ಕೊರೋನದಿಂದ ರಕ್ಷಣೆ ಪಡೆಯಲು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Update: 2022-01-14 18:01 GMT

ಬೆಂಗಳೂರು, ಜ.14: ಕೊರೋನ ಮಹಾಮಾರಿಯಿಂದ ರಕ್ಷಣೆ ಪಡೆಯಲು ಸರಕಾರದ ಯೋಜನೆಯಂತೆ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಬೇಕು ಎಂದು ನಾನು ರಾಜ್ಯದ ಎಲ್ಲ ಜನತೆಗೆ ಪ್ರಾರ್ಥನೆ ಮಾಡುತ್ತೇನೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಶುಕ್ರವಾರ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕೋವಿಡ್ ಬೂಸ್ಟರ್ ಡೋಸ್ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಮಹಾಮಾರಿಯ ವಿರುದ್ಧ ಹೋರಾಡಲು ಲಸಿಕಾಕರಣ ಅಗತ್ಯವಿದೆ. ನಾನು ಹೊಸದಿಲ್ಲಿಯಲ್ಲಿದ್ದಾಗ ಎರಡು ಡೋಸ್ ಲಸಿಕೆ ಪಡೆದಿದ್ದೆ. ಇಂದು ಇಲ್ಲಿ ಬೂಸ್ಟರ್ ಡೋಸ್ ಪಡೆದಿದ್ದೇನೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ನನಗೆ ಲಸಿಕೆ ಪಡೆದ ಪ್ರಮಾಣ ಪತ್ರ ನೀಡಿದ್ದಾರೆ. ರಾಜ್ಯದ ಜನರೂ ಸ್ವಯಂಪ್ರೇರಿತವಾಗಿ ಮುಂದೆ ಬಂದು ಕೋವಿಡ್ ಲಸಿಕೆ ಪಡೆಯುವ ಕುರಿತು ಜಾಗೃತಿ ಮೂಡಿಸಬೇಕಿದೆ. ಇಡೀ ದೇಶಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಲಸಿಕಾ ಅಭಿಯಾನ ಮುಂಚೂಣಿಯಲ್ಲಿ ನಡೆಯುತ್ತಿದ್ದು, ಇದಕ್ಕಾಗಿ ಸರಕಾರ, ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಇವತ್ತು ಮಕರ ಸಂಕ್ರಾಂತಿ ಉತ್ಸವ ಇದೆ. ಇಡೀ ದೇಶದಲ್ಲಿ ಮಕರ ಸಂಕ್ರಾಂತಿಯನ್ನು ಪೊಂಗಲ್, ಲೋದಿ, ಉತ್ತರಾಯಣ ಉತ್ಸವ ಸೇರಿದಂತೆ ಇನ್ನಿತರ ಹೆಸರುಗಳಿಂದ ಆಚರಿಸಲಾಗುತ್ತದೆ. ಇದಕ್ಕಾಗಿ ನಾನು ಎಲ್ಲರಿಗೂ ಶುಭ ಕೋರುತ್ತೇನೆ ಎಂದು ರಾಜ್ಯಪಾಲ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News