ಬೆಂಗಳೂರು: ವಿಶೇಷ ಜಿಲ್ಲಾಧಿಕಾರಿ-3 ಹುದ್ದೆ ಸೃಷ್ಟಿಗೆ ಆದೇಶ

Update: 2022-01-14 17:44 GMT

ಬೆಂಗಳೂರು, ಜ.14: ಬೆಂಗಳೂರು ನಗರಜಿಲ್ಲೆಯಲ್ಲಿ ಬಾಕಿಯಿರುವ ಅರೆ ನ್ಯಾಯಿಕ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಮತ್ತೊಂದು ವಿಶೇಷ ಜಿಲ್ಲಾಧಿಕಾರಿ ಹುದ್ದೆಯನ್ನು ನೇಮಿಸುವಂತೆ ಕಂದಾಯ ಇಲಾಖೆಯು ಆದೇಶ ಹೊರಡಿಸಿದೆ.

ಬೆಂಗಳೂರು ನಗರಜಿಲ್ಲೆಯಲ್ಲಿ ಬೆಲೆ ಬಾಳುವ ಭೂಕಬಳಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಾಗೂ ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಾಲಂ 136(3) ಅಡಿ ಅತಿ ಹೆಚ್ಚು ಪ್ರಕರಣಗಳು ಬಾಕಿ ಇರುವುದರಿಂದ ಅವುಗಳನ್ನು ವಿಲೇವಾರಿ ಮಾಡಲು ಐಎಎಸ್ ಅಧಿಕಾರಿಯನ್ನು ವಿಶೇಷ ಜಿಲ್ಲಾಧಿಕಾರಿ-3 ಹುದ್ದೆಗೆ ನೇಮಿಸುವಂತೆ ಆದೇಶದಲ್ಲಿ ತಿಳಿಸಿದೆ. 

ಹಾಗಾಗಿ 2014ರಲ್ಲಿ ಹುದ್ದೆಗಳ ನಿಯೋಜನೆ ಕುರಿತಂತೆ ವಿಶೇಷ ಜಿಲ್ಲಾಧಿಕಾರಿ-1 ಹಾಗೂ ವಿಶೇಷ ಜಿಲ್ಲಾಧಿಕಾರಿ-2 ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಐಎಎಸ್ ಅಧಿಕಾರಿಗಳು ನ್ಯಾಯಿಕ-ಅರೆ ನ್ಯಾಯಿಕ ಪ್ರಕರಣಗಳನ್ನು ಆಲಿಸುವುದು. ಆಡಳಿತಾತ್ಮಕ ಹಾಗೂ ಇನ್ನಿತರ ವಿಷಯಗಳನ್ನು ವಿಶೇಷ ಜಿಲ್ಲಾಧಿಕಾರಿ-1 ಹುದ್ದೆಯಲ್ಲಿರುವವರು ನಿರ್ವಹಿಸುವುದು ಎಂದು ತಿಳಿಸಿತ್ತು. ಆದರೆ ಈಗ ಅದನ್ನು ಪರಿಷ್ಕರಿಸಿ, ಕರ್ನಾಟಕ ಭೂಕಂದಾಯ ಕಾಯ್ದೆ-1964ರ 9ರಡಿಯಲ್ಲಿ ವಿಶೇಷ ಜಿಲ್ಲಾಧಿಕಾರಿ-3 ಹುದ್ದೆಗೆ ವಿಶೇಷ ಜಿಲ್ಲಾಧಿಕಾರಿ-1ರ ಹುದ್ದೆಯಲ್ಲಿರುವ ಕೆಲವು ವಿಷಯಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಸ್ತಾಂತರಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News