ಕೇಂದ್ರ ಸರಕಾರದ ಭಾಷಾ ತಾರತಮ್ಯಕ್ಕೆ ನಮ್ಮ ವಿರೋಧವಿದೆ: ಡಾ.ಕೆ.ಮರುಳಸಿದ್ದಪ್ಪ

Update: 2022-01-14 17:24 GMT

ಬೆಂಗಳೂರು, ಜ.14: ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ಭಾಷಾ ತಾರತಮ್ಯ ಮಾಡುತ್ತಿರುವುದನ್ನು ನಾವು ವಿರೋಧಿಸಬೇಕಾದ ಅಗತ್ಯವಿದೆ ಎಂದು ಸಾಹಿತಿ ಡಾ.ಕೆ ಮರುಳಸಿದ್ದಪ್ಪ ಅಭಿಪ್ರಾಯಪಟ್ಟಿದ್ದಾರೆ. 

ಶುಕ್ರವಾರ ನಗರದಲ್ಲಿ ಕನ್ನಡ ಸಂಘರ್ಷ ಸಮಿತಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ 117ನೆ ಹುಟ್ಟುಹಬ್ಬ ಹಾಗೂ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕುವೆಂಪು ಹುಟ್ಟುಹಬ್ಬ ಆಚರಿಸಿ ಅವರನ್ನು ನೆನೆಸಿಕೊಂಡರೆ ಸಾಲದು. ಅವರ ಆದರ್ಶಗಳನ್ನು ನಾವು ಅನುಸರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದರು.

ಕುವೆಂಪು ಅವರು ಅವರ ಕೃತಿಗಳಲ್ಲಿ ವೈಚಾರಿಕತೆಗೆ ಒತ್ತುಕೊಟ್ಟಿದ್ದು, ಪೌರಾಣಿಕ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಸಮಕಾಲೀನ ಸಂಗತಿಗಳನ್ನು ಸಮೀಕರಿಸಿದ್ದಾರೆ ಎಂದು ತಿಳಿಸಿದರು.

ಎಲ್.ಎನ್. ಮುಕುಂದರಾಜ್ ಅವರಿಗೆ ಕುವೆಂಪು ಅನಿಕೇತನ ಪ್ರಶಸ್ತಿ, ಕೆ.ಆರ್.ಯಶಸ್ವಿನಿ ಅವರಿಗೆ ಕುವೆಂಪು ಯುವಕವಿ ಪ್ರಶಸ್ತಿ ಹಾಗೂ ಸಂಗಮೇಶ ಉಪಾಸೆ ಅವರಿಗೆ ನಂ. ನಂಜಪ್ಪ ಚಿರಂತನ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಪ್ರಶಸ್ತಿ ಪುರಸ್ಕೃತ ಸಂಗಮೇಶ ಉಪಾಸೆ ಅವರು ಮಾತನಾಡಿ, ಅವರಿಗೆ ನೀಡಿದ್ದ ನಗದು ರು.5 ಸಾವಿರದ ಜೊತೆಗೆ 1 ಲಕ್ಷ ರೂ.ಗಳನ್ನು ಅವರ ತಂದೆಯವರ ಹೆಸರಿನಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ಸ್ಥಾಪಿಸಲು ಘೋಷಿಸಿ ಪ್ರತಿ ವರ್ಷ ವೈಚಾರಿಕ ಕೃತಿಕಾರರಿಗೆ ಪ್ರಶಸ್ತಿ ನೀಡುವಂತೆ ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪ್ರಕಾಶ ಮೂರ್ತಿ ಅವರಿಗೆ ನೀಡಿದರು.

ಕಾರ್ಯಕ್ರಮದಲ್ಲಿ ರಾಮಣ್ಣ ಎಚ್.ಕೋಡಿಹೊಸಹಳ್ಳಿ, ರತ್ನಾಕಾಳೆಗೌಡ, ಎ.ಎಸ್. ನಾಗರಾಜಸ್ವಾಮಿ, ಎಂ.ಪ್ರಕಾಶಮೂರ್ತಿ, ರಾಜಕುಮಾರ್ ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News