ಕದ್ರಿ ದೇವಸ್ಥಾನದ ಆಡಳಿತ ಕದ್ರಿ ಮಠದ ಸಮಿತಿಗೆ ಒಪ್ಪಿಸಲು ಒತ್ತಾಯ

Update: 2022-01-17 14:53 GMT

ಮಂಗಳೂರು, ಜ.17: ಎಲ್ಲಾ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಡಳಿತಕ್ಕೆ ಒಳಪಟ್ಟ ದೇವಸ್ಥಾನಗಳನ್ನು ಆಯಾಯ ಸಂಬಂಧ ಪಟ್ಟವರಿಗೆ ಹಸ್ತಾಂತರ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅದರಂತೆ ಮಂಗಳೂರಿನಲ್ಲಿರುವ ಕದ್ರಿ ಮಂಜುನಾಥ ದೇವಸ್ಥಾನದ ಆಡಳಿತವನ್ನು ಕದ್ರಿ ಮಠದಲ್ಲಿರುವ ಸಮಿತಿಗೆ ಒಪ್ಪಿಸಬೇಕು ಎಂದು ಕದ್ರಿ ಯೋಗೀಶ್ವರ ಮಠ(ಜೋಗಿಮಠ) ಜೀರ್ಣೋದ್ಧಾರ ಮತ್ತು ಕಾರ್ಯನಿರ್ವಹಣಾ ಸಮಿತಿ ಅಧ್ಯಕ್ಷ, ಮಾಜಿ ಮೇಯರ್ ಹರಿನಾಥ್ ಒತ್ತಾಯಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕದ್ರಿ ದೇವಸ್ಥಾನವು ಹಿಂದಿನಿಂದಲೂ ಸಂಪೂರ್ಣವಾಗಿ ಕದ್ರಿ ಮಠದ ಆಡಳಿತಕ್ಕೆ ಒಳಪಟ್ಟಿತ್ತು. ಆಮೇಲೆ ಈ ದೇವಸ್ಥಾನವನ್ನು ಸಂಪೂರ್ಣವಾಗಿ ಧಾರ್ಮಿಕ ದತ್ತಿ ಇಲಾಖೆ ತನ್ನ ಸುಪರ್ದಿಗೆ ವಹಿಸಿಕೊಂಡಿತ್ತು. ಇದೀಗ ಮತ್ತೆ ಬದಲಾವಣೆಯಾಗುತ್ತಿರುವುದರಿಂದ ಶ್ರೀ ಕ್ಷೇತ್ರದ ಆಡಳಿತವನ್ನು ಕದ್ರಿ ಮಠದಲ್ಲಿರುವ ಸಮಿತಿಗೆ ಒಪ್ಪಿಸುವಂತಾಗಬೇಕು ಎಂದರು.

ಈ ಮೊದಲು ಸರ್ಕ್ಯೂಟ್ ಹೌಸ್‌ನಿಂದ ಪದವು ಹೈಸ್ಕೂಲ್‌ವರೆಗಿನ ರಸ್ತೆಯನ್ನು ಜೋಗಿಮಠದ ರಸ್ತೆಯೆಂದು ನಾಮಕರಣ ಮಾಡಲಾಗಿತ್ತುಘಿ. ಸ್ಮಾರ್ಟ್ ಸಿಟಿ ಕೆಲಸ ಆರಂಭವಾದ ಬಳಿಕ ಆ ಬೋರ್ಡ್ ತೆಗೆಯಲಾಗಿದೆ. ಕಾಮಗಾರಿ ಮುಗಿದ ತಕ್ಷಣ ಮತ್ತೆ ಅದೇ ನಾಮಲಕ ಅಳವಡಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೂ ತರಲಾಗಿದೆ. ಅಲ್ಲದೆ ಸರ್ಕ್ಯೂಟ್ ಹೌಸ್ ರಸ್ತೆ ಬಳಿ ಇರುವ ಬಸ್ ನಿಲ್ದಾಣದ ಸಮೀಪ ಗೋರಕ್ಷನಾಥ ದೇವಸ್ಥಾನಕ್ಕೆ ಹೋಗುವ ರಸ್ತೆ ಎಂದು ನಾಮಕರಣ ಮಾಡಿರುವುದು ತಪ್ಪಾಗಿದೆ. ಅದನ್ನು ಕಾಲಭೈರವ ದೇವಸ್ಥಾನಕ್ಕೆ ಹೋಗುವ ರಸ್ತೆ ಎಂದು ಸರಿಪಡಿಸಬೇಕು. ಜಿಲ್ಲಾಡಳಿತ ಇದನ್ನು ಗಮನಿಸಬೇಕು. ಅದೇ ರೀತಿ ಸರ್ಕ್ಯೂಟ್ ಹೌಸ್ ಬಳಿ ಇರುವ ವೃತ್ತಕ್ಕೆ ಸಿದ್ದಾ ಜ್ವಾಲಾನಾಥ ವೃತ್ತ ಎಂದು ನಾಮಕರಣ ಮಾಡಲು ಸಂಬಂಧಪಟ್ಟ ಅಕಾರಿಗಳು ಮುಂದಾಗಬೇಕು. ಏಕೆಂದರೆ ಈ ಹಿಂದೆ ಈ ಪ್ರದೇಶ ಮಠಕ್ಕೆ ಸಂಬಂಧಪಟ್ಟದ್ದಾಗಿರುತ್ತದೆ. ಈ ಬಗ್ಗೆ ಆರ್‌ಟಿಸಿಯಲ್ಲೂ ಜ್ವಾಲಾನಾಥ ವರ್ಗ ಎಂದೇ ನಮೂದಾಗಿದೆ ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ಜೋಗಿ ಸಮಾಜದ ಅಧ್ಯಕ್ಷ ಅಶೋಕ್, ಪ್ರಮುಖರಾದ ಕೇಶವ ಪುರುಷ, ಸತೀಶ್ ಕುಮಾರ್, ಹರೀಶ್ ಸಂಕೇಶ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News