ಕಳೆದ ವರ್ಷ ದೇಶದಲ್ಲಿ ಬಿಲಿಯಾಧಿಪತಿಗಳ ಸಂಖ್ಯೆಯಲ್ಲಿ ಹೆಚ್ಚಳ, ಬಡವರ ಸಂಖ್ಯೆ ದುಪ್ಟಟ್ಟು: ಆಕ್ಸ್ ಫ್ಯಾಮ್ ವರದಿ

Update: 2022-01-17 18:27 GMT
ಸಾಂದರ್ಭಿಕ ಚಿತ್ರ

ದಾವೋಸ್, ಜ.17: ಕೋವಿಡ್-19 ಸಾಂಕ್ರಾಮಿಕದ ಪ್ರಥಮ 2 ವರ್ಷದ ಅವಧಿಯಲ್ಲಿ ವಿಶ್ವದ 99% ಜನರ ಆದಾಯ ಕುಸಿದಿದ್ದು 16 ಕೋಟಿಗೂ ಅಧಿಕ ಮಂದಿ ಬಡತನದ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಸೋಮವಾರ ಬಿಡುಗಡೆಯಾದ ಅಧ್ಯಯನ ವರದಿಯೊಂದು ಹೇಳಿದೆ.

 ಆದರೆ ಇದೇ ಅವಧಿಯಲ್ಲಿ ವಿಶ್ವದ 10 ಶ್ರೀಮಂತ ವ್ಯಕ್ತಿಗಳ ಆದಾಯ ದುಪ್ಪಟ್ಟಿಗಿಂತಲೂ ಅಧಿಕಗೊಂಡಿದ್ದು , ಪ್ರತೀ ದಿನದ ಆದಾಯ 9000 ಕೋಟಿಗೆ ತಲುಪಿದೆ . ಆದಾಯದ ಅಸಮಾನತೆಯಿಂದ ಪ್ರತೀ ದಿನ ಕನಿಷ್ಟ 21,000 ಸಾವು, ಅಂದರೆ ಪ್ರತೀ 4 ಸೆಕೆಂಡ್‌ಗೆ ಒಬ್ಬ ವ್ಯಕ್ತಿ ಸಾಯುತ್ತಿದ್ದಾನೆ ಎಂದು ‘ಅಸಮಾನತೆ ಕೊಲ್ಲುತ್ತದೆ’   ಎಂಬ ಶೀರ್ಷಿಕೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದಾವೋಸ್‌ನಲ್ಲಿ ಆನ್‌ಲೈನ್ ಮೂಲಕ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯ ಆರಂಭದ ದಿನವೇ ಆಕ್ಸ್‌ಫಮ್ ಇಂಟರ್‌ನ್ಯಾಷನಲ್‌ನ ಈ ಅಧ್ಯಯನ ವರದಿ ಬಿಡುಗಡೆಗೊಂಡಿದೆ. ಆರೋಗ್ಯ ರಕ್ಷಣೆ, ಲಿಂಗ ಆಧಾರಿತ ಹಿಂಸೆ, ಹಸಿವು ಮತ್ತು ಹವಾಮಾನದ ಕುಸಿತದ ಸಮಸ್ಯೆಯಿಂದ ಜಾಗತಿಕವಾಗಿ ಸಂಭವಿಸುವ ಸಾವಿನ ಪ್ರಕರಣಗಳ ಬಗ್ಗೆ ಸಾಂಪ್ರದಾಯಿಕವಾಗಿ ನಡೆಸಿದ ಅಧ್ಯಯನ ಇದಾಗಿದೆ ಎಂದು ವರದಿ ಹೇಳಿದೆ.

 ಸಾಂಕ್ರಾಮಿಕ ಅವಧಿಯ ಆರಂಭಿಕ 2 ವರ್ಷದಲ್ಲಿ ವಿಶ್ವದ 10 ಶ್ರೀಮಂತ ವ್ಯಕ್ತಿಗಳ ಆದಾಯ ಪ್ರತೀ ಸೆಕೆಂಡ್‌ಗೆ 15,000 ಡಾಲರ್ ಏರಿಕೆಯಾಗಿದ್ದು, ಒಂದು ವೇಳೆ ಇವರ ಸಂಪತ್ತಿನಲ್ಲಿ 99.999% ನಷ್ಟವಾದರೂ ಇವರು ಭೂಮಿಯಲ್ಲಿರುವ 99% ಮಂದಿಗಿಂತ ಶ್ರೀಮಂತರಾಗಿರುತ್ತಾರೆ. ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಶ್ರೀಮಂತ ವ್ಯಕ್ತಿಗಳ ಆದಾಯದ ಮೇಲೆ ಒಮ್ಮೆ ವಿಧಿಸುವ ತೆರಿಗೆಯ ಹಣದಿಂದ ಇಡೀ ವಿಶ್ವಕ್ಕೆ ಸಾಕಾಗುವಷ್ಟು ಲಸಿಕೆಗೆ ಪಾವತಿ ಮಾಡಬಹುದು. ಜೊತೆಗೆ 80ಕ್ಕೂ ಅಧಿಕ ದೇಶಗಳಲ್ಲಿ ಸಾರ್ವತ್ರಿಕ ಆರೋಗ್ಯ ಸೇವೆ, ಸಾಮಾಜಿಕ ಭದ್ರತೆಯ ವೆಚ್ಚ, ಹವಾಮಾನ ವೈಪರೀತ್ಯ ಸಮಸ್ಯೆಗೆ ಪರಿಹಾರ ರೂಪಿಸಲು ಅನುದಾನ ಅಥವಾ ಲಿಂಗಾಧಾರಿತ ಹಿಂಸೆಯ ಪ್ರಕರಣ ಕಡಿಮೆಗೊಳಿಸಲು ಈ ಮೊತ್ತ ಸಾಕಾಗುತ್ತದೆ. ಇಷ್ಟು ಅನುದಾನ ನೀಡಿದರೂ, ಈ ಶ್ರೀಮಂತರ ಬಳಿ ಸಾಂಕ್ರಾಮಿಕಕ್ಕೂ ಹಿಂದಿನ ಕಾಲಕ್ಕಿಂತ 8 ಬಿಲಿಯನ್ ಡಾಲರ್ ಹೆಚ್ಚಿನ ಹಣವಿರುತ್ತದೆ ಎಂದು ವರದಿ ಹೇಳಿದೆ.

 . ವಿಶ್ವದಲ್ಲಿ ಅತ್ಯಂತ ಬಡತನದಲ್ಲಿರುವ 3.1 ಬಿಲಿಯನ್ ಜನರ ಸಂಪತ್ತಿಗಿಂತ 6 ಪಟ್ಟು ಅಧಿಕ ಸಂಪತ್ತು ಈ 10 ಶ್ರೀಮಂತರ ಬಳಿಯಿದೆ . ತೆರಿಗೆಯ ಮೂಲಕ ಗಣ್ಯರ ವಿಪರೀತ ಸಂಪತ್ತನ್ನು ಹಿಂದಕ್ಕೆ ಪಡೆದು ಅದನ್ನು ನಿಜವಾದ ಆರ್ಥಿಕತೆಗೆ ಹಿಂತಿರುಗಿಸಿ ಜೀವ ಉಳಿಸುವುದು ಈಗಿನ ಅಗತ್ಯವಾಗಿದೆ ಎಂದು ಆಕ್ಸ್‌ಫಾಮ್ ಇಂಟರ್‌ನ್ಯಾಷನಲ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಗ್ಯಾಬ್ರಿಯೆಲಾ ಬುಚರ್ ಹೇಳಿದ್ದಾರೆ.

  ಹವಾಮಾನ ವೈಪರೀತ್ಯ ಸಮಸ್ಯೆಗೂ ಅಸಮಾನತೆ ಹೆಚ್ಚಿನ ಕಾರಣವಾಗಿದೆ. 1% ಶ್ರೀಮಂತ ದೇಶಗಳು ಕೆಳಹಂತದಲ್ಲಿರುವ 50% ದೇಶಗಳಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಕಾರ್ಬನ್ ಡಯಾಕ್ಸೈಡ್ ಅನ್ನು ವಾತಾವರಣಕ್ಕೆ ಸೇರಿಸುತ್ತಿವೆ. ಇದರಿಂದ 2020 ಹಾಗೂ 2021ರಲ್ಲಿ ಜಗತ್ತಿನೆಲ್ಲೆಡೆ ಕಾಡ್ಗಿಚ್ಚು, ನೆರೆ, ಸುಂಟರಗಾಳಿ, ಬೆಳೆ ವೈಫಲ್ಯ, ಹಸಿವು ಮುಂತಾದ ಹವಾಮಾನ ವೈಪರೀತ್ಯದ ಸಮಸ್ಯೆ ಉಲ್ಬಣಗೊಂಡಿದೆ. ಕೋವಿಡ್ ಸೋಂಕು ಉಲ್ಬಣಗೊಂಡ ಬಳಿಕ ಈ ಸಮಸ್ಯೆಗಳು ಲಿಂಗಾಧಾರಿತ ಹಿಂಸೆ ಪ್ರಕರಣಗಳಾಗಿ ಬದಲಾದವು. ಸಾಂಕ್ರಾಮಿಕ ರೋಗವು ಲಿಂಗ ಸಮಾನತೆಯನ್ನು 99 ವರ್ಷದಿಂದ 135 ವರ್ಷಕ್ಕೆ ಹಿಮ್ಮೆಟ್ಟಿಸಿದೆ. 2020ರಲ್ಲಿ ಮಹಿಳೆಯರ ಆದಾಯದಲ್ಲಿ 800 ಬಿಲಿಯನ್ ಡಾಲರ್ ನಷ್ಟವಾಗಿದ್ದು, 2019ಕ್ಕೆ ಹೋಲಿಸಿದರೆ ಈಗ ಉದ್ಯೋಗದಲ್ಲಿರುವ ಮಹಿಳೆಯರ ಸಂಖ್ಯ್ಲೆ 1.3 ಕೋಟಿ ಕಡಿಮೆಯಾಗಿದೆ. ಆಫ್ರಿಕಾ , ಕ್ಯಾರಿಬಿಯನ್ ದೇಶಗಳು ಮತ್ತು ಲ್ಯಾಟಿನ್ ಅಮೆರಿಕದ 1 ಬಿಲಿಯನ್ ಮಹಿಳೆಯರ ಒಟ್ಟು ಆದಾಯಕ್ಕಿಂತ 252 ಪುರುಷರ ಆದಾಯ ಹೆಚ್ಚಿದೆ.

  ಸಾಂಕ್ರಾಮಿಕವು ಜನಾಂಗೀಯ ಗುಂಪಿಗೆ ಹೆಚ್ಚು ಸಮಸ್ಯೆ ತಂದಿದೆ. ಇಂಗ್ಲೆಂಡ್‌ನಲ್ಲಿ ಸೋಂಕಿನ 2ನೇ ಅಲೆ ಸಂದರ್ಭ ಶ್ವೇತವರ್ಣೀಯ ಇಂಗ್ಲೆಂಡ್ ಜನರಿಗಿಂತ ಬಾಂಗ್ಲಾದೇಶ ಮೂಲದ ಜನತೆ ಸೋಂಕಿನಿಂದ ಸಾವನ್ನಪ್ಪುವ ಸಂಭವನೀಯತೆ 5 ಪಟ್ಟು ಹೆಚ್ಚಿತ್ತು. ಬ್ರೆಝಿಲ್‌ನಲ್ಲಿ ಕಪ್ಪು ಬಣ್ಣದವರು ಬಿಳಿಯ ಬಣ್ಣದವರಿಗಿಂತ ಸೋಂಕಿನಿಂದಾಗಿ ಮೃತಪಡುವ ಸಂಭವನೀಯತೆ 1.5 ಪಟ್ಟು ಹೆಚ್ಚಿತ್ತು. ಅಮೆರಿಕದಲ್ಲಿ ಬಿಳಿಯರಷ್ಟೇ ಜೀವಿತಾವಧಿ ಹೊಂದಿದ್ದರೆ ಸುಮಾರು 34 ಲಕ್ಷ ಕಪ್ಪು ಬಣ್ಣದವರು ಈಗಲೂ ಬದುಕುಳಿಯುತ್ತಿದ್ದರು ಎಂದು ವರದಿ ಹೇಳಿದೆ.

ಸಾಂಕ್ರಾಮಿಕ ಆರಂಭವಾದಂದಿನಿಂದ ಶ್ರೀಮಂತರು ಗಳಿಸಿದ ಈ ಭರ್ಜರಿ ಆದಾಯದ ವನ್ನು ಸಂಪತ್ತು ತೆರಿಗೆ, ಬಂಡವಾಳ ತೆರಿಗೆ ಮುಂತಾದ ವಿಧಗಳಿಂದ ಸರಕಾರ ಹಿಂದಕ್ಕೆ ಪಡೆಯಬೇಕು. ಅಲ್ಲದೆ ಶ್ರೀಮಂತರು ಈ ಹೆಚ್ಚುವರಿ ಆದಾಯವನ್ನು ಸಾರ್ವತ್ರಿಕ ಆರೋಗ್ಯ ರಕ್ಷಣೆ, ಸಾಮಾಜಿಕ ಭದ್ರತೆ ಮತ್ತಿತರ ಕ್ಷೇತ್ರಗಳಲ್ಲಿ ವಿನಿಯೋಗಿಸಬೇಕು ಎಂದು ವರದಿ ಸಲಹೆ ನೀಡಿದೆ.

 ಶ್ರೀಮಂತ ಸರಕಾರಗಳು ಕೊರೋನ ಲಸಿಕೆಗೆ ಸಂಬಂಧಿಸಿದ ಬೌದ್ಧಿಕ ಆಸ್ತಿಯ ಏಕಸ್ವಾಮ್ಯವನ್ನು ರದ್ದುಗೊಳಿಸುವ ಮೂಲಕ ಇನ್ನಷ್ಟು ದೇಶಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ಅಭಿವೃದ್ಧಿಗೊಳಿಸಲು ನೆರವಾಗಬೇಕು. ದಿ ಯಂಗ್ ಕ್ಲೈಮೇಟ್ ಸ್ಟ್ರೈಕರ್ಸ್, ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್, ಭಾರತದ ರೈತರ ಹೋರಾಟ ಮುಂತಾದ ಅಭಿಯಾನಗಳ ಆಗ್ರಹವನ್ನು ತಾಳ್ಮೆಯಿಂದ ಕೇಳಿ ಅದಕ್ಕೆ ಪರಿಹಾರ ರೂಪಿಸಲು ಸರಕಾರಗಳು ಮುಂದಾದರೆ ಈ ಅಸಮಾನತೆ ತೊಲಗಬಹುದು ಎಂದು ವರದಿ ಉಲ್ಲೇಖಿಸಿದೆ.

ಕೋಟ್ಯಾಧೀಶರಿಗೆ ವರವಾದ ಸಾಂಕ್ರಾಮಿಕ

    ಆಕ್ಸ್‌ಫಮ್ ವರದಿ ಪ್ರಕಾರ, ಕೋವಿಡ್ ಸೋಂಕು ಆರಂಭವಾದಂದಿನಿಂದ ಮಿಲಿಯಾಧೀಶರ ಆದಾಯ, ಸಂಪತ್ತಿನಲ್ಲಿ ಭಾರೀ ಹೆಚ್ಚಳವಾಗಿದ್ದು ಕಳೆದ 14 ವರ್ಷಕ್ಕಿಂತಲೂ ಹೆಚ್ಚಿನ ಆದಾಯ, ಅಂದರೆ 5 ಲಕ್ಷ ಕೋಟಿ ಡಾಲರ್ ಆದಾಯ 2 ವರ್ಷದಲ್ಲಿ ದಾಖಲಾಗಿದೆ. ಬಿಲಿಯನೇರ್‌ಗಳಿಗೆ ಸಾಂಕ್ರಾಮಿಕ ಎಂಬುದು ವರವಾಗಿ ಪರಿಣಮಿಸಿದೆ. ಸೋಂಕಿನಿಂದ ಕಂಗೆಟ್ಟ ಅರ್ಥವ್ಯವಸ್ಥೆಗೆ ಚೇತರಿಕೆ ನೀಡಲು ಆಯಾ ದೇಶದ ಸೆಂಟ್ರಲ್ ಬ್ಯಾಂಕ್‌ಗಳು ಲಕ್ಷಾಂತರ ಕೋಟ ಡಾಲರ್ ಮೊತ್ತವನ್ನು ಆರ್ಥಿಕ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು ಇದರಲ್ಲಿ ಹೆಚ್ಚಿನ ಪಾಲು , ಸ್ಟಾಕ್ ಮಾರ್ಕೆಟ್‌ನ ಏರಿಕೆಯಿಂದ ಶ್ರೀಮಂತರ ಕಿಸೆ ಸೇರಿದೆ. ಈ ಸಾಂಕ್ರಾಮಿಕವನ್ನು ಕೊನೆಗೊಳಿಸುವ ಉದ್ದೇಶದಿಂದ ಲಸಿಕೆ ಸಂಶೋಧಿಸಿದರೆ, ಶ್ರೀಮಂತ ದೇಶಗಳು ಬೃಹತ್ ಔಷಧ ಸಂಸ್ಥೆಗಳಿಗೆ ಏಕಸ್ವಾಮ್ಯ ಸಾಧಿಸಲು ಅವಕಾಶ ನೀಡಿರುವುದರಿಂದ ಲಕ್ಷಾಂತರ ಜನತೆ ಲಸಿಕೆಯಿಂದ ವಂಚಿತರಾಗಿದ್ದಾರೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News