ಮೇಕೆದಾಟಿಗೆ ಅಣೆಕಟ್ಟು ಕಟ್ಟುವ ಬದಲಿಗೆ ಬೆಂಗಳೂರಿನ ಕೆರೆಗಳ ನೀರನ್ನು ಸಂಸ್ಕರಣೆ ಮಾಡಿ: ನಾಗೇಶ ಹೆಗಡೆ

Update: 2022-01-15 06:19 GMT

ಬೆಂಗಳೂರು: ಮೇಕೆದಾಟಿಗೆ ಅಣೆಕಟ್ಟು ಕಟ್ಟುವ ಬದಲಿಗೆ ಬೆಂಗಳೂರಿನ ಕೆರೆಗಳ ನೀರನ್ನು ಸಂಸ್ಕರಣೆ ಮಾಡಿ ಎಂದು ಪರಿಸರವಾದಿ ನಾಗೇಶ ಹೆಗಡೆ ಹೇಳಿದ್ದಾರೆ. 

ಶುಕ್ರವಾರ ಪರಿಸರ ಸಂರಕ್ಷಣಾ ಸಮಿತಿ ವತಿಯಿಂದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಮೇಕೆದಾಟು ಪರಿಸರದ ಪರ, ಯೋಜನೆ ವಿರುದ್ಧದ ಕುರಿತು ನಡೆದ ಸಂವಾದದಲ್ಲಿ ಮಾತನಾಡಿದರು.

''ಮೇಕೆದಾಟು ಯೋಜನೆಯಿಂದ 16 ಟಿಎಂಸಿ ನೀರು ಬೆಂಗಳೂರಿಗೆ ಬರುತ್ತೆ ಅಂತ ಹೇಳುತ್ತಾರೆ. ಅದರ ಬದಲಿಗೆ ಮಳೆ ನೀರು ಕೊಯ್ಲು ಮಾಡಿ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಿದರೆ 16 ಟಿಎಂಸಿ ನೀರು ಬರುತ್ತೆ. ಇನ್ನು ನಗರದಿಂದ ಹೊರಗೆ ಹೋಗುತ್ತಿರುವ ಕೆರೆಗಳ ನೀರನ್ನು ಸಂಸ್ಕರಣೆ ಮಾಡಿ ಅದನ್ನೇ ಕುಡಿಯೋದಕ್ಕೆ ಬಳಸಿದರೆ ಮತ್ತೆ 16ಟಿಎಂಸಿ ನೀರು ಸಿಗುತ್ತದೆ. ಈಗಾಗಲೇ ಕಾವೇರಿಯಿಂದ ವಿವಿಧ ಹಂತದಲ್ಲಿ ಬರುತ್ತಿರುವ ನೀರು ಸೋರಿಕೆಯಾಗುತ್ತಿದ್ದು,  ಅದನ್ನು  ಸರಿಪಡಿಸಿದರೆ  6 ಟಿಎಂಸಿ ನೀರು ಸಿಗುತ್ತದೆ.  ಹೀಗೆ ಒಟ್ಟು 38 ಟಿಎಂಸಿ ನೀರನ್ನು ಪರ್ಯಾಯವಾಗಿ ಪಡೆಯಬಹುದು. ಈ ಬಗ್ಗೆ ಗಮನ ಹರಿಸದೇ ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಪ್ರಯತ್ನಿಸುವುದು ಮೂರ್ಖತನದ ಪರಮಾವಧಿಯಾಗಿದೆ ಎಂದು ನಾಗೇಶ ಹೆಗಡೆ ಹೇಳಿದರು. 

''ಕೆರೆಗಳ ನೀರನ್ನು ಮತ್ತೆ ಸಂಸ್ಕರಣೆ ಮಾಡುವುದರಿಂದ ಹೊಸ ಉದ್ಯಾನವನ್ನು ಸೃಷ್ಟಿ ಮಾಡಬಹದು.ಕೆರೆ ಸಂಸ್ಕರಣೆಗೆ 8ರಿಂದ 10 ವರ್ಷಗಳು ಬೇಕಾಗಬಹುದು ಅದನ್ನು ಶ್ರಮಿಕರಿಂದ ಮಾಡಿಸಿದರೆ ಲಕ್ಷಾಂತರ ಶ್ರಮಿಕರಿಗೆ ನಿರಂತರ ಉದ್ಯೋಗ ಸಿಗಬಹುದು. ಆಫ್ರಿಕಾದಂತಹ ಹಿಂದುಳಿದ ದೇಶಗಳಲ್ಲಿ ಚರಂಡಿ ನೀರನ್ನೇ ಕುಡಿದು ತೋರಿಸುತ್ತಾರೆ. ಅಲ್ಲದೇ ಅದನ್ನು ಒಳ್ಳೆಯ ಗುಣಮಟ್ಟದ ನೀರನ್ನಾಗಿ ಪರಿವರ್ತಿಸುತ್ತಾರೆ'' ಎಂದು ತಿಳಿಸಿದರು.

''ಬೆಂಗಳೂರು ವಿಜ್ಞಾನಿಗಳ ನಾಡು ಎಂದೇ ಹೆಸರುವಾಸಿಯಾಗಿದೆ ಆದರೆ, ಇಲ್ಲಿರುವ ವಿಜ್ಞಾನಿಗಳು ಚಂದ್ರಲೋಕದಲ್ಲಿ ಹೋಗಿ ನೀರು ಹುಡುಕುತ್ತಿದ್ದಾರೆ. ನೀರಿಲ್ಲದೇ ಇದ್ದಾಗ ಚಳುವಳಿ ಮಾಡಬಹುದು ಆದರೆ ನಮ್ಮಲ್ಲಿ ಇಷ್ಟೆಲ್ಲ ನೀರು ಇದ್ದಾಗ ಚಳುವಳಿ ಅಗತ್ಯ ಇಲ್ಲ'' ಎಂದರು. 

''ಈ ರೀತಿಯ ಬದಲಿ, ಸಾಮಾಜಿಕವಾಗಿ ಜನಪರವಾದ ಯೋಜನೆಗಳಿಗೆ ನಾವು ಆದ್ಯತೆ ನೀಡದೇ ಇದ್ದರೆ ಅದಕ್ಷತೆ, ದೌರ್ಜನ್ಯಗಳಿಗೆ ಪ್ರಚಾರ ಕೊಟ್ಟಂತಾಗುತ್ತದೆ'' ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News