ಮೋದಿಗೆ ಹೊಡೆಯಬಲ್ಲೆ; ಟೀಕಿಸಬಲ್ಲೆ: ಕಾಂಗ್ರೆಸ್ ಮುಖಂಡನ ವೀಡಿಯೊ ವೈರಲ್!

Update: 2022-01-18 03:15 GMT

ಮುಂಬೈ: "ಮೋದಿಗೆ ಹೊಡೆಯಬಲ್ಲೆ; ಆತನನ್ನು ಟೀಕಿಸಬಲ್ಲೆ" ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಾಟೋಲೆ ಹೇಳುತ್ತಿರುವ ವೀಡಿಯೊ ಜಾಲತಾಣಗಳಲ್ಲಿ ಸೋಮವಾರ ವೈರಲ್ ಆಗಿದೆ. ಇದು ವಿವಾದ ಸೃಷ್ಟಿಸುವ ಲಕ್ಷಣ ಕಂಡುಬಂದ ಬೆನ್ನಲ್ಲೇ, "ಸ್ಥಳೀಯ ಗೂಂಡಾನ ಬಗ್ಗೆ ಉಲ್ಲೇಖಿಸಿ ತಾನು ಈ ಹೇಳಿಕೆ ನೀಡಿದ್ದೇನೆ" ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

"ನಾನು ಉಲ್ಲೇಖಿಸಿರುವುದು ಪ್ರಧಾನಿ ನರೇಂದ್ರ ಮೋದಿಯ ಬಗೆಗಲ್ಲ; ಬದಲಾಗಿ ಸ್ಥಳೀಯ ಗೂಂಡಾನ ಬಗೆಗೆ" ಎಂದು ಪಾಟೋಲೆ ಹೇಳಿದ್ದಾರೆ.

ಈ ವೀಡಿಯೊವನ್ನು ಟಿವಿ ವಾಹಿನಿಯೊಂದು ಪ್ರಸಾರ ಮಾಡಿದ್ದು, ಬಳಿಕ ವಿರೋಧ ಪಕ್ಷದ ಮುಖಂಡ ದೇವೇಂದ್ರ ಫಡ್ನವೀಸ್ ಕೂಡಾ ಟ್ವೀಟ್ ಮಾಡಿದ್ದಾರೆ. ಬಂಧಾರಾ ಜಿಲ್ಲೆಯಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಪಾಟೋಲೆ, "ನಾನು ಮೋದಿಯನ್ನು ಹೊಡೆಯಬಲ್ಲೆ; ಆತನನ್ನು ಟೀಕಿಸಬಲ್ಲೆ. ಈ ಕಾರಣಕ್ಕಾಗಿ ಆತ ನನ್ನ ವಿರುದ್ಧ ಪ್ರಚಾರಕ್ಕೆ ಬಂದಿದ್ದಾನೆ" ಎಂದು ವೀಡಿಯೊದಲ್ಲಿ ಹೇಳುತ್ತಿದ್ದಾರೆ.

ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಪಾಟೋಲೆ, "ನನ್ನ ಕ್ಷೇತ್ರದಲ್ಲಿ ಮೋದಿ ಎಂಬ ಹೆಸರಿನ ಗೂಂಡಾನ ಬಗ್ಗೆ ಸ್ಥಳೀಯ ನಾಗರಿಕರು ದೂರು ನೀಡಿದ್ದರು. ನನ್ನ ಹೇಳಿಕೆಯನ್ನು ದುರುದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ" ಎಂದು ವಿವರಿಸಿದ್ದಾರೆ.

ವೀಡಿಯೊ ಹೇಳಿಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಫಡ್ನವೀಸ್, "ಪಂಜಾಬ್‌ನಲ್ಲಿ ಪ್ರಧಾನಿಯವರನ್ನು 20 ನಿಮಿಷ ರಸ್ತೆ ಮಧ್ಯೆ ನಿಲ್ಲಿಸಲಾಗಿದೆ. ಇದನ್ನು ಕಾಂಗ್ರೆಸ್ ಸಿಎಂ ಗಮನಿಸಿಯೂ ಇಲ್ಲ. ಇದೀಗ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥರು ಮೋದಿಯನ್ನು ಹೊಡೆಯಬಲ್ಲೆ; ಟೀಕಿಸಬಲ್ಲೆ ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ನಲ್ಲಿ ಏನು ನಡೆಯುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಪಕ್ಷ ಈ ಮಟ್ಟಕ್ಕೆ ಇಳಿದಿದೆ" ಎಂದು ಹೇಳಿದ್ದಾರೆ. ಪಟೋಲೆ ದೈಹಿಕವಾಗಿ ಬೆಳೆದಿದ್ದರೂ, ಬೌದ್ಧಿಕವಾಗಿ ಬೆಳೆದಿಲ್ಲ ಎಂದು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News