ಮಾಜಿ ಸಚಿವ, ನಿವೃತ್ತ ಐಎಎಸ್ ಅಧಿಕಾರಿ ಡಾ.ಜೆ.ಅಲೆಗ್ಸಾಂಡರ್ ನಿಧನ

Update: 2022-01-14 17:06 GMT
photo credit: deccanherald.com

ಬೆಂಗಳೂರು, ಜ.14: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ, ನಿವೃತ್ತ ಐಎಎಸ್ ಅಧಿಕಾರಿ ಡಾ.ಜೆ.ಅಲೆಗ್ಸಾಂಡರ್ (83) ಅವರು ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಅಲೆಗ್ಸಾಂಡರ್ ಅವರು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರು ಇಬ್ಬರು ಮಕ್ಕಳು ಹಾಗೂ ನಾಲ್ವರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶನಿವಾರ ಬೆಂಗಳೂರಿನಲ್ಲಿ ನೆರವೇರಲಿದೆ.

ಕೇರಳ ಮೂಲದವರಾದ ಅಲೆಗ್ಸಾಂಡರ್ ಅವರು ಐಎಎಸ್ ಅಧಿಕಾರಿಯಾಗಿ ರಾಜ್ಯ ಪ್ರವೇಶ ಮಾಡಿದ್ದರು. ನಂತರ ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಆನಂತರ ರಾಜ್ಯ ರಾಜಕಾರಣ ಪ್ರವೇಶ ಮಾಡಿ ಕಾಂಗ್ರೆಸ್‍ನಲ್ಲಿ ಅಂದಿನ ಬೆಂಗಳೂರು ಭಾರತಿನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದಾಗ  ಪ್ರವಾಸೋದ್ಯಮ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಸ್ಪಂದಿಸುವ ಅಂದಿನ ಪ್ರಮುಖ ರಾಜಕಾರಣಿಯಾಗಿದ್ದರು. ಅಲೆಗ್ಸಾಂಡರ್ ಬೆಂಗಳೂರು ಭಾಗದಲ್ಲಿ ದೀನದಲಿತರ ನಾಯಕ ಎಂದು ಹೆಸರು ಪಡೆದಿದ್ದರು. ಇವರು ಮುಖ್ಯಕಾರ್ಯದರ್ಶಿ ಆಗುವ ಮೊದಲೇ ರಾಜ್ಯ ಸರಕಾರದ ಎಲ್ಲ ಇಲಾಖೆಯಲ್ಲಿ ಕೆಲಸ ಮಾಡಿದ ಏಕೈಕ ಅಧಿಕಾರಿ ಎನ್ನುವ ಖ್ಯಾತಿ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News