‘ನಾವು ಬೊಬ್ಬೆ ಹೊಡೆಯುತ್ತಿದ್ದೇವೆʼ : ಆನ್ಲೈನ್ ವಿಚಾರಣೆ ಸಂದರ್ಭ ವ್ಯತ್ಯಯಗಳ ಬಗ್ಗೆ ಸುಪ್ರೀಂ ಕಿಡಿ

Update: 2022-01-17 17:16 GMT

ಹೊಸದಿಲ್ಲಿ,ಜ.17: ಹಲವಾರು ವಕೀಲರಿಂದ ಮೊಬೈಲ್ ಫೋನ್‌ಗಳ ಬಳಕೆಯಿಂದಾಗಿ ವರ್ಚುವಲ್ ವಿಚಾರಣೆ ಸಂದರ್ಭದಲ್ಲಿ ಪದೇ ಪದೇ ವ್ಯತ್ಯಯಗಳ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು,ಮೊಬೈಲ್‌ಗಳ ಮೂಲಕ ವಿಚಾರಣೆಯಲ್ಲಿ ಭಾಗಿಯಾಗುವುದನ್ನು ತಾನು ನಿಷೇಧಿಸಬೇಕಾಗಬಹುದು ಎಂದು ಹೇಳಿತು. ಕಲಾಪಗಳ ಸಂದರ್ಭದಲ್ಲಿ ವಕೀಲರ ಕಡೆಯಿಂದ ಧ್ವನಿ ಅಥವಾ ದೃಶ್ಯದಲ್ಲಿ ಅಥವಾ ಎರಡರಲ್ಲಿಯೂ ವ್ಯತ್ಯಯಗಳಿಂದಾಗಿ ಸೋಮವಾರ 10 ಪ್ರಕರಣಗಳ ವಿಚಾರಣೆಯನ್ನು ಮುಂದೂಡುವಂತಾದ ಬಗ್ಗೆ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರನ್ನೂ ಒಳಗೊಂಡ ಪೀಠವು ಅಸಮಾಧಾನವನ್ನು ವ್ಯಕ್ತಪಡಿಸಿತು.

‘ವಕೀಲರು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸಿ ಹಾಜರಾಗುತ್ತಿದ್ದಾರೆ, ಆದರೆ ಅವರು ಕಾಣುವುದಿಲ್ಲ. ನಾವು ಈ ಮೊಬೈಲ್ ವ್ಯವಹಾರವನ್ನು ನಿಷೇಧಿಸಬೇಕಾಗಬಹುದು.ವಕೀಲರೇ,ನೀವು ಈಗ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲಿಕೆ ಮಾಡುತ್ತಿದ್ದೀರಿ ಮತ್ತು ನಿಯಮಿತವಾಗಿ ಹಾಜರಾಗುತ್ತಿದ್ದೀರಿ. ವಾದ ಮಂಡಿಸಲು ಡೆಸ್ಕ್‌ಟಾಪ್ ಬಳಸಲು ನಿಮಗೆ ಸಾಧ್ಯವಿಲ್ಲವೇ’ ಎಂದು ಪೀಠವು ಒಂದು ಪ್ರಕರಣದಲ್ಲಿ ಪ್ರಶ್ನಿಸಿತು.

ಇನ್ನೊಂದು ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ವಕೀಲರ ಕಡೆಯಲ್ಲಿ ಕಳಪೆ ಅಂತರ್ಜಾಲ ಸಂಪರ್ಕವನ್ನು ಗಮನಿಸಿದ ಪೀಠವು,‘ಇಂತಹ ಪ್ರಕರಣಗಳ ವಿಚಾರಣೆ ನಡೆಸಲು ನಮಗೆ ಶಕ್ತಿಯಿಲ್ಲ. ದಯವಿಟ್ಟು ನಾವು ನಿಮ್ಮ ಮಾತುಗಳನ್ನು ಕೇಳುವಂತಾಗುವ ಸಿಸ್ಟಮ್ ಅನ್ನು ಬಳಸಿ. ಹತ್ತು ವಿಚಾರಣಾ ವಿಷಯಗಳಲ್ಲಿ ಹೀಗೆಯೇ ಆಗಿದೆ,ನಾವು ಬೊಬ್ಬೆ ಹೊಡೆಯುತ್ತಿದ್ದೇವೆ ’ಎಂದು ಹೇಳಿತು.

ಕೋವಿಡ್‌ನಿಂದಾಗಿ ಸರ್ವೋಚ್ಚ ನ್ಯಾಯಾಲಯವು 2020 ಮಾರ್ಚ್ನಿಂದ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣಗಳ ವಿಚಾರಣೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News