ಗೋವಾ ವಿಧಾನಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಮನೋಹರ್ ಪಾರಿಕ್ಕರ್ ಪುತ್ರನಿಗೆ ಸ್ಥಾನವಿಲ್ಲ

Update: 2022-01-20 08:08 GMT
ಉತ್ಪಲ್ ಪಾರಿಕ್ಕರ್ (Photo: ANI)

ಪಣಜಿ: ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಗೋವಾ ರಾಜ್ಯದ  ಅಭ್ಯರ್ಥಿಗಳ ಪಟ್ಟಿಯನ್ನು  ಬಿಜೆಪಿ ಗುರುವಾರ ಬಿಡುಗಡೆ ಮಾಡಿದೆ.

ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಮನೋಹರ್ ಪಾರಿಕ್ಕರ್ ಪುತ್ರ ಉತ್ಪಲ್ ಪಾರಿಕ್ಕರ್ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ ಎಂದು NDTV ವರದಿ ಮಾಡಿದೆ.

ಮನೋಹರ್ ಪಾರಿಕ್ಕರ್ ಅವರು ಪ್ರತಿನಿಧಿಸುತ್ತಿದ್ದ  ಪಣಜಿ ಕ್ಷೇತ್ರವನ್ನು ಅವರ ಮಗ ಉತ್ಪಲ್  ಬದಲಿಗೆ ಅಟಾನಾಸಿಯೋ 'ಬಾಬುಷ್' ಮಾನ್ಸೆರೇಟ್ ಅವರನ್ನು  ಬಿಜೆಪಿ ಆಯ್ಕೆ ಮಾಡಿದೆ. ಉತ್ಪಲ್ ಪಣಜಿ ಕ್ಷೇತ್ರವನ್ನು ತನಗೆ ನೀಡಬೇಕೆಂದು ಬಹಿರಂಗವಾಗಿ ಕೇಳಿದ್ದರು.

ಪಕ್ಷವು ತನ್ನನ್ನು ಆಯ್ಕೆ ಮಾಡುವುದಿಲ್ಲ ಎಂದು ಭಾವಿಸಿರುವ ಉತ್ಪಲ್ ಪಾರಿಕ್ಕರ್, "ನಾನು ಶೀಘ್ರದಲ್ಲೇ ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ" ಎಂದು ಇತ್ತೀಚೆಗೆ ಹೇಳಿದ್ದರು.

ಮೂರು ಬಾರಿ ಗೋವಾ ಮುಖ್ಯಮಂತ್ರಿಯಾಗಿದ್ದ ಮತ್ತು ಕಡಲತೀರದ ರಾಜ್ಯದಲ್ಲಿ ಬಿಜೆಪಿಯ ಪ್ರಮುಖ ನಾಯಕರಾಗಿದ್ದ ಮನೋಹರ್ ಪಾರಿಕ್ಕರ್ ಅವರು 2019 ರಲ್ಲಿ ನಿಧನರಾದರು. ಅವರು 25 ವರ್ಷಗಳ ಕಾಲ ಪಣಜಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಇಂಜಿನಿಯರಿಂಗ್ ಪದವೀಧರರಾಗಿರುವ ಉತ್ಪಲ್ ಪಾರಿಕ್ಕರ್ ಅವರು ಪಣಜಿಯಿಂದ ಸ್ಪರ್ಧಿಸುವ ತಮ್ಮ ಇಚ್ಛೆಯ ಬಗ್ಗೆ ಬಹಿರಂಗವಾಗಿ ಹೇಳಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಜನರನ್ನು ಭೇಟಿ ಮಾಡುತ್ತಿದ್ದು, ದೇವಸ್ಥಾನಗಳಿಗೂ ಭೇಟಿ ನೀಡಿ, ಚುನಾವಣೆ ಎದುರಿಸಲು ಸಿದ್ಧ ಎಂದು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News