ಟ್ರಸ್ಟ್ ಕಚೇರಿಯಿಂದ ದಾಖಲಾತಿ ಕಳವು ಆರೋಪ: ಅಲ್ ಅಮೀನ್ ಪದವಿ ಕಾಲೇಜು ಪ್ರಾಂಶುಪಾಲ ಬಂಧನ

Update: 2022-01-20 12:43 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.20: ಟ್ರಸ್ಟ್ ಕಚೇರಿಯಿಂದ ದಾಖಲಾತಿ ಕಳವು ಆರೋಪ ಸಂಬಂಧ ಅಲ್ ಅಮೀನ್ ಪದವಿ ಕಾಲೇಜಿನ ಪ್ರಾಂಶುಪಾಲ ಬಿ.ಎಂ.ಝಾಕೀರ್ ಅವರನ್ನು ಇಲ್ಲಿನ ಎಸ್‌ಜೆ ಪಾರ್ಕ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ದೂರುದಾರ ಡಾ.ಅಹ್ಮದ್ ಶರೀಫ್ ಸಿರಾಝ್ ನೀಡಿರುವ ದೂರಿನ್ವಯ ಬಿ.ಎಂ.ಝಾಕೀರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜ.17ರಂದು ಇಲ್ಲಿನ ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆಗೆ ಆಯೇಷಾ ಅಮೀನಾ ಟ್ರಸ್ಟ್ ಕಾರ್ಯದರ್ಶಿ ಡಾ.ಅಹ್ಮದ್ ಶರೀಫ್ ಸಿರಾಝ್ ದೂರು ಸಲ್ಲಿಸಿದ್ದು, ಟ್ರಸ್ಟಿಗಳಾದ ಸುಭಾನ್ ಶರೀಫ್ ಹಾಗೂ ಬಿ.ಎಂ.ಝಾಕೀರ್ ಅವರು ಟ್ರಸ್ಟಿನ ನಿಯಮಗಳನ್ನು ಉಲ್ಲಂಘಿಸಿ ಟ್ರಸ್ಟ್ಗೆ ಸಂಬಂಧಿಸಿದ ಓಟಿಸಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನ ಖಾತೆಯಲ್ಲಿ ನಿಯಮ ಬಾಹಿರ ವ್ಯವಹಾರ ನಡೆಸಿದ್ದಾರೆ.

ಜತೆಗೆ, ಮಿನಿಟ್ಸ್ ಪುಸ್ತಕ ಹಾಗೂ ಇನ್ನಿತರೆ ದಾಖಲಾತಿಗಳನ್ನು ಟ್ರಸ್ಟ್ ಕಚೇರಿಯಿಂದ ಕಳವು ಮಾಡಿ, ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ವಂಚನೆಗೈದಿರುವುದು ಬೆಳಕಿಗೆ ಬಂದಿತ್ತು.ಈ ಸಂಬಂಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದರು.

ಪ್ರಕರಣ ಸಂಬಂಧ ತನಿಖೆ ನಡೆಸಿದ ಎಸ್.ಜೆ.ಪಾರ್ಕ್ ಠಾಣಾ ಪೊಲೀಸರು ಪ್ರಕರಣದ ಎರಡನೆ ಆರೋಪಿ ಅಲ್ ಅಮೀನ್ ಪದವಿ ಕಾಲೇಜಿನ ಪ್ರಾಂಶುಪಾಲ ಬಿ.ಎಂ.ಝಾಕೀರ್ ಅವರನ್ನು ಬಂಧಿಸಿದ್ದು, ಮತ್ತೋರ್ವ ಟ್ರಸ್ಟಿ ಸುಭಾನ್ ಶರೀಫ್ ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ.

ಆರೋಪಿಗಳ ವಿರುದ್ಧ ವಂಚನೆ, ಐಪಿಎಸ್ ಸೆಕ್ಷನ್ 379, 468, 471 ಅಡಿ ಮೊಕದ್ದಮೆ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News