ವ್ಯಕ್ತಿಯ ಒಪ್ಪಿಗೆ ಪಡೆಯದೆ ಬಲವಂತದ ಲಸಿಕೆ ನೀಡುವುದಿಲ್ಲ: ಸುಪ್ರೀಂಕೋರ್ಟ್ ಗೆ ತಿಳಿಸಿದ ಕೇಂದ್ರ

Update: 2022-01-17 18:00 GMT

ಹೊಸದಿಲ್ಲಿ,ಜ.17: ಕೇಂದ್ರ ಆರೋಗ್ಯ ಸಚಿವಾಲಯವು ಹೊರಡಿಸಿರುವ ಕೋವಿಡ್-19 ಲಸಿಕೆ ನೀಡಿಕೆ ಮಾರ್ಗಸೂಚಿಯಲ್ಲಿ ವ್ಯಕ್ತಿಯ ಒಪ್ಪಿಗೆ ಪಡೆಯದೆ ಬಲವಂತವಾಗಿ ಲಸಿಕೆಯನ್ನು ನೀಡುವಂತೆ ಎಲ್ಲಿಯೂ ಹೇಳಲಾಗಿಲ್ಲ ಎಂದು ಕೇಂದ್ರವು ಸರ್ವೋಚ್ಚ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ. ವಿಕಲಾಂಗ ವ್ಯಕ್ತಿಗಳಿಗೆ ಲಸಿಕೆ ಪ್ರಮಾಣಪತ್ರವನ್ನು ಹಾಜರು ಪಡಿಸುವುದರಿಂದ ವಿನಾಯಿತಿ ನೀಡುವ ವಿಷಯ ಕುರಿತಂತೆ ಕೇಂದ್ರವು, ಯಾವುದೇ ಉದ್ದೇಶಕ್ಕಾಗಿ ಲಸಿಕೆ ಪ್ರಮಾಣಪತ್ರವನ್ನು ಜೊತೆಯಲ್ಲಿ ಒಯ್ಯುವುದನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ)ವನ್ನು ತಾನು ಹೊರಡಿಸಿಲ್ಲ ಎಂದು ತಿಳಿಸಿದೆ.

ವಿಕಲಾಂಗ ವ್ಯಕ್ತಿಗಳ ಮನೆಮನೆಗೆ ತೆರಳಿ ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆ ನೀಡಿಕೆಯನ್ನು ಕೋರಿ ಎನ್‌ಜಿಒ ಅವೇರಾ ಸಲ್ಲಿಸಿರುವ ಅರ್ಜಿಗೆ ಉತ್ತರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇಂದ್ರವು ಇದನ್ನು ತಿಳಿಸಿದೆ. 2022,ಜ.11ಕ್ಕೆ ಇದ್ದಂತೆ ವಿಕಲಾಂಗ ವ್ಯಕ್ತಿಗಳಿಗೆ ಒಟ್ಟು 23,768 ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದೂ ಅದು ತಿಳಿಸಿದೆ.

ಪ್ರಸ್ತುತ ಸಾಂಕ್ರಾಮಿಕ ಸ್ಥಿತಿಯಲ್ಲಿ ಕೋವಿಡ್ ಲಸಿಕೆ ನೀಡಿಕೆಯು ವ್ಯಾಪಕ ಸಾರ್ವಜನಿಕ ಹಿತಾಸಕ್ತಿಯ ಕ್ರಮವಾಗಿದೆ. ಎಲ್ಲ ನಾಗರಿಕರು ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಮತ್ತು ಅದಕ್ಕಾಗಿ ಸೂಕ್ತ ವ್ಯವಸ್ಥೆಗಳು ಹಾಗೂ ಪ್ರಕ್ರಿಯೆಗಳನ್ನು ರೂಪಿಸಲಾಗಿದೆ ಎಂದು ವಿವಿಧ ಮುದ್ರಣ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಸಲಹೆ ನೀಡಲಾಗಿದೆ,ಜಾಹೀರಾತುಗಳನ್ನು ಪ್ರಕಟಿಸಲಾಗಿದೆ ಮತ್ತು ಸಂವಹನ ನಡೆಸಲಾಗಿದೆ. ಆದಾಗ್ಯೂ ಯಾವುದೇ ವ್ಯಕ್ತಿಯ ಇಚ್ಛೆಗೆ ವಿರುದ್ಧವಾಗಿ ಬಲವಂತದಿಂದ ಲಸಿಕೆಯನ್ನು ನೀಡುವಂತಿಲ್ಲ ಎಂದು ಕೇಂದ್ರವು ಅಫಿಡವಿಟ್ನಲ್ಲಿ ತಿಳಿಸಿದೆ.

ಮನೆ ಬಾಗಿಲಿಗೆ ಲಸಿಕೆ ಕುರಿತಂತೆ ಕೇಂದ್ರವು,ಅರ್ಹ ಜನರಿಗೆ ಗರಿಷ್ಠ ಸೌಲಭ್ಯಗಳು ದೊರೆಯುವಂತಾಗಲು ಬ್ಲಾಕ್ ಅಥವಾ ನಗರ ಪ್ರದೇಶ ಮಟ್ಟದಲ್ಲಿ ಜನರಿಗೆ ಸಮೀಪವಿರುವ ಸ್ಥಳಗಳಲ್ಲಿ ಲಸಿಕೆ ಕೇಂದ್ರಗಳನ್ನು ತೆರೆಯುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.

ಮುಖಗವುಸು ಮತ್ತು ಮುಖಕವಚಗಳ ಬಳಕೆಯನ್ನು ಮುಂದುವರಿಸುವ ಅಗತ್ಯಕ್ಕೆ ಒತ್ತು ನೀಡಿರುವ ಕೇಂದ್ರವು,ಅಂಗವಿಕಲರು ಸೇರಿದಂತೆ ಅರ್ಹ ಫಲಾನುಭವಿಗಳಿಗೆ ಲಸಿಕೆಯನ್ನು ನೀಡಲು ‘ಹರ್ ಘರ್ ದಸ್ತಕ್ ’ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ಗುರುತು ಚೀಟಿಗಳನ್ನು ಹೊಂದಿಲ್ಲದವರೂ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ ಎಂದೂ ಕೇಂದ್ರವು ಅಫಿಡವಿಟ್ನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News