ಬೆಂಗಳೂರು: ಗಾಂಜಾ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

Update: 2022-01-17 11:35 GMT
ಆರೋಪಿ ರಾಹುಲ್

ಬೆಂಗಳೂರು, ಜ.17: ನನ್ನನ್ನು ಬಂಧಿಸಿ ಎಂದು ಪೆÇಲೀಸರಿಗೆ ಸವಾಲೆಸೆದು ತಲೆ ಮರೆಸಿಕೊಂಡಿದ್ದ ರೌಡಿಯ ಕಾಲಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಇಲ್ಲಿನ ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹನುಮಂತನಗರ ಪೊಲೀಸ್ ಠಾಣೆಯ ರೌಡಿಶೀಟರ್ ರಾಹುಲ್ ಯಾನೆ ಸ್ಟಾರ್(22) ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ವಿರುದ್ಧ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದು, ಇತ್ತೀಚೆಗೆ ವಿಡಿಯೊವೊಂದನ್ನು ಮಾಡಿ ಪೊಲೀಸರನ್ನು ಟೀಕಿಸಿ ನನ್ನನ್ನು ಬಂಧಿಸಲು ಆಗುವುದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದನು.

ಸೋಮವಾರ ಬೆಳಗಿನ ಜಾವ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣನಗರದ ಬಳಿ ಸ್ಕೂಟರ್‍ನಲ್ಲಿ ಆರೋಪಿ ರಾಹುಲ್ ಬರುತ್ತಿದ್ದಾನೆಂಬ ಮಾಹಿತಿ ಹನುಮಂತನಗರ ಠಾಣೆ ಪೊಲೀಸರಿಗೆ ಲಭಿಸಿದೆ.

ತಕ್ಷಣ ಎಸ್ಸೈ ಬಸವರಾಜ್ ಪಾಟೀಲ್ ಅವರು ಹೆಡ್ ಕಾನ್‍ಸ್ಟೆಬಲ್ ನಿಂಗಪ್ಪ ಮತ್ತಿತರ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿದ್ದಾರೆ. ಪೊಲೀಸರನ್ನು ಕಂಡ ತಕ್ಷಣ ಆರೋಪಿಯು ನಿಂಗಪ್ಪ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. 

ತಕ್ಷಣ ಬಸವರಾಜ್ ಪಾಟೀಲ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ. ಪೊಲೀಸರ ಮಾತನ್ನು ಲೆಕ್ಕಿಸದೆ ಮತ್ತೆ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಆತನ ಬಲಗಾಲಿಗೆ ತಗುಲಿದಾಗ ಕುಸಿದು ಬಿದ್ದಿದ್ದಾನೆ. 

ತಕ್ಷಣ ಪೊಲೀಸರು ಆರೋಪಿಯನ್ನು ಸುತ್ತುವರಿದು ವಶಕ್ಕೆ ಪಡೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ನಿಂಗಪ್ಪ ಅವರು ದಕ್ಷಿಣ ವಿಭಾಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

ಆರೋಪಿ ವಿರುದ್ಧ 4 ಕೊಲೆಯತ್ನ ಪ್ರಕರಣ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 21 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ 8 ವಾರೆಂಟ್‍ಗಳಿವೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News