ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಣೆ ಸಲ್ಲ: ಡಾ. ಜಿ. ಪರಮೇಶ್ವರ್

Update: 2022-01-18 10:53 GMT

ಮಂಗಳೂರು, ಜ.18: ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರಚೋದನಾಕಾರಿ ವಿಷಯವನ್ನು ಸಮಾಜಕ್ಕೆ ತಿಳಿಸಿಲ್ಲ. ಬದಲಾಗಿ ಸಮಾನತೆಯನ್ನು ಪ್ರತಿಪಾದನೆ ಮಾಡಿದ್ದಾರೆ. ಅಂತಹ ಮಹಾನ್ ಸಾಧಕರ ಸ್ತಬ್ಧಚಿತ್ರವನ್ನು ಕೇಂದ್ರ ಸರಕಾರ ಯಾಕೆ ತಿರಸ್ಕಾರ ಮಾಡಿದೆ ಎಂಬುದನ್ನು ಕೇಂದ್ರ ಸರಕಾರ ತಿಳಿಸಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ, ಕಾಂಗ್ರೆಸ್‌ನ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಆಗ್ರಹಿಸಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಗಣರಾಜ್ಯೋತ್ಸವ ಪರೇಡ್‌ಗೆ ಪ್ರತಿ ರಾಜ್ಯಗಳು ಸ್ತಬ್ಧಚಿತ್ರಗಳನ್ನು ಕಳುಹಿಸುತ್ತವೆ. ಕೇರಳ ಸರಕಾರ ನಾರಾಯಣಗುರುಗಳ ಸ್ತಬ್ಧಚಿತ್ರ ಕಳುಹಿಸಿದ್ದು, ಅದನ್ನು ಕೇಂದ್ರ ಸರಕಾರ ತಿರಸ್ಕಾರ ಮಾಡಿದೆ. ಯಾಕೆ ತಿರಸ್ಕಾರ ಮಾಡಿದ್ದಾರೆಂಬ ಪ್ರಶ್ನೆ ಇಡೀ ದೇಶದಲ್ಲಿ ಕೇಳಿ ಬಂದಿದೆ. ಈ ಬಗ್ಗೆ ಸಕಾರಣ, ಸ್ಪಷ್ಟನೆ ನೀಡಿಲ್ಲ. ತಕ್ಷಣ ಕೇಂದ್ರ ಸರಕಾರ ಆ ಸ್ತಬ್ಧ ಚಿತ್ರಕ್ಕೆ ಗಣರಾಜೋತ್ಸವ ಪೆರೇಡ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದೇನೆ. ಅನೇಕ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಪಕ್ಷದ ಸಂಘಟನೆ, 2023ರ ಅಸೆಂಬ್ಲಿ ಚುನಾವಣೆ, ಅದಕ್ಕೂ ಮೊದಲು ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ಎದುರಾದರೆ ಚುನಾವಣೆಗೆ ಯಾವ ರೀತಿ ತಯಾರಿ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಯಿತು. ಅದಕ್ಕಾಗಿ ರೂಪುರೇಷೆ ಮಾಡಲಾಯಿತು ಎಂದು ಅವರು ಹೇಳಿದರು.

ಸಭೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆದ ಅನೇಕ ಘಟನೆಗಳ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದೆ. ಕೊರಗರ ಮದುವೆ ಸಂದರ್ಭ ಪೊಲೀಸರು ಮಾಡಿರುವ ದೌರ್ಜನ್ಯ, ಪ್ರಕರಣಕ್ಕೆ ಸಂಬಂಧಿಸಿ ಆ ಕುಟುಂಬದ ಸದಸ್ಯರ ಮೇಲೆ ಮಾಡಲಾದ ಎಫ್‌ಐಆರ್ ತಕ್ಷಣ ವಾಪಾಸು ಪಡೆಯಬೇಕು ಎಂದು ಡಾ. ಜಿ. ಪರಮೇಶ್ವರ್ ಒತ್ತಾಯಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News