ಗುಜರಾತ್ ನಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 10,094, ಆದರೆ ಪರಿಹಾರ ಕೋರಿದ ಅರ್ಜಿಗಳ ಸಂಖ್ಯೆ 68,370!

Update: 2022-01-20 13:18 GMT
ಸಾಂದರ್ಭಿಕ ಚಿತ್ರ:PTI

ಹೊಸದಿಲ್ಲಿ,ಜ.20: ಅಚ್ಚರಿಯ ಬೆಳವಣಿಗೆಯಲ್ಲಿ, ಕೋವಿಡ್ ನಿಂದಾದ ಸಾವುಗಳಿಗೆ ಪರಿಹಾರ ಕೋರಿಕೆಯ 68,370 ಅರ್ಜಿಗಳನ್ನು ತಾನು ಅನುಮೋದಿಸಿರುವುದಾಗಿ ಗುಜರಾತ್ ಸರಕಾರವು ಜ.16ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಅಲ್ಲಿಯವರೆಗೆ ರಾಜ್ಯದಲ್ಲಿಯ ಅಧಿಕೃತ ಕೋವಿಡ್ ಸಾವುಗಳ ಸಂಖ್ಯೆ ಕೇವಲ 10,094 ಆಗಿತ್ತು ಎಂದು thewire.in ವರದಿ ಮಾಡಿದೆ.

ಒಟ್ಟು 89,633 ಅರ್ಜಿಗಳನ್ನು ತಾನು ಸ್ವೀಕರಿಸಿರುವುದಾಗಿ ಗುಜರಾತ್ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಪಾಲನಾ ವರದಿಯಲ್ಲಿ ತಿಳಿಸಿದೆ. ಕೋವಿಡ್ ನಿಂದ ಮೃತರ ಕುಟುಂಬಗಳಿಗೆ ತಲಾ 50,000 ರೂ.ಪರಿಹಾರವನ್ನು ರಾಜ್ಯವು ನೀಡುತ್ತಿದೆ.

ಇತರ ಅನಾರೋಗ್ಯಗಳು ಅಥವಾ ವಯೋ ಸಂಬಂಧಿತ ಸಮಸ್ಯೆಗಳನ್ನು ಹೊಂದಿದ್ದ ರೋಗಿಗಳ ಸಾವುಗಳನ್ನು ಅವರು ಮರಣದ ಸಮಯದಲ್ಲಿ ಕಾಯಿಲೆಯನ್ನು ಹೊಂದಿದ್ದರೂ ಅವುಗಳನ್ನು ಕೋವಿಡ್ ಸಾವುಗಳೆಂದು ವರ್ಗೀಕರಿಸುವಂತಿಲ್ಲ ಎಂಬ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಮಾರ್ಗಸೂಚಿಯನ್ನು ರಾಜ್ಯ ಸರಕಾರವು ಅನುಸರಿಸಿದೆ ಎಂದು ರಾಜ್ಯಆರೋಗ್ಯ ಇಲಾಖೆಯ ಅನಾಮಿಕ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಪರಿಹಾರವನ್ನು ಕೋರಲು ಸಂತ್ರಸ್ತ ಕುಟುಂಬವು ಮೃತನ ಸಾವಿನ 30 ದಿನಗಳ ಒಳಗೆ ಪಡೆದುಕೊಂಡಿರುವ ಪಾಸಿಟಿವ್ ಪಿಸಿಆರ್ ವರದಿಯನ್ನು ಮಾತ್ರ ಸಲ್ಲಿಸಿದರೆ ಸಾಕು ಎಂದೂ ಐಸಿಎಂಆರ್ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ. ಗುಜರಾತಿನಲ್ಲಿ ಕೋವಿಡ್ ಸಾವಿನ ಐಸಿಎಂಆರ್ ವ್ಯಾಖ್ಯೆಗೆ ಅನುಗುಣವಾಗಿ ಮೃತರ ಸಂಖ್ಯೆಯ ಸುಮಾರು ಒಂಭತ್ತು ಪಟ್ಟು ಹೆಚ್ಚು ಜನರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ ಮತ್ತು ಈ ವ್ಯತ್ಯಾಸಕ್ಕೆ ಐಸಿಎಂಆರ್ನ ಈ ನಿಯಮ ಕಾರಣವಾಗಿರಬಹುದು.

ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಕೋವಿಡ್ ಸಾವುಗಳ ಸಂಖ್ಯೆಯನ್ನು ತುಂಬ ಕಡಿಮೆಯಾಗಿ ದಾಖಲಿಸಿರುವುದರಿಂದ ಭಾರತದ ಅಂಕಿಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ)ಯು ನಂಬುತ್ತಿಲ್ಲ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಪ್ರಭಾತ ಝಾ ಅವರು 2022, ಜ.6ರಂದು ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ಹೇಳಿದ್ದಾರೆ. ಭಾರತದಲ್ಲಿ ಕೋವಿಡ್ ಸಾವುಗಳ ಸಂಖ್ಯೆ ಅಧಿಕೃತ ಸಂಖ್ಯೆಗಿಂತ ಆರು ಪಟ್ಟು ಹೆಚ್ಚಿರಬಹುದು ಎಂದು ಅವರು ತಿಳಿಸಿದ್ದಾರೆ.

ಮಾಧ್ಯಮ ವರದಿಗಳಂತೆ ಗುಜರಾತಿನಲ್ಲಿ ಅಧಿಕೃತ ಸಾವುಗಳ ಅರ್ಧಕ್ಕೂ ಹೆಚ್ಚು ಅಹ್ಮದಾಬಾದ್ ಮತ್ತು ಸೂರತ್‌ನಲ್ಲಿ ಸಂಭವಿಸಿವೆ.

ಕಳೆದ ವರ್ಷದ ಎಪ್ರಿಲ್ ನಲ್ಲಿ ಅಧಿಕೃತವಾಗಿ ಕೋವಿಡ್‌ನಿಂದ ಒಂದೂ ಸಾವು ಸಂಭವಿಸಿರಲಿಲ್ಲ, ಆದಾಗ್ಯೂ ಕೋವಿಡ್ ನಿಂದ ಮೃತರ ಶವಗಳನ್ನು ಚಿತಾಗಾರಗಳಿಗೆ ಸಾಗಿಸಲಾಗುತ್ತಿತ್ತು ಎಂದು ಹಲವಾರು ಮಾಧ್ಯಮಗಳು ಕಂಡುಕೊಂಡಿದ್ದವು ಮತ್ತು ಇದರೊಂದಿಗೆ ಕೋವಿಡ್ ಸಾವುಗಳನ್ನು ಕಡಿಮೆಯಾಗಿ ವರದಿ ಮಾಡುವ ಗುಜರಾತ್ ಸರಕಾರದ ಚಟವು ಮತ್ತೊಮ್ಮೆ ಸ್ಪಷ್ಟವಾಗಿತ್ತು. ರಾಜ್ಯಾದ್ಯಂತ ಕೋವಿಡ್ ಸಾವುಗಳ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ ಎಂದೂ ಮಾಧ್ಯಮಗಳು ವರದಿ ಮಾಡಿದ್ದವು.

ಆಗ ಗುಜರಾತ್ ಸರಕಾರವು ತಾನು ಸಾವುಗಳನ್ನು ಕಡಿಮೆಯಾಗಿ ವರದಿ ಮಾಡುತ್ತಿದ್ದೇನೆ ಎನ್ನುವುದನ್ನು ದೃಢಪಡಿಸಿರಲಿಲ್ಲ ಅಥವಾ ನಿರಾಕರಿಸಿಯೂ ಇರಲಿಲ್ಲ. ಈಗ 68,000ಕ್ಕೂ ಅಧಿಕ ಪರಿಹಾರ ಅರ್ಜಿಗಳಿಗೆ ಸರಕಾರವು ಅನುಮೋದನೆ ನೀಡಿರುವುದು ಇದನ್ನು ದೃಢಪಡಿಸಬಹುದು ಎಂದು ಗುಜರಾತಿನ ಪ್ರಮುಖ ದೈನಿಕ ‘ಸಂದೇಶ್’ನ ಸಂಪಾದಕ ರಾಜೇಶ ಪಾಠಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News