ಕೋವಿಡ್ ಅಪಾಯ ಭತ್ತೆ ಬಿಡುಗಡೆಯಲ್ಲಿ ಮಲತಾಯಿ ಧೋರಣೆ: ಜ.17ರಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

Update: 2022-01-14 17:43 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.14: ಸರಕಾರವು ಆರೋಗ್ಯ ಇಲಾಖೆಯ ಖಾಯಂ ಶುಶ್ರೂಷಾಧಿಕಾರಿಗಳಿಗೆ  ಕೋವಿಡ್-19 ಅಪಾಯ ಭತ್ತೆ ಬಿಡುಗಡೆ ಮಾಡಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಖಾಯಂ ಶುಶ್ರೂಷಾಧಿಕಾರಿಗಳಿಗೆ ಬಿಡುಗಡೆ ಮಾಡದೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ. ಹಾಗಾಗಿ ಜ.17ರಿಂದ ಕಪ್ಪು ಪಟ್ಟಿ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಸರಕಾರಿ ವೈದ್ಯಕೀಯ ಶಿಕ್ಷಣ ಇಲಾಖಾ ಶುಶ್ರೂಷಾಧಿಕಾರಿ ಸಂಘದ ಅಧ್ಯಕ್ಷ ಸಂತೋಷ್‍ಕುಮಾರ್ ಬಿ. ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರವು ಕೊರೋನ ಮೊದಲನೆ ಅಲೆ ಮತ್ತು ಎರಡನೆಯ ಅಲೆಯಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಕೋವಿಡ್ ಅಪಾಯ ಭತ್ತೆಯನ್ನು ಬಿಡುಗಡೆ ಮಾಡುತ್ತದೆ ಎಂದು ತಿಳಿಸಿತ್ತು. ಅದರಂತೆ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಾಧಿಕಾರಿಗಳಿಗೆ ಮಾತ್ರ ಕೋವಿಡ್ ಅಪಾಯ ಭತ್ತೆಯನ್ನು ಬಿಡುಗಡೆಗೊಳಿಸಿ, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಾಧಿಕಾರಿಗಳಿಗೆ ಬಿಡುಗಡೆ ಮಾಡಿಲ್ಲ. ವೈದ್ಯಕೀಯ ಶಿಕ್ಷಣ ಇಲಾಖೆಯ ಶುಶ್ರೂಷಾಧಿಕಾರಿಗಳು ಕೊರೋನ ವಾರಿಯರ್ಸ್ ಆಗಿದ್ದು, ಕೋವಿಡ್ ಸಂಕಷ್ಟದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ, ರೋಗಿಗಳ ಸೇವೆ ಮಾಡಿದ್ದಾರೆ. ಆದರೂ ಅವರ ಸೇವೆಯನ್ನು ಸರಕಾರ ಪರಿಗಣಿಸದೆ ಇರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು. 

ಸರಕಾರವು ಅನುಸರಿಸುತ್ತಿರುವ ಈ ಮಲತಾಯಿ ಧೋರಣೆಯನ್ನು ಖಂಡಿಸಿ, ಪ್ರತಿಭಟನೆ ಮಾಡಲಾಗುವುದು. ಹಾಗಾಗಿ ಜ.17ರಿಂದ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಾಧಿಕಾರಿಗಳು ಕಪ್ಪು ಪಟ್ಟಿಯನ್ನು ಧರಿಸಿ, ರೋಗಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕೆಲಸ ಮಾಡಲಾಗುವುದು. ಈ ಮೂಲಕ ಸರಕಾರದ ಗಮನ ಸೆಳೆಯಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News