ಅಂಬಾನಿ-ಅದಾನಿ ಖಜಾನೆ ತುಂಬಿಸಿ ಕಾರ್ಮಿಕರನ್ನು ಶೋಷಿಸುತ್ತಿರುವ ಸರಕಾರ: ಮೇಧಾ ಪಾಟ್ಕರ್ ಬೇಸರ

Update: 2022-01-14 12:29 GMT

ಬೆಂಗಳೂರು, ಜ.14: ಸಾರ್ವಜನಿಕ ಉದ್ದಿಮೆ ಐಟಿಐ ಕಂಪನಿಯ ಕಾರ್ಮಿಕರು ಹಗಲಿರುಳು ದುಡಿದು ಸರಕಾರದ ಖಜಾನೆಯನ್ನು ತುಂಬಿಸುತ್ತಿದ್ದಾರೆ. ಆದರೆ ಆಡಳಿತ ಮಂಡಳಿಯು ಕಾರ್ಮಿಕರ ಕೆಲಸವನ್ನು ಕಿತ್ತುಕೊಂಡು, ಹೊರ ಹಾಕುತ್ತದೆ ಎಂದು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಬೇಸರ ವ್ಯಕ್ತಪಡಿಸಿದರು. 

ಶುಕ್ರವಾರ ನಗರದಲ್ಲಿರುವ ಐಟಿಐ ಕಾರ್ಖಾನೆಯ ಮುಂಭಾಗ ಪ್ರತಿಭಟನಾನಿರತ ಕಾರ್ಮಿಕರ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದ ಅವರು, ಕೇಂದ್ರ ಸರಕಾರ ಒಡೆತನದ ಉದ್ದಿಮೆಗಳು ಕಾರ್ಮಿಕರ ಶ್ರಮವನ್ನು ಹೀರಿ, ಕಾರ್ಮಿಕರನ್ನು ಶೋಷಣೆಗೆ ಒಳಪಡಿಸಿ ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳುತ್ತವೆ. ಆದರೆ ಕಾರ್ಮಿಕರ ಯೋಗಕ್ಷೇಮಕ್ಕಾಗಿ ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ. ಅಂಬಾನಿ, ಅದಾನಿಗಳಂತಹ ಬಂಡವಾಳಶಾಹಿಗಳ ಖಜಾನೆಯನ್ನು ತುಂಬಿಸುತ್ತಿರುವ ಕೇಂದ್ರ ಸರಕಾರವು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕಾರ್ಮಿಕರು, ರೈತರು ಸೇರಿದಂತೆ ಮಧ್ಯಮ ವರ್ಗದವರನ್ನು ಶೋಷಣೆ ಮಾಡುತ್ತಿದೆ ಎಂದು ಕಿಡಿಕಾರಿದರು.

ಸಂಘಟನೆ ಕಟ್ಟುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು ಮತ್ತು ಈ ಹಕ್ಕನ್ನು ಟ್ರೇಡ್‍ಯೂನಿಯನ್ ಕಾಯ್ದೆ, 1926ರಲ್ಲಿ ಖಚಿತಪಡಿಸಲಾಗಿದೆ. ಆದರೆ ಸಂಘಟನೆಯನ್ನು ಮಾಡಿಕೊಂಡ ಈ ಕಾರ್ಮಿಕರನ್ನು ಹೀಗೆ ಹೀನಾಯವಾಗಿ ಕೆಲಸದಿಂದ ವಜಾಗೊಳಿಸಿರುವ ಆಡಳಿತ ಮಂಡಳಿಯ ನಿರುಂಕುಶವಾದವನ್ನು ಎತ್ತಿತೋರಿಸುತ್ತದೆ. ಐಟಿಐ ಆಡಳಿತವು ಕೇಂದ್ರ ಕಾರ್ಮಿಕ ಇಲಾಖೆಯು ನೀಡಿದ ಆದೇಶವನ್ನು ಪಾಲಿಸಬೇಕು. ಆದರೆ ಅದನ್ನು ಆಡಳಿತ ಮಂಡಳಿ ನಿರಾಕರಿಸಿದೆ. ಎಲ್ಲಾ ಹೋರಾಟಗಳು ಕಾನೂನಿನ ಚೌಕಟ್ಟಿನಲ್ಲಿ ಮತ್ತು ಬೀದಿ ಹೋರಾಟಗಳ ಮೂಲಕ ನಡೆಯಬೇಕಾಗುತ್ತದೆ. ಕಾರ್ಮಿಕರು 45 ದಿನಗಳಿಂದ ಸತತವಾಗಿ ಸೋಲನ್ನೊಪ್ಪದೆ ಹೋರಾಟ ಮಾಡುತ್ತಿದ್ದು, ನ್ಯಾಷನಲ್ ಅಲಯನ್ಸ್ ಫಾರ್ ಪೀಪಲ್ಸ್ ಮೂವ್ಮೆಂಟ್ ಐಟಿಐ ಕಾರ್ಮಿಕರಿಗೆ ಬೆಂಬಲ ನೀಡಿ, ರಾಷ್ಟ್ರಮಟ್ಟದಲ್ಲಿ ಹೋರಾಟಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು.

ಕೆಜಿಎಲ್‍ಯುಐಟಿಐ ಘಟಕದ ಅಧ್ಯಕ್ಷ ಕಾಂ. ಹೇಮಂತ್ ಮಾತನಾಡಿ, ಕಳೆದ ಮೂರು ದಶಕಗಳಿಂದ ಕಂಪನಿಗೆ ದುಡಿದ ಕಾರ್ಮಿಕರನ್ನು ಆಡಳಿತ ಮಂಡಳಿ ಹೊರಹಾಕಿದೆ. ಕಳೆದ 45 ದಿನಗಳಿಂದ ಕಾರ್ಮಿಕರು ಐಟಿಐ ಗೇಟ್ ಅಲ್ಲಿ ಹೋರಾಟದಲ್ಲಿ ಕುಳಿತಿದ್ದಾರೆ. ಆಡಳಿತ ವರ್ಗದವರು ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿದರು.

ಎಐಸಿಸಿಟಿಯು ರಾಜ್ಯಾಧ್ಯಕ್ಷ ಕಾಂ. ಕ್ಲಿಫ್ಟನ್ ಡಿ ರೊಜಾರಿಯೋ, ಗೃಹ ಕಾರ್ಮಿಕರ ಸಂಘದ ಅಧ್ಯಕ್ಷೆ ಸಿಸ್ಟರ್ ಸೀಲಿಯಾ ಮತ್ತು ಗಮನ ಮಹಿಳಾ ಸಮೂಹದ ಮುಖ್ಯಸ್ಥೆ ಮಮತಾ ಐಟಿಐ ಕಾರ್ಮಿಕರಿಗೆ ತಮ್ಮ ಸಂಘಟನೆಯ ಬೆಂಬಲವನ್ನು ಸೂಚಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News