ಆರೋಪಿಗಳ ರಕ್ಷಣೆಗೆ ಲಂಚ ಪಡೆದ ಆರೋಪ: ರವಿ ಚನ್ನಣ್ಣನವರ್ ಅಮಾನತಿಗೆ ಎಎಪಿ ಆಗ್ರಹ

Update: 2022-01-14 13:53 GMT
ರವಿ ಚನ್ನಣ್ಣನವರ್

ಬೆಂಗಳೂರು, ಜ.14: ಅಕ್ರಮ ಮರಳು ದಂಧೆ ಪ್ರಕರಣವನ್ನು ಮುಚ್ಚಿ ಹಾಕಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ರನ್ನು ಅಮಾನತು ಮಾಡಿ, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಜಗದೀಶ್ ಸದಂ, ಕ್ರಷರ್ ಉದ್ಯಮಿ ಸೇರಿ ಹಲವರಿಂದ 3.96 ಕೋಟಿ ರೂ.ಮೊತ್ತ ವಂಚನೆಯಾಗಿದೆ ಎಂದು ಸಲ್ಲಿಕೆಯಾಗಿದ್ದ ದೂರನ್ನು ಆಧರಿಸಿ ಆರೋಪಿಗಳ ವಿರುದ್ಧ ರವಿ ಡಿ.ಚನ್ನಣ್ಣನವರ್ ಹಾಗೂ ಇತರೆ ಪೆÇಲೀಸ್ ಅಧಿಕಾರಿಗಳು ತನಿಖೆ ನಡೆಸಬೇಕಾಗಿತ್ತು ಎಂದು ತಿಳಿಸಿದ್ದಾರೆ.

ಆದರೆ ‘ಬೇಲಿಯೇ ಎದ್ದು ಹೊಲ ಮೇಯ್ತು’ ಎಂಬ ಗಾದೆಯಂತೆ, ಪೊಲೀಸ್ ಅಧಿಕಾರಿಗಳೇ ಆರೋಪಿಗಳಿಂದ 50 ಲಕ್ಷ ರೂ. ಲಂಚ ಪಡೆದಿರುವ ಆರೋಪ ಕೇಳಿಬಂದಿದೆ. ಇಂತಹ ಗಂಭೀರ ಆರೋಪ ಹೊತ್ತಿರುವ ರವಿ ಡಿ.ಚನ್ನಣ್ಣನವರ್‍ರು ಸಿಐಡಿ ಎಸ್ಪಿ ಹುದ್ದೆಯಲ್ಲಿ ಮುಂದುವರಿಯುವುದು ಸರಿಯಲ್ಲ. ತಕ್ಷಣವೇ ಅಮಾನತು ಮಾಡಿ ಸಮಗ್ರ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಜಗದೀಶ್ ಸದಂ ಆಗ್ರಹಿಸಿದ್ದಾರೆ.

ಪ್ರಕರಣ ಸಂಬಂಧ ಮಂಜುನಾಥ್ ಎಂಬುವವರು ಸರಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ರವಿ ಚನ್ನಣ್ಣನವರ್ 25 ಲಕ್ಷ, ಡಿವೈಎಸ್ಪಿ 15 ಲಕ್ಷ ಹಾಗೂ ಮತ್ತೊಬ್ಬ ಅಧಿಕಾರಿ 10 ಲಕ್ಷ ರೂಪಾಯಿ ಸ್ವೀಕರಿಸಿರುವ ಕುರಿತು ದೂರಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಪ್ರಭಾವಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲು ಪೊಲೀಸ್ ಅಧಿಕಾರಿಗಳು ಲಕ್ಷಗಟ್ಟಲೆ ಲಂಚ ಕೇಳಿರುವ ಮಾಹಿತಿ ದೂರಿನಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಆರೋಪಗಳಿಗೆ ಸಂಬಂಧಿಸಿದ ಧ್ವನಿ ಮುದ್ರಣ, ವಾಟ್ಸ್ ಆ್ಯಪ್ ಸಂದೇಶ ಮುಂತಾದ ಸಾಕ್ಷಿಗಳಿವೆ ಎಂದು ಮಂಜುನಾಥ್ ಹೇಳಿದ್ದಾರೆ. ಅವೆಲ್ಲದರ ಆಧಾರದಲ್ಲಿ ತನಿಖೆ ನಡೆಸಿ, ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದವರಿಗೆ ಹಾಗೂ ಅವರನ್ನು ರಕ್ಷಣೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಜಗದೀಶ್ ಸದಂ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News