ಮಕರ ಸಂಕ್ರಾಂತಿ: ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿ ಗಂಗಾನದಿಯಲ್ಲಿ ಮಿಂದೆದ್ದ ಭಕ್ತರು

Update: 2022-01-14 13:01 GMT

ಹೊಸದಿಲ್ಲಿ: ಭಾರತದಲ್ಲಿ ಕೋವಿಡ್‌-19 ಮೂರನೇ ಅಲೆಯ ನಡುವೆಯೂ ಮಕರ ಸಂಕ್ರಾಂತಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ಗಂಗಾ ನದಿಯಲ್ಲಿ ಶುಕ್ರವಾರ ಸಾವಿರಾರು ಭಕ್ತರು ಸಾಮೂಹಿಕ ಸ್ನಾನ ಮಾಡಿದ್ದಾರೆ.

ಪ್ರಮುಖ ಹಿಂದೂ ಯಾತ್ರಾ ಸ್ಥಳಗಳಾದ ಉತ್ತರ ಪ್ರದೇಶದ ಪ್ರಯಾಗರಾಜ್ ಮತ್ತು ಪಶ್ಚಿಮ ಬಂಗಾಳದ ಸಾಗರ್ ದ್ವೀಪದಲ್ಲಿ ನೆರೆದಿದ್ದ ಭಕ್ತರು ಸಾಮಾಜಿಕ ಅಂತರ ಕಾಪಾಡದೆ ಹಾಗೂ ಮಾಸ್ಕ್‌ ಧರಿಸದೆ   ನದಿಯಲ್ಲಿ ಸ್ನಾನ ಮಾಡುವುದು ಮತ್ತು ನದಿ ದಡದಲ್ಲಿ ಕೋವಿಡ್‌ ನಿಯಮ ಪಾಲಿಸದೆ ಜನಸಂದಣಿ ಸೇರಿರುವುದು ಕಂಡು ಬಂದಿದೆ.

ರಾಜ್ಯ ಸರ್ಕಾರಗಳು ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಭಕ್ತರನ್ನು ನಿಯಂತ್ರಿಸಲು ಹಾಗೂ ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ತಾವು ತಮ್ಮ ಕೈಲಾದಷ್ಟು ಪ್ರಯತ್ನಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಸಾಗರ್ ದ್ವೀಪದಲ್ಲಿ ಗಂಗಾ ಮತ್ತು ಬಂಗಾಳ ಕೊಲ್ಲಿಯ ಸಂಗಮದಲ್ಲಿ 3.5 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಸ್ನಾನ ಮಾಡಿರುವುದಾಗಿ ಪಿಟಿಐ ವರದಿ ಮಾಡಿದೆ. ನದಿಯ ದಡದಲ್ಲಿ ಆಯೋಜಿಸಲಾಗಿರುವ ಗಂಗಾಸಾಗರ ಮೇಳಕ್ಕೆ ಹಾಗೂ ಸಮೀಪದ ಕಪಿಲ್ ಮುನಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಜನರು ಮಧ್ಯರಾತ್ರಿಯಿಂದಲೇ ಸೇರುತ್ತಿದ್ದಾರೆ.

ಈ ಕುರಿತು ಪಿಟಿಐ ಜೊತೆ ಮಾತನಾಡಿದ ಜಿಲ್ಲೆಯ ಅಧಿಕಾರಿಯೊಬ್ಬರು, ಆರ್‌ಟಿ-ಪಿಸಿಆರ್ ಪರೀಕ್ಷೆಯ ವರದಿ ಮತ್ತು ಸಂಪೂರ್ಣ ಲಸಿಕೆ ಪ್ರಮಾಣಪತ್ರವನ್ನು ತೋರಿಸಿರುವವರಿಗೆ ಮಾತ್ರ ಅವರು ಅವಕಾಶ ನೀಡಿರುವುದಾಗಿ ಹೇಳಿದ್ದಾರೆ. ಆದರೆ, ಸ್ಥಳದಲ್ಲಿ ಯಾತ್ರಾರ್ಥಿಗಳ ನಡುವೆ ಯಾವುದೇ ದೈಹಿಕ ಅಂತರವಿರಲಿಲ್ಲ ಎಂದು ಸ್ಥಳೀಯರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ವಾರ, ಕೊಲ್ಕತ್ತಾ ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ವಾರ್ಷಿಕ ಗಂಗಾಸಾಗರ ಮೇಳವನ್ನು ಆಯೋಜಿಸಲು ಅನುಮತಿ ನೀಡಿತ್ತು. ಕೋವಿಡ್ ಪ್ರೋಟೋಕಾಲ್‌ಗಳ ಪಾಲನೆ ಮತ್ತು ನ್ಯಾಯೋಚಿತ ಮೇಲ್ವಿಚಾರಣೆಗಾಗಿ ನ್ಯಾಯಾಲಯವು ಮೂರು ಸದಸ್ಯರ ಸಮಿತಿಯನ್ನು ರಚಿಸಿತ್ತು.
 
ಗಂಗಾ ನದಿಯ ನೀರನ್ನು ಭಕ್ತರ ಮೇಲೆ ಚಿಮುಕಿಸುವುದು ಪವಿತ್ರವಾಗಿದೆ. ಹಾಗಾಗಿ, ಗಂಗಾನದಿಯಲ್ಲಿ ಮುಳುಗಿ ಸ್ನಾನ ಮಾಡಬೇಕಾಗಿಲ್ಲ ಎಂದು ನ್ಯಾಯಾಲಯ ಸೂಚಿಸಿತ್ತು ಎಂದು NDTV ವರದಿ ಮಾಡಿದೆ.

ಈ ನಡುವೆ, ಸುಮಾರು ಮೂರು ಲಕ್ಷ ಭಕ್ತರು ಉತ್ತರ ಪ್ರದೇಶದ ಪ್ರಯಾಗರಾಜ್ ನಗರದಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಿರುವುದಾಗಿ ಹಿಂದಿ ದಿನಪತ್ರಿಕೆ ದೈನಿಕ್ ಭಾಸ್ಕರ್ ವರದಿ ಮಾಡಿದೆ.  

ಉತ್ತರ ಪ್ರದೇಶ ಸರ್ಕಾರ ಕೋವಿಡ್‌ ನಿಯಮ ಪಾಲನೆಗೆ ಕ್ರಮ ವಹಿಸಿದ್ದರೂ ಪ್ರಯಾಗ್‌ರಾಜ್‌ ನಗರದಿಂದ ಹೊರ ಬಂದಿರುವ ವಿಡಿಯೋಗಳು, ಫೋಟೋಗಳು ಭಕ್ತಾದಿಗಳು ಕೋವಿಡ್‌ ನಿಯಮ ಪಾಲಿಸುವಲ್ಲಿ ಎಡವಿದ್ದಾರೆ ಎಂಬುದನ್ನು ಸೂಚಿಸುತ್ತಿದೆ ಎಂದು scroll.in ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News