಗೂ ಮಹಿಳೆಯರು ಜಾತಿ ವ್ಯವಸ್ಥೆಯ ಲಕ್ಷ್ಮಣ ರೇಖೆಯನ್ನು ದಾಟಿದಲ್ಲಿ ಅವರ ನರಮೇಧ ನಡೆಸುವ ಶಾಶ್ವತ ಸಿದ್ಧತೆ ಬ್ರಾಹ್ಮಣಶಾಹಿ ಸವರ್ಣೀಯ ವ್ಯವಸ್ಥೆಯಲ್ಲಿ ಅಂತರ್ಗತವಾಗಿಯೇ ಇದೆ. ಹೀಗಾಗಿಯೇ ಇತಿಹಾಸದಲ್ಲೂ, ಪುರಾಣದಲ್ಲೂ ದಲಿತರ ಮೇಲೆ ಹಾಗೂ ಆದಿವಾಸಿಗಳ ಮೇಲೆ ನಡೆದ ನರಮೇಧಗಳು ಭಾರತೀಯ ಸಮಾಜದಲ್ಲಿ ಪುಣ್ಯ ಸಂಕಥನಗಳಾಗಿ ಬಹುಸಂಖ್ಯಾತರ ಸಮ್ಮತಿಯನ್ನು ಗಿಟ್ಟಿಸಿಕೊಂಡಿವೆ. ಈ ದೇಶದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಬಹುಸಂಖ್ಯಾತ ಕೆಳಸ್ತರದವರು ಬ್ರಾಹ್ಮಣೀಯ ವ್ಯವಸ್ಥೆಯ ಲಕ್ಷ್ಮಣ ರೇಖೆಯನ್ನು ದಾಟಿದ ಶೂದ್ರ ಹಾಗೂ ದಲಿತರೇ ಆಗಿರುವುದರಿಂದ ಅವರ ಕಗ್ಗೊಲೆಗಳ ಬಗ್ಗೆ ಸವರ್ಣೀಯ ಸಮಾಜದಲ್ಲಿ ಸಕ್ರಿಯ ಸಮ್ಮತಿ ದೊರಕುತ್ತಿದೆ.

ಸಾಧುಸಂತರ ವೇಷಧರಿಸಿದ್ದವರ ಸಮಾವೇಶವೊಂದು ಹರಿದ್ವಾರದಲ್ಲಿ ಮುಸ್ಲಿಮರ ಸಾಮೂಹಿಕ ನರಹತ್ಯೆಗೆ ಬಹಿರಂಗವಾಗಿ ಕರೆಕೊಟ್ಟು ಮೂರುವಾರಗಳು ಕಳೆಯುತ್ತಾ ಬಂದಿದ್ದರೂ ಈವರೆಗೆ ಒಬ್ಬರ ಬಂಧನವೂ ಆಗಿಲ್ಲ. ಬುಲ್ಲಿಬಾಯಿ, ಸುಲ್ಲಿ ಡೀಲ್ಸ್ ಮತ್ತು ಲಿಬರಲ್ ಡೊಗೆ ಇತ್ಯಾದಿ ಸಾಮಾಜಿಕ ಜಾಲತಾಣದಲ್ಲಿ ಇನ್ನೂ ಮೀಸೆಕೂಡ ಮೂಡದ ಹಿಂದೂ ಮತಾಂಧ ಯುವಕರು ಮುಸ್ಲಿಂ ಮಹಿಳೆಯರನ್ನು ಹರಾಜುಹಾಕುವ ಆ್ಯಪ್‌ಗಳನ್ನು ಸೃಷ್ಟಿಸಿ ಹೀನಾಯವಾಗಿ ಅಪಮಾನಗೊಳಿಸುವ ಪ್ರಯತ್ನಗಳು ಎಗ್ಗಿಲ್ಲದೆ ಮುಂದುವರಿದಿವೆ. ದಿನಕ್ಕೆ ಕನಿಷ್ಠ ಹತ್ತುಕಡೆ ಮುಸ್ಲಿಮರ ಮೇಲೆ ಲಿಂಚಿಂಗ್ ದಾಳಿ ನಡೆಸಿ ಕೊಲ್ಲುವ ಪ್ರಯತ್ನಗಳು ನಡೆದಿವೆ. ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆಗಳನ್ನು ಜಾರಿ ಮಾಡಿರುವ ಬಿಜೆಪಿ ರಾಜ್ಯಗಳಲ್ಲಿ ಮುಸ್ಲಿಮರ ಮತ್ತು ಕ್ರಿಶ್ಚಿಯನ್ನರ ನಿತ್ಯ ಬದುಕನ್ನು ರೌರವ ನರಕ ಮಾಡುವ ಕಾನೂನನ್ನು ಶಾಸನಬದ್ಧವಾಗಿ ಜಾರಿ ಮಾಡಲಾಗಿದೆ. ದೇಶದ ಸಂವಿಧಾನವನ್ನು ರಕ್ಷಿಸುವ ಪ್ರತಿಜ್ಞೆ ಸ್ವೀಕರಿಸಿ ಸಂಸದರಾಗಿರುವ ತೇಜಸ್ವಿ ಸೂರ್ಯರವರು ಈ ದೇಶದಲ್ಲಿರುವ ಎಲ್ಲಾ ಮುಸ್ಲಿಮರನ್ನು ಮತ್ತು ಕ್ರಿಶ್ಚಿಯನ್ನರನ್ನು ಬಲವಂತಾಗಿ ಧರ್ಮಬಾಹಿರಗೊಳಿಸಲು ವರ್ಷವಾರು ಟಾರ್ಗೆಟ್ ಇಟ್ಟುಕೊಳ್ಳಬೇಕೆಂದು ಬ್ರಾಹ್ಮಣ ಮಠದ ಆವರಣದಿಂದ ಕರೆಕೊಡುತ್ತಾರೆ. ಇವೆಲ್ಲದರ ಮುಂದುವರಿಕೆಯಾಗಿ ಹರಿದ್ವಾರದ ಹಂತಕರು ಮುಸ್ಲಿಮರ ನರಮೇಧ ಮಾಡಲು ಕರೆಕೊಡುವುದಲ್ಲದೆ ಅಂತಹ ವೀರ ಹಿಂದೂವಿಗೆ ಒಂದು ಕೋಟಿ ಬಹುಮಾನವನ್ನೂ ಘೋಷಿಸುತ್ತಾರೆ.

ಇದನ್ನು ಉತ್ತರಾಖಂಡದ ಹಾಗೂ ಕೇಂದ್ರದ ಬಿಜೆಪಿ ಸರಕಾರ ಖಂಡಿಸುವುದಿರಲಿ, ಒಂದು ವಿಷಾದದ ಹೇಳಿಕೆಯನ್ನೂ ಈವರೆಗೆ ಕೊಟ್ಟಿಲ್ಲ. ಉಗ್ರ ಹಿಂದೂ ಸಂಘಟನೆಗಳ ಸದಸ್ಯರಲ್ಲದ ಬಹುಸಂಖ್ಯಾತ ಹಿಂದೂಗಳ ಒಳಗಿನ ‘ಸೈಲೆಂಟ್ ಮೆಜಾರಿಟಿ’ಗೆ ಇಂತಹ ಬೆಳವಣಿಗೆಗಳ ಬಗ್ಗೆ ಅಸಹ್ಯ ಹುಟ್ಟುವುದಕ್ಕಿಂತ ಮೈನಾರಿಟಿಗೆ ಗರ್ವಕ್ಕೆ ಪಾಠ ಕಲಿಸಲು ಇಂತಹ ಬೆಳವಣಿಗೆಗಳ ಅಗತ್ಯವಿರುತ್ತದೆಂಬ ಭಾವನೆಯೇ ಇದ್ದಂತಿದೆ. ಮತ್ತೊಂದು ಕಡೆ ಪಂಜಾಬಿನಲ್ಲಿ ಮೋದಿ ಹತ್ಯಾಪ್ರಯತ್ನ ಎಂಬ ಫ್ಲಾಪ್ ನಾಟಕವನ್ನು ಆದ್ಯತೆಯಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸುಪ್ರೀಂಕೋರ್ಟು ಬಟಾಬಯಲಿನಲ್ಲಿ ಬಹಿರಂಗವಾಗಿ ನಡೆಯುತ್ತಿರುವ ಸಂವಿಧಾನದ ಕಗ್ಗೊಲೆಯ ಬಗ್ಗೆ ಅಸೀಮ ಉದಾಸೀನವನ್ನು ತೋರುತ್ತಿದೆ. ಇವೆಲ್ಲ ಬೆಳವಣಿಗೆಗಳು ಏನು ಸೂಚಿಸುತ್ತಿವೆ?

ಹಿಟ್ಲರನ ಜರ್ಮನಿಯ ರೀತಿ, 90ರ ದಶಕದ ರವಾಂಡಾದ ರೀತಿ ಭಾರತದಲ್ಲಿ ಸಾಮೂಹಿಕ ನರಹತ್ಯೆ- ಜಿನೋಸೈಡ್ ಅಪಾಯ ಸನಿಹವಾಗುತ್ತಿದೆಯೇ?

ನಮಗೆಲ್ಲಾ ತಿಳಿದಿರುವಂತೆ ಹಿಟ್ಲರನ ಜರ್ಮನಿಯಲ್ಲಿ 1943-45ರ ನಡುವಿನ ಕೇವಲ ಮೂರು ವರ್ಷಗಳಲ್ಲಿ 60 ಲಕ್ಷ ಯೆಹೂದಿಗಳನ್ನು ಕೊಂದುಹಾಕಲಾಯಿತು. ಆಫ್ರಿಕಾದ ರ್ವಾಂಡಾ ದೇಶದಲ್ಲಿ 1994ರಲ್ಲಿ ಕೇವಲ ಮೂರು ತಿಂಗಳಲ್ಲಿ ಬಹುಸಂಖ್ಯಾತ ಹುಟು ಜನಾಂಗೀಯರು 10 ಲಕ್ಷ ಅಲ್ಪಸಂಖ್ಯಾತ ಟುಟ್ಸಿಗಳನ್ನು ಹಾಗೂ 60,000ಕ್ಕೂ ಹೆಚ್ಚು ಉದಾರವಾದಿ ಹುಟುಗಳನ್ನು ಕೊಂದುಹಾಕಿದರು. ಇವೆಲ್ಲವನ್ನೂ ನರಮೇಧ- ಜಿನೋಸೈಡ್ ಎಂದು ಈಗ ಇತಿಹಾಸಕಾರರೂ ಮತ್ತು ವಿಶ್ವಸಂಸ್ಥೆಯೂ ವರ್ಗೀಕರಿಸುತ್ತದೆ. ಆದರೆ ಇದು ಇತಿಹಾಸಕ್ಕೆ ಸಂದುಹೋದ ಸಂಗತಿಯಲ್ಲ. ಕಳೆದ ಕೆಲವು ವರ್ಷಗಳಲ್ಲಿ ಭಾರತವನ್ನೂ ಒಳಗೊಂಡಂತೆ ಜಗತ್ತಿನ ಹಲವಾರು ಪ್ರಜಾತಂತ್ರ ದೇಶಗಳಲ್ಲಿ ಬಹುಸಂಖ್ಯಾತ ದುರಭಿಮಾನಿ ಸರಕಾರಗಳು ಆಳ್ವಿಕೆಗೆ ಬಂದಿರುವುದರಿಂದ ಜಗತ್ತಿನಲ್ಲಿ ಮತ್ತೆ ನರಮೇಧಗಳ ಸಂಭವನೀಯತೆ ಹೆಚ್ಚಿದೆಯೆಂದು ಸ್ವತಂತ್ರ ಸಂಸ್ಥೆಗಳು ಆತಂಕ ವ್ಯಕ್ತಪಡಿಸುತ್ತಿವೆ.

ಜಿನೋಸೈಡ್ ಜಗತ್ತು: 

ಪ್ರಪಂಚ ಮಟ್ಟದಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಮತ್ತು ‘ಜಿನೋಸೈಡ್ ವಾಚ್’ ಎಂಬ ಸಂಸ್ಥೆ ಜಿನೋಸೈಡ್ ಸಂದರ್ಭವನ್ನು ಮೂರು ವರ್ಗಗಳಾಗಿ ವಿಂಗಡಿಸಿವೆ.

ಅದರಲ್ಲಿ ಅತ್ಯಂತ ಗಂಭೀರವಾದ ಘಟ್ಟ ‘ಜಿನೋಸೈಡ್ ಎಮರ್ಜೆನ್ಸಿ’ ಹಂತ. ಈ ಹಂತದಲ್ಲಿ ಹಾಲಿ ಟರ್ಕಿ, ಸಿರಿಯಾ, ಸೆಂಟರ್ಲ್ ಆಫ್ರಿಕನ್ ರಿಪಬ್ಲಿಕ್, ಮ್ಯಾನ್ಮಾರ್ ದೇಶಗಳಿವೆ. ಇದಕ್ಕೆ ಮುಂಚಿನ ಹಂತ ‘ಜಿನೋಸೈಡ್ ವಾರ್ನಿಂಗ್’

ಹಂತ. ಸದ್ಯ ಇಥಿಯೋಪಿಯಾ ದೇಶದಲ್ಲಿ ಅಂತಹ ಸಂದರ್ಭವಿದೆ. ಅದಕ್ಕೆ ಪೂರ್ವಭಾವಿಯಾದ ಹಂತ ‘ಜಿನೋಸೈಡ್ ವಾಚ್’

ಘಟ್ಟ. ಭಾರತದ ಕಾಶ್ಮೀರ ಹಾಗೂ ಅಸ್ಸಾಮಿನಲ್ಲಿ ಕಳೆದ ಒಂದೆರಡು ವರ್ಷಗಳಲ್ಲಿ ಈ ಬಗೆಯ ಪರಿಸ್ಥಿತಿ ಉದ್ಭವವಾಗಿದೆಯೆಂದು ಈ ವರದಿ ಹೇಳುತ್ತಿದೆ. ಹಾಗಿದ್ದಲ್ಲಿ ಜಿನೋಸೈಡ್ ಎಮರ್ಜೆನ್ಸಿ ಹಾಗೂ ವಾರ್ನಿಂಗ್ ಹಂತಗಳಲ್ಲಿರುವ ದೇಶಗಳಿಗೆ ಹೋಲಿಸಿಕೊಂಡಲ್ಲಿ ಭಾರತದ ಪರಿಸ್ಥಿತಿ ಸದ್ಯಕ್ಕೆ ಅಪಾಯಕಾರಿ ಹಂತಕ್ಕೆ ಮುಟ್ಟಿಲ್ಲವೆಂದು ಸಮಾಧಾನಿಸಿಕೊಳ್ಳಬಹುದೇ?

ನರಮೇಧಿಗಳ ಚಹರೆಗಳು:

ವಿಶ್ವಸಂಸ್ಥೆಯ ಪ್ರಕಾರ ಜಿನೋಸೈಡ್-ನರಮೇಧ ಎಂದರೆ:

‘‘ಒಂದು ರಾಷ್ಟ್ರೀಯ, ಜನಾಂಗಿಯ, ಧಾರ್ಮಿಕ ಅಥವಾ ವರ್ಣೀಯ ಗುಂಪನ್ನು, ಸಂಪೂರ್ಣವಾಗಿ ಅಥವಾ ಪಾಕ್ಷಿಕವಾಗಿ ನಾಶಮಾಡುವ ಉದ್ದೇಶದಿಂದ ಈ ಕೆಳಗಿನ ಯಾವುದೇ ಕ್ರಮಗಳನ್ನು ಎಸಗುವುದನ್ನು ನರಮೇಧದ ಕ್ರಮ- ಜಿನೋಸೈಡಲ್- ಎಂದು ಪರಿಗಣಿಸಲಾಗುವುದು: ಒಂದು ನಿರ್ದಿಷ್ಟ ಗುಂಪಿನ ಸದಸ್ಯರನ್ನು ಕೊಲ್ಲುವುದು; ಆ ಗುಂಪಿನ ಸದಸ್ಯರಿಗೆ ಗಂಭೀರವಾದ ಮಾನಸಿಕ ಅಥವಾ ದೈಹಿಕ ಹಾನಿಗಳನ್ನು ಉಂಟುಮಾಡುವುದು; ಆ ನಿರ್ದಿಷ್ಟ ಗುಂಪಿನ ಭೌತಿಕ ಅಸ್ತಿತ್ವವು ಸಂಪೂರ್ಣವಾಗಿ ಅಥವಾ ಪಾಕ್ಷಿಕವಾಗಿ ನಾಶಮಾಡಬೇಕೆಂಬ ಉದ್ದೇಶದಿಂದಲೇ ದುರ್ಭರ ಜೀವನಸ್ಥಿತಿಗತಿಗಳನ್ನು ಸೃಷ್ಟಿಸುವುದು; ಆ ನಿರ್ದಿಷ್ಟ ಗುಂಪಿನ ಸದಸ್ಯರ ಸಂತಾನ ವೃದ್ಧಿಯಾಗದಂತಹ ಕ್ರಮಗಳನ್ನು ಜಾರಿ ಮಾಡುವುದು ಅಥವಾ ಆ ಗುಂಪಿನ ಮಕ್ಕಳನ್ನು ಮತ್ತೊಂದು ಗುಂಪಿಗೆ ಹಸ್ತಾಂತರಿಸುವುದು.’’

ಆದರೆ ಇಂತಹ ಪರಿಸ್ಥಿತಿಯು ರಾತ್ರೋರಾತ್ರಿ ಸೃಷ್ಟಿಯಾಗುವುದಿಲ್ಲ ಮತ್ತು ಇಂತಹ ನರಮೇಧಗಳು ಆಯಾ ದೇಶಗಳ ದುರ್ಬಲ ಮತ್ತು ಅಲ್ಪಸಂಖ್ಯಾತ ವರ್ಗಗಳ ಮೇಲೆ ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ಹಂತಕ ಪಡೆಗಳು ಬಹುಪಾಲು ಜನರ ಸಮ್ಮತಿಯೊಂದಿಗೆ ಹಾಗೂ ಪ್ರಭುತ್ವದ ಸಕ್ರಿಯ ಅಥವಾ ಪರೋಕ್ಷ ಭಾಗೀದಾರಿಕೆಯೊಂದಿಗೆ ನಡೆಸುತ್ತವೆ. ಉದಾಹರಣೆಗೆ, ರವಂಡಾ ದೇಶದಲ್ಲಿ 1994ರಲ್ಲಿ ನಡೆದ ಟುಟ್ಸಿ ಜನಾಂಗದ ನರಮೇಧವನ್ನು ವರದಿ ಮಾಡಿದ ಬಿಬಿಸಿ ವರದಿಗಾರ ಫರ್ಗಲ್ ಕೇನ್ ಅವರು ನಂತರ ಅದರ ಬಗ್ಗೆಯೇ ‘Season Of Blood-A Rwandan Journey’ ಎಂಬ ಪುಸ್ತಕ ಬರೆದರು. ಅದರಲ್ಲಿ ಅವರು ಆ ದೇಶದಲ್ಲಿ ನೂರು ದಿನಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಹತ್ಯೆಯಾಗುವ ಮುಂಚೆ ನಡೆದ ಪ್ರಕ್ರಿಯೆಗಳನ್ನು ಹೀಗೆ ವಿವರಿಸುತ್ತಾರೆ:

‘‘... ಈ ರಕ್ತಸಿಕ್ತ ದೇಶದಲ್ಲಿ ಕೆಲ ವ್ಯಕ್ತಿಗಳಂತೂ ನಿಜಕ್ಕೂ ವಿಕೃತ ಮನಸ್ಸುಳ್ಳವರು. ಚಿಂದಿಯುಟ್ಟ ಬಡ ಜನರನ್ನೂ ಹಾಗೂ ಅನಕ್ಷರಸ್ಥ ರೈತಾಪಿ ಜನರನ್ನು ಟುಟ್ಸಿಗಳ ವಿರುದ್ಧ ದ್ವೇಷದಿಂದ ಕುದಿಯುವಂತೆ ಮಾಡುವುದು ಸುಲಭವೇ ಆಗಿತ್ತು. ಆದರೆ ನಾನು ಆ ದೇಶದಲ್ಲಿ ಭೇಟಿಯಾದ ಅತ್ಯಂತ ಕುತಂತ್ರಿ ಹಾಗೂ ಕ್ರೂರ ಜನರೆಂದರೆ ಆ ದೇಶದ ಸುಶಿಕ್ಷಿತ-ಪ್ರತಿಷ್ಠಿತ ವರ್ಗದ ಗಂಡಸರು ಮತ್ತು ಹೆಂಗಸರು. ಅವರು ಅತ್ಯಂತ ನಾಜೂಕಿನ ಸಂಸ್ಕಾರವಂತರು. ಸಾಸಿವೆಯಷ್ಟು ಲೋಪವಿಲ್ಲದ ಶುದ್ಧ ಫ್ರೆಂಚಿನಲ್ಲಿ ಸಂಭಾಷಣೆ ಮಾಡ ಬಲ್ಲವರು. ಯುದ್ಧದ ಸ್ವರೂಪ ಮತ್ತು ಪ್ರಜಾತಂತ್ರದ ಬಗ್ಗೆ ಕೊನೆಯಿಲ್ಲದ ತಾತ್ವಿಕ ಚರ್ಚೆಗಳನ್ನು ನಡೆಸಬಲ್ಲವರು. ಆದರೆ ಅವರೆಲ್ಲರೂ ತಮ್ಮ ದೇಶದ ಸೈನಿಕರು ಮತ್ತು ರೈತಾಪಿಗಳಂತೆ ತಮ್ಮ ಸಹೋದರ ದೇಶವಾಸಿಗಳ ರಕ್ತಕೂಪದಲ್ಲಿ ಮಿಂದೇಳುತ್ತಿದ್ದರು.’’

ಆದರೆ ಇಂತಹ ಅನಾಗರಿಕ, ಆಮಾನುಷ ನರಮೇಧಗಳಿಗೆ ಬಹುಸಂಖ್ಯಾತರ ಜನಸಮ್ಮತಿ ದೊರೆಯುವುದಾದರೂ ಹೇಗೆ? ಜಗತ್ತಿನಾದ್ಯಂತ ನಡೆಯುತ್ತಿರುವ ಇಂತಹ ನರಮೇಧಗಳ ಬಗ್ಗೆಯೇ ವಿಶೇಷ ಅಧ್ಯಯನ ಮಾಡುತ್ತಿರುವ ಪ್ರೊಫೆಸರ್ ಹೆಲೆ ಫೇನ್ ಅವರು ಇದಕ್ಕೆ ಕಂಡುಕೊಂಡಿರುವ ಉತ್ತರವಿದು:

‘‘ನರಮೇಧಗಳು ಅಥವಾ ಇನ್ನಿತರ ಸಾಮೂಹಿಕ ಹಿಂಸಾಚಾರಗಳು ಇದ್ದಕ್ಕಿದ್ದ ಹಾಗೆಯೋ ಅಯೋಜಿತವಾಗಿಯೋ ಸಂಭವಿಸುವುದಿಲ್ಲ. ಅವು ದ್ವೇಷ ಹಾಗೂ ಭೀತಿಗಳ ಸಾಮಾಜಿಕ ಸಂದರ್ಭವನ್ನು ಹುಟ್ಟಿಸುವ ಪ್ರಕ್ರಿಯೆಯನ್ನು ಅನುಸರಿಸುತ್ತವೆ. ಈ ಭಾವನೆಗಳ ಮೂಲಕ ಜನಮಾನಸದಲ್ಲಿ ಸರ್ವಸಹಜವಾಗಿ ‘ಇತರ’ ಮನುಷ್ಯರನ್ನು ನಮ್ಮ ‘ನೈತಿಕ ಹೊಣೆಗಾರಿಕೆಯ ಲೋಕ’ದಿಂದ ಹೊರಗಿರಿಸುವ ತನಕ ನಡೆಯುತ್ತಲೇ ಇರುತ್ತದೆ.’’ ‘ನಮ್ಮವರ’ ಬಗ್ಗೆ ನಾವು ಸಹಜವಾಗಿ ಹೊಂದಿರುವ ನೈತಿಕ ಹೊಣೆಗಾರಿಕೆಯನ್ನು ‘ಅನ್ಯರಿಗೆ’ ನಿರಾಕರಿಸಲು ಬೇಕಾದ ಮನಸ್ಥಿತಿ ಹಾಗೂ ಸಮರ್ಥನೆಗಳನ್ನು ಈ ಕಲ್ಪಿತ ದ್ವೇಷ, ಭೀತಿ ಮತ್ತು ಸಾಮಾಜಿಕ ಪೂರ್ವಗ್ರಹಗಳು ಬಿತ್ತುತ್ತವೆ.

ಮನುಷ್ಯರು ಮೃಗವಾಗುವ ಹತ್ತು ಹಂತಗಳು:

ಸಹವಾಸಿಗಳ ಈ ‘ಅನ್ಯೀಕರಣ’ ಮತ್ತು ‘ಪರಾಯೀಕರಣ’ವು ಕೂಡಾ ಏಕಾಏಕಿ ಸಂಭವಿಸುವುದಿಲ್ಲ. ನರಮೇಧಗಳ ಬಗ್ಗೆ ನಿರಂತರವಾದ ಅಧ್ಯಯನ ನಡೆಸುತ್ತಿರುವ ಅಮೆರಿಕದ ಪ್ರೊಫೆಸರ್ ಗ್ರೆಗೋರಿ ಸ್ಟಾನ್ಟನ್ ಅವರು ನರಮೇಧದ ಕ್ಲೈಮಾಕ್ಸ್ ತಲುಪುವ ಮುನ್ನ ಸಮಾಜ ಹಾದು ಹೋಗುವ ಹತ್ತು ಹಂತಗಳನ್ನು ಹೀಗೆ ಗುರುತಿಸುತ್ತಾರೆ:

1. Classification: ‘ಅನ್ಯ’ ಗುಂಪು ಯಾವುದು ಮತ್ತು ಏಕೆ ಎಂಬ ವರ್ಗೀಕರಣ.

2. Symbolisation: ಆ ಗುಂಪಿನ ಚಹರೆಗಳ ಪಟ್ಟೀಕರಣ.

3. Discrimination: ಆ ಗುಂಪಿನ ಸದಸ್ಯರ ಬಗ್ಗೆ ತಾರತಮ್ಯ ಅನುಸರಿಸುವುದು.

4. Dehumanisation: ಆ ಗುಂಪನ್ನು ಅಪಮಾನಿಸುತ್ತಾ ಮಾನವೀಯ ಘನತೆಗಳನ್ನು ನಿರಾಕರಿಸುತ್ತಾ ಅಮಾನವೀಯಗೊಳಿಸುವುದು.

5. Oraganisation: ಈ ತಾರತಮ್ಯ, ಧೋರಣೆಗಳನ್ನು ವ್ಯವಸ್ಥಿತವಾಗಿ ಸಂಘಟಿಸುವುದು.

6. Polarisation: ಇವುಗಳ ಆಧಾರದ ಮೇಲೆ ನಾವೂ-ಅವರು ಎಂದು ಸಮಾಜವನ್ನು ಧ್ರುವೀಕರಿಸುವುದು.

7. Preparation: ನರಮೇಧಕ್ಕೆ ಬೇಕಿರುವ ವ್ಯವಸ್ಥಿತ ಸಿದ್ಧತೆಗಳನ್ನು ಮಾಡಿಕೊಳ್ಳುವುದು.

8. Persecution: ಆ ಗುಂಪುಗಳನ್ನು ಶಾಸನಾತ್ಮಕವಾಗಿ ಬೇರ್ಪಡಿಸಿ ನಾಗರಿಕ ಹಕ್ಕುಗಳನ್ನು ನಿರಾಕರಿಸುತ್ತಾ ದಮನವನ್ನು ಪ್ರಾರಂಭಿಸುವುದು.

9. Extermination: ಸಾಮೂಹಿಕ ಕಗ್ಗೊಲೆ

10. Denial: ಹತ್ಯಾಕಾಂಡದ ನಿರಾಕರಣೆ, ಸಾಕ್ಷಿ ನಾಶ, ಸಾಕ್ಷಿ ಬೆದರಿಕೆ, ಇವೆಲ್ಲವೂ ಮುಂದಿನ ನರಮೇಧಕ್ಕೆ ತಯಾರಿಯೇ ಆಗಿರುತ್ತದೆ.

ಇವೆಲ್ಲವೂ ಅನುಕ್ರಮ ಹಂತಗಳಾಗಿಯೂ ಕಾಣಿಸಿಕೊಳ್ಳಬಹುದು ಅಥವಾ ಒಂದೇ ಸಮಯದಲ್ಲಿ ಹಲವು ಹಂತಳ ಪ್ರಕ್ರಿಯೆಗಳೂ ಕಾಣಿಸಬಹುದು. ಈ ವೈಜಾನಿಕ ಹಂತೀಕರಣಗಳ ಹಾಗೂ ಅನ್ಯೀಕರಣದ ಹಿನ್ನೆಲೆಯಲ್ಲಿ ಭಾರತದ ಇತಿಹಾಸವನ್ನು ಮತ್ತು ವರ್ತಮಾನವನ್ನೂ ಅವಲೋಕಿಸಿದರೆ ಭಾರತವು ಒಂದು ಶಾಶ್ವತ ನರಮೇಧದ ಸಾಮಾಜಿಕ ಪರಿಸ್ಥಿತಿಯಲ್ಲೇ ಇದೆಯೆಂಬುದು ಗಾಬರಿಯುಂಟು ಮಾಡುತ್ತದೆ.

ಹಿಂದುತ್ವ, ಮನುಸ್ಮತಿ- ನರಮೇಧದ ಸನಾತನ ಕೈಪಿಡಿ

ವಾಸ್ತವದಲ್ಲಿ ಡಾ. ಸ್ಟಾನ್ಟನ್ ಅವರ ‘ಜಿನೋಸೈಡ್’ನ ಮೊದಲ ಐದು ವರ್ಗೀಕರಣವು ಭಾರತದ ‘ವೈದಿಕ ನಾಗರಿಕತೆ’ಯ ಸಾಮಾಜಿಕ ವ್ಯವಸ್ಥೆಯ ಮಾರ್ಗದರ್ಶಿ ಸೂತ್ರವಾದ ಮನುಸ್ಮತಿಯ ಐದು ಅಧ್ಯಾಯಗಳಂತೆಯೇ ಭಾಸವಾಗುತ್ತದೆ. ಇದರ ಆಧಾರದಲ್ಲೇ ಭಾರತದ ದಲಿತ-ಅತಿ ಶೂದ್ರ ಸಮುದಾಯವನ್ನು ಹಾಗೂ ಮಹಿಳೆಯರನ್ನು ಸವರ್ಣೀಯ ಸಮಾಜ ‘ಅನ್ಯೀ’ಕರಿಸಿ, ಅವರ ಯಾವ ಬಟ್ಟೆ ಹಾಗೂ ವರ್ತನೆಗಳನ್ನು ಅನುಸರಿಸಬೇಕೆಂಬ ಚಹರೆಗಳನ್ನು ‘ನಿರ್ದಿಷ್ಟೀ’ಕರಿಸಿ, ಅವರ ಬಗ್ಗೆ ಬಹಿರಂಗ ಹಾಗೂ ದೇವಮಾನ್ಯ ‘ತಾರತಮ್ಯ’ಗಳನ್ನು ಅನುಸರಿಸುತ್ತಲೇ ಬಂದಿದ್ದಾರೆ. ಹಾಗೆಯೇ ಆ ಸಮುದಾಯಗಳನ್ನು ಅಮಾನವೀಕರಿಸುವ ಪದ್ಧತಿಗಳನ್ನು, ಜಾತಿ ವ್ಯವಸ್ಥೆಯ ರೂಪದಲ್ಲಿ ಸಂಘಟಿಸುತ್ತಲೇ ಬರಲಾಗಿದೆ. ಹೀಗೆ ಈ ದೇಶದಲ್ಲಿ ದಲಿತ ಮತ್ತು ಅತಿ ಶೂದ್ರ ಹಾಗೂ ಮಹಿಳೆಯರು ಜಾತಿ ವ್ಯವಸ್ಥೆಯ ಲಕ್ಷ್ಮಣ ರೇಖೆಯನ್ನು ದಾಟಿದಲ್ಲಿ ಅವರ ನರಮೇಧ ನಡೆಸುವ ಶಾಶ್ವತ ಸಿದ್ಧತೆ ಬ್ರಾಹ್ಮಣಶಾಹಿ ಸವರ್ಣೀಯ ವ್ಯವಸ್ಥೆಯಲ್ಲಿ ಅಂತರ್ಗತವಾಗಿಯೇ ಇದೆ. ಹೀಗಾಗಿಯೇ ಇತಿಹಾಸದಲ್ಲೂ, ಪುರಾಣದಲ್ಲೂ ದಲಿತರ ಮೇಲೆ ಹಾಗೂ ಆದಿವಾಸಿಗಳ ಮೇಲೆ ನಡೆದ ನರಮೇಧಗಳು ಭಾರತೀಯ ಸಮಾಜದಲ್ಲಿ ಪುಣ್ಯ ಸಂಕಥನಗಳಾಗಿ ಬಹುಸಂಖ್ಯಾತರ ಸಮ್ಮತಿಯನ್ನು ಗಿಟ್ಟಿಸಿಕೊಂಡಿವೆ. ಈ ದೇಶದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಬಹುಸಂಖ್ಯಾತ ಕೆಳಸ್ತರದವರು ಬ್ರಾಹ್ಮಣೀಯ ವ್ಯವಸ್ಥೆಯ ಲಕ್ಷ್ಮಣ ರೇಖೆಯನ್ನು ದಾಟಿದ ಶೂದ್ರ ಹಾಗೂ ದಲಿತರೇ ಆಗಿರುವುದರಿಂದ ಅವರ ಕಗ್ಗೊಲೆಗಳ ಬಗ್ಗೆ ಸವರ್ಣೀಯ ಸಮಾಜದಲ್ಲಿ ಸಕ್ರಿಯ ಸಮ್ಮತಿ ದೊರಕುತ್ತಿದೆ.

ಇಲ್ಲದಿದ್ದರೆ ಸ್ವತಂತ್ರ ಭಾರತದಲ್ಲಿ ಪಾರ್ಟಿಷನ್ ಹಿಂಸಾಚಾರಗಳ ಆನಂತರ 1969ರಲ್ಲಿ ಗುಜರಾತಿನಲ್ಲಿ ಮುಸ್ಲಿಮರ ಮೇಲೆ ನಡೆದ ಹಿಂಸಾಚಾರಗಳಿಂದ ಮೊದಲುಗೊಂಡು ನೆಲ್ಲಿ, ಭಾಗಲ್ಪುರ, ಮೊರಾದಾಬದ್, ಮುಂಬೈ, ಗುಜರಾತ್, ಮುಜಫ್ಫರ್ ನಗರ ಹಾಗೂ ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಮುಸ್ಲಿಮರ ಏಕಪಕ್ಷೀಯ ಕಗ್ಗೊಲೆಗಳನ್ನೂ, 1967ರಲ್ಲಿ ಕಿಲ್ವೇನ್ಮಣಿಯಲ್ಲಿ ನಡೆದ ದಲಿತ ಹತ್ಯಾಕಾಂಡಗಳಿಂದ ಹಿಡಿದು, ಬೆಲ್ಚಿ, ಪಿಪ್ರಾ, ಲಕ್ಷ್ಮಣ್‌ಪುರ ಬಾತೆ, ಕರಂಚೇಡು, ಕಂಬಾಲಪಲ್ಲಿ ಹಾಗೂ ಇತ್ತೀಚಿನ ಭೀಮಾ ಕೋರೆಗಾಂವ್ ಪ್ರಕರಣದವರೆಗೆ ನಡೆಯುತ್ತಲೇ ಇರುವ ನರಮೇಧಗಳನ್ನೂ, ಧುಲೆಯಿಂದ ಹಿಡಿದು ಕಂಧಮಾಲ್‌ವರೆಗೆ ನಡೆದ ಆದಿವಾಸಿ ಕ್ರಿಶ್ಚಿಯನ್ನರ ನರಮೇಧಗಳು, 84ರಲ್ಲಿ ನಡೆದ ಸಿಖ್ ನರಮೇಧ, ಹಿಂದೂ ರಾಷ್ಟ್ರೀಯತೆಯನ್ನು ಒಪ್ಪದ ಕಾಶ್ಮೀರಿ, ನಾಗಾ, ಅಸ್ಸಾಮಿಗಳ ನಿರಂತರ ಹತ್ಯಾಕಾಂಡಗಳನ್ನೂ, ರೂಪಾ ಕನ್ವರ್‌ಗಳಿಂದ ಹಿಡಿದು ಕುಟುಂಬದೊಳಗೆ ಹಾಗೂ ಬೀದಿಯಲ್ಲಿ ದಿನನಿತ್ಯ ಬಲಿಯಾಗುತ್ತಿರುವ ಲೆಕ್ಕಕ್ಕೂ ಸಿಕ್ಕದ ಮಹಿಳೆಯರ ನರಬಲಿಗಳನ್ನೂ...

...ಈ ಎಲ್ಲಕ್ಕೂ ಸಿಕ್ಕಿರುವ ಸವರ್ಣೀಯ ಸಮಾಜದ ಸಕ್ರಿಯ ಅಥವಾ ಪರೋಕ್ಷ ಸಮ್ಮತಿಯನ್ನೂ, ಈ ನರಮೇಧಗಳಲ್ಲಿ ಯಾವುದೇ ಶಿಕ್ಷಾಭಯವಿಲ್ಲದೆ ಪಾಲುಗೊಂಡ ಪ್ರಭುತ್ವದ ಭಾಗೀದಾರಿಕೆಯನ್ನೂ ಜಿನೋಸೈಡ್- ನರಮೇಧ ಎಂದಲ್ಲದೆ ಬೇರೆ ಹೇಗೆ ಅರ್ಥಮಾಡಿಕೊಳ್ಳುವುದು?

ಈ ನರಮೇಧಗಳಿಗೆ ಬೇಕಾದ ಸಾಮಾಜಿಕ ಕಂಡಿಷನಿಂಗ್ ನಮ್ಮ ಬ್ರಾಹ್ಮಣೀಯ ಸಾಮಾಜಿಕ ವ್ಯವಸ್ಥೆಯೊಳಗೇ ಇದೆ. ಹೀಗಾಗಿ ಈ ನಾಗರಿಕತೆಯೊಳಗೇ ಒಂದು genocidal instinct- ನರಮೇಧ ಸ್ವಭಾವ ಇಲ್ಲವೇ ಎಂಬ ಸಹಜ ಪ್ರಶ್ನೆ ಹುಟ್ಟುತ್ತದೆ. ಹಿಂದುತ್ವ-ಮೋದಿತ್ವದ ಹೆಸರಲ್ಲಿ ಭಾರತವನ್ನು ಆವರಿಸಿಕೊಳ್ಳುತ್ತಿರುವ ನರಹತ್ಯಾ ರಾಜಕಾರಣವು ಭಾರತದ ನಾಗರಿಕತೆಯೊಳಗೇ ಇದ್ದ ಈ ಮನುವಾದಿ ಮೇಲರಿಮೆಯ ಹಂತಕ ಮನೋಭಾವಕ್ಕೆ ಹಿಂದೂರಾಷ್ಟ್ರವೆಂಬ ಹಿಂಸಾತ್ಮಕ ಆಧುನಿಕ ರಾಜಕಾರಣ ಇನ್ನಷ್ಟು ಕ್ರೂರ, ಕರಾಳ ಹಾಗೂ ವಿಧ್ವಂಸಕ ಚಹರೆಯನ್ನು ಶಕ್ತಿಯನ್ನೂ ನೀಡಿದೆ..

ಪರಿಣಾಮವಾಗಿ ಭಾರತ ಇಂದು ನರಮೇಧದ ಅಪಾಯದ ಅಂಚಿಗೆ ಬಂದು ನಿಂತಿದೆ..

ಗುಜರಾತ್ ನರಮೇಧದ ನಂತರವೂ ನರೇಂದ್ರ ಮೋದಿಯನ್ನು ಮೂರು ಬಾರಿ ಮುಖ್ಯಮಂತ್ರಿಯಾಗಿ ಮಾತ್ರವಲ್ಲದೆ ಎರಡೆರಡು ಬಾರಿ ಪ್ರಧಾನ ಮಂತ್ರಿಯನ್ನಾಗಿಯೂ ಆಯ್ಕೆ ಮಾಡಿಕೊಂಡ ಸವರ್ಣೀಯ ಸಮಾಜದೊಳಗೆ ಮತ್ತು ಬ್ರಾಹ್ಮಣೀಕರಣಗೊಳ್ಳುತ್ತಿರುವ ಇತರ ಸಮುದಾಯದೊಳಗೆ ಈ genocidal instinct ಗುಪ್ತವಾಗಿ ಹರಿದಿಲ್ಲವೇ?

ಬ್ರಾಹ್ಮಣ್ಯದ ಗೇಟ್ ಕೀಪರ್‌ಗಳು ಈ ಕಾರ್ಪೊರೇಟ್-ಬ್ರಾಹ್ಮಣ್ಯ ವ್ಯವಸ್ಥೆಯ ಸ್ಟೇಕ್ ಹೋಲ್ಡರ್ಸ್ ಆಗಿ ಬದಲಾಗಿಲ್ಲವೇ?

ಹಾಗಿದ್ದಲ್ಲಿ genocidal instinct ಗೆ ಪ್ರತಿಯಾಗಿ ಜನರಲ್ಲಿ ಸಹಜವಾಗಿರುವ Human Instinct- Moral Instinct- Justice Instinct ಗಳನ್ನು ಗಟ್ಟಿಗೊಳಿಸುವುದು ಹೇಗೆ? ಈ ಬಗೆಯಲ್ಲಿ ಬಹುಸಂಖ್ಯಾತ ಸಮುದಾಯ ಮರುಮಾನವೀಕರಣಗೊಳ್ಳದೆ ನರಮೇಧವನ್ನು ಹಾಗೂ ಮೋದಿ ಮಾಡೆಲ್‌ನ ಭಾರತೀಯ ಫ್ಯಾಶಿಸಂನ್ನು ಸೋಲಿಸಲು ಸಾಧ್ಯವೇ?

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News