ಕ್ರೀಡಾಪಟುಗಳಿಗೆ ವೈಜ್ಞಾನಿಕವಾಗಿ ತರಬೇತಿ ಅಗತ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2022-01-14 12:47 GMT

ಬೆಂಗಳೂರು, ಜ, 14: `ಕ್ರೀಡಾಳುಗಳಿಗೆ ವೈಜ್ಞಾನಿಕವಾಗಿ ಮಾರ್ಗದರ್ಶನ ನೀಡುವ ಕೆಲಸವನ್ನು ತರಬೇತುಗೊಂಡಿರುವ ಕೋಚ್‍ಗಳು ಮಾಡಬೇಕಾದ ಅಗತ್ಯವಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ಕಾಮನ್ವೆಲ್ತ್ ಕ್ರೀಡಾಕೂಟದ ಬ್ಯಾಟನ್ ವಿನಿಮಯ ಕಾರ್ಯಕ್ರಮದಲ್ಲಿ ಆನ್‍ಲೈನ್ ಮೂಲಕ ಪಾಲ್ಗೊಂಡು ಮಾತನಾಡಿದ ಅವರು, `ಅತ್ಯುತ್ತಮ ಕೋಚ್‍ಗಳ ಮೂಲಕ ಕ್ರೀಡಾಪಟುಗಳಿಗೆ ತರಬೇತಿ ನೀಡುವುದು ಅತ್ಯಗತ್ಯ. ಅವರಿಗೆ ಪಠ್ಯಕ್ರಮ ರೂಪಿಸಿ ಅದರಂತೆ ಸೂಕ್ತ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ' ಎಂದು ಅಭಿಪ್ರಾಯಪಟ್ಟರು.

`ಅಮೃತ ಕ್ರೀಡಾ ಯೋಜನೆಯ ಗುರಿ ಈಡೇರಿಸಲು ಸರಕಾರ ಅಗತ್ಯ ನೆರವು ನೀಡಲು ಬದ್ಧವಾಗಿದೆ. 72 ದೇಶಗಳ ಒಕ್ಕೂಟ ರಚನೆಯಾಗಿ ಹಲವಾರು ವಿಚಾರಗಳ ವಿನಿಮಯಕ್ಕೆ ಕಾಮನ್ವೆಲ್ತ್ ಒಕ್ಕೂಟ ವೇದಿಕೆಯಾಗಿದೆ. ಸಮಾನ ಚಿಂತನೆ ಇರುವ ರಾಷ್ಟ್ರಗಳ ಬಾಂಧವ್ಯ ಗಟ್ಟಿಗೊಳ್ಳಲು, ಅದರಲ್ಲೂ ಯುವಪೀಳಿಗೆಯಲ್ಲಿ ಬಾಂಧವ್ಯ ಮುಂದುವರೆಯಬೇಕೆಂಬ ಉದ್ದೇಶದಿಂದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ' ಎಂದರು.

`ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಕ್ರೀಡಾಕೂಟದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ. ಕ್ರೀಡಾಕೂಟದ ಬ್ಯಾಟನ್ ಇಂದು 9 ಸಾವಿರ ಕಿ.ಮೀ ಪಯಣಿಸಿ ಭಾರತಕ್ಕೆ ಆಗಮಿಸಿದೆ. ಭಾರತದ ನಾಲ್ಕು ಮಹಾ ನಗರಗಳಿಗೆ ಬ್ಯಾಟನ್ ಸ್ವೀಕಾರ ಮಾಡುವ ಅವಕಾಶ ದೊರೆತಿದ್ದು, ಈ ಪೈಕಿ ಬೆಂಗಳೂರು ಕೂಡ ಒಂದು ಎನ್ನುವುದು ಸಂತೋಷದ ಸಂಗತಿ ನಮ್ಮ ಜವಾಬ್ದಾರಿಯನ್ನು ಮುಂದುವರೆಸುವ ಸಂಕೇತವಾಗಿರುವ ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದೆ' ಎಂದು ಅವರು ತಿಳಿಸಿದರು.

`ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕ್ರೀಡಾಲೋಕಕ್ಕೆ ಹೊಸ ಚಿಂತನೆ ಹಾಗೂ ಆಯಾಮಗಳನ್ನು ನೀಡಿದ್ದಾರೆ. ಖೇಲೋ ಇಂಡಿಯಾ ಪ್ರಾರಂಭಿಸಿ ಹಳ್ಳಿ-ಹಳ್ಳಿಗಳಲ್ಲಿ ವ್ಯವಸ್ಥಿತವಾಗಿ ಕ್ರೀಡಾಕೂಟಗಳು ನಡೆಯುತ್ತಿವೆ. ಜೀತೋ ಇಂಡಿಯಾ ಕಾರ್ಯಕ್ರಮ ಕ್ರೀಡಾಳುಗಳಿಗೆ ಬಹು ದೊಡ್ಡ ಸ್ಫೂರ್ತಿ ನೀಡಿದೆ. ಟೋಕಿಯೋ ಒಲಿಂಕ್ಸ್ ನಲ್ಲಿ ಅತಿಹೆಚ್ಚು ಪದಕಗಳನ್ನು ಗೆಲ್ಲಲು ಭಾರತಕ್ಕೆ ಸಾಧ್ಯವಾಯಿತು. ಕ್ರೀಡೆಗಳಿಗೆ  ಪ್ರೋತ್ಸಾಹ ಅಗತ್ಯವಾಗಿದ್ದು, ಭಾರತ ಸ್ವಾತಂತ್ರ್ಯ ಗಳಿಸಿದ ನಂತರದಲ್ಲಿ ಕ್ರೀಡೆಗಳಿಗೆ ಅತಿಹೆಚ್ಚು  ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ' ಎಂದು ನುಡಿದರು.

`ಕ್ರೀಡಾಪಟುಗಳು ಕ್ರೀಡಾಕೂಟಗಳಿಗೆ ತೆರಳುವ ಮುನ್ನ ಹಾಗೂ ಬಂದ ನಂತರ ಅವರೊಂದಿಗೆ ಸಮಯ ಕಳೆದು, ಪದಕ ಪಡೆಯದವರಿಗೂ ಸ್ಫೂರ್ತಿ ತುಂಬಿದ್ದಾರೆ. ಅವರ ಈ ನಡೆ ನಮ್ಮೆಲ್ಲರಿಗೂ ಮಾದರಿಯಾಗಿದೆ. ಕರ್ನಾಟಕ ರಾಜ್ಯ ಯುವಜನ ಸಬಲೀಕರಣಕ್ಕೆ ಮಹತ್ವವನ್ನು ನೀಡಿದೆ. ನೂತನ ಯುವ ನೀತಿಯನ್ನು ಸರಕಾರ ಜಾರಿಗೊಳಿಸುತ್ತಿದೆ. ಕರ್ನಾಟಕ ಕ್ರೀಡೆಗೆ ವರದಾನವೆಂಬಂತೆ ಸ್ವತಃ ಕ್ರೀಡಾ ಪಟುವಾಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ದೊರೆತಿದ್ದಾರೆ. ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಶ್ಲಾಘನೀಯ' ಎಂದು ಬಸವರಾಜ ಬೊಮ್ಮಾಯಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News