ನಟ ಧನುಷ್ ಹಾಗೂ ಐಶ್ವರ್ಯ ರಜನಿಕಾಂತ್ ವಿಚ್ಛೇದನ ಘೋಷಣೆ

Update: 2022-01-18 02:27 GMT
Image Source : INSTAGRAM/AISHWARYA

ಮುಂಬೈ: ಖ್ಯಾತ ಚಿತ್ರ ನಿರ್ಮಾಪಕಿ ಮತ್ತು ನಟ ರಜನೀಕಾಂತ್ ಅವರ ಪುತ್ರಿ ಐಶ್ವರ್ಯಾ ರಜನೀಕಾಂತ್ ಅವರು ನಟ ಧನುಷ್ ಜತೆಗಿನ 18 ವರ್ಷದ ದಾಂಪತ್ಯಕ್ಕೆ ವಿದಾಯ ಹೇಳಿದ್ದಾರೆ.

2004ರಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದ ಈ ಜೋಡಿಗೆ ಕ್ರಮವಾಗಿ 16 ಮತ್ತು 12 ವರ್ಷದ ಯಾತ್ರಾ ಹಾಗೂ ಲಿಂಗಾ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಧನುಷ್ (38) ಮತ್ತು ಐಶ್ವರ್ಯಾ (40) ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ತಮ್ಮ ವಿಚ್ಛೇದನ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. "ಹದಿನೆಂಟು ವರ್ಷಗಳ ಕಾಲ ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಹಾಗೂ ಪರಸ್ಪರ ಹಿತೈಷಿಗಳಾಗಿ ಬಾಳ್ವೆ ನಡೆಸಿದ್ದೆವು. ಈ ಪಯಣ ಪ್ರಗತಿ, ತಿಳಿವಳಿಕೆ, ಹೊಂದಾಣಿಕೆ ಮತ್ತು ಪರಸ್ಪರ ಸ್ವೀಕಾರದ ಹಾದಿಯಾಗಿತ್ತು. ಇಂದು ನಾವು ದಾರಿಗಳು ವಿಮುಖವಾಗುವ ಜಾಗದಲ್ಲಿ ನಿಂತಿದ್ದೇವೆ. ದಂಪತಿಯಾಗಿ ನಾವು ಬೇರ್ಪಡಲು ನಿರ್ಧರಿಸಿದ್ದೇವೆ. ಉತ್ತಮ ಭವಿಷ್ಯಕ್ಕಾಗಿ ಪ್ರತ್ಯೇಕವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಸಮಯ ಹಿಡಿಯಲಿದೆ. "ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದನ್ನು ನಿಭಾಯಿಸಲು ಅಗತ್ಯ ಖಾಸಗೀತನವನ್ನು ನೀಡಿ. ಓಂ ನಮಃಶಿವಾಯ, ಪ್ರೀತಿ ಹರಡಿ, ಡಿ" ಎಂಬ ಟಿಪ್ಪಣಿಯನ್ನು ಧನುಷ್ ಟ್ವೀಟ್ ಮಾಡಿದ್ದಾರೆ.

ಐಶ್ವರ್ಯಾ ಕೂಡಾ ಇದೇ ಟಿಪ್ಪಣಿಯನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, "ಇದಕ್ಕೆ ಶೀರ್ಷಿಕೆ ಬೇಕಾಗಿಲ್ಲ.. ನೀವು ಅರ್ಥ ಮಾಡಿಕೊಳ್ಳುವುದು ಮತ್ತು ನಿಮ್ಮ ಪ್ರೀತಿ ಮಾತ್ರ ಅಗತ್ಯ" ಎಂದು ಐಶ್ವರ್ಯಾ ಹೇಳಿದ್ದಾರೆ. ತಮಿಳು ರೊಮ್ಯಾಂಟಿಕ್ ಥ್ರಿಲ್ಲರ್ 3 ಮತ್ತು ವೈ ರಾಜಾ ವೈ ಬ್ಲ್ಯಾಕ್ ಕಾಮಿಡಿಯಂಥ ಚಿತ್ರಗಳನ್ನು ಐಶ್ವರ್ಯಾ ನಿರ್ಮಿಸಿದ್ದಾರೆ.

ಧನುಷ್ ಕೂಡಾ ಚಿತ್ರ ನಿರ್ಮಾಪಕರಾಗಿದ್ದು, ಇತ್ತೀಚೆಗೆ ಆನಂದ್ ಎಲ್ ರೈ ನಿರ್ದೇಶನದ "ಅತ್ರಂಗಿ ರೇ" ಚಿತ್ರ ಸೇರಿದಂತೆ ಹಲವು ಚಿತ್ರ ನಿರ್ಮಿಸಿದ್ದಾರೆ. ತಮಿಳು ಚಿತ್ರೋದ್ಯಮದಲ್ಲಿ ಸುಧೀರ್ಘ ವೃತ್ತಿ ಅನುಭವವನ್ನೂ ಗಳಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News