ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಯ ಸುಧಾರಿತ ಆವೃತ್ತಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ

Update: 2022-01-20 15:34 GMT
photo:PTI

ಭುವನೇಶ್ವರ,ಜ.20: ಭಾರತವು ಗುರುವಾರ ಒಡಿಶಾ ಕರಾವಳಿಯಾಚೆಯ ಸಮಗ್ರ ಪರೀಕ್ಷಾ ವಲಯ (ಐಟಿಆರ್)ದಿಂದ ಶಬ್ದಾತೀತ ದಾಳಿ ಕ್ಷಿಪಣಿ ಬ್ರಹ್ಮೋಸ್‌ನ ಸುಧಾರಿತ ಆವೃತ್ತಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ.

ನಿಯಂತ್ರಣ ವ್ಯವಸ್ಥೆ ಸೇರಿದಂತೆ ಹೊಸ ಸ್ವದೇಶಿ ತಂತ್ರಜ್ಞಾನದೊಂದಿಗೆ ಕ್ಷಿಪಣಿಯನ್ನು ಬೆಳಿಗ್ಗೆ 10:30ರ ಸುಮಾರಿಗೆ ಐಟಿಆರ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು,ಬ್ರಹ್ಮೋಸ್ ಎರೋಸ್ಪೇಸ್ ಡಿಆರ್‌ಡಿಒ ತಂಡಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕಾರ್ಯಾಚರಣೆಯನ್ನು ನಿರ್ವಹಿಸಿತು.

ಕ್ಷಿಪಣಿಯಲ್ಲಿ ಸುಧಾರಿತ ಸ್ವದೇಶಿ ತಂತ್ರಜ್ಞಾನವನ್ನು ಅಳವಡಿಸಲಾಗಿತ್ತು ಮತ್ತು ಹೆಚ್ಚಿನ ದಕ್ಷತೆ ಹಾಗೂ ಸುಧಾರಿತ ಕಾರ್ಯಕ್ಷಮತೆಗಾಗಿ ಪರಿಷ್ಕತ ಸೂಕ್ತ ಪಥವನ್ನು ಅನುಸರಿಸಿತ್ತು ಎಂದು ರಕ್ಷಣಾ ಮೂಲಗಳು ತಿಳಿಸಿದವು.

ಭಾರತ-ರಷ್ಯಾ ಜಂಟಿ ಉದ್ಯಮದ ಉತ್ಪನ್ನವಾಗಿರುವ ಬ್ರಹ್ಮೋಸ್ ಕ್ಷಿಪಣಿಯನ್ನು ವರ್ಧಿತ ಸಾಮರ್ಥ್ಯವನ್ನು ಸಾಧಿಸಲು ಪರಿಷ್ಕೃತ ಸ್ವದೇಶಿ ನಿಯಂತ್ರಣ ವ್ಯವಸ್ಥೆಯೊಂದಿಗೆ ಇನ್ನಷ್ಟು ಉತ್ತಮಗೊಳಿಸಲಾಗಿದೆ. ಕ್ರಮೇಣ ರಷ್ಯಾದ ವ್ಯವಸ್ಥೆಗಳ ಬದಲು ಸ್ವದೇಶಿ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ.

ಯಶಸ್ವಿ ಪರೀಕ್ಷೆಯು ಬ್ರಹ್ಮೋಸ್ ಕಾರ್ಯಕ್ರಮದ ಹಾದಿಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಕ್ಷಿಪಣಿಯು ಶಬ್ದಾತೀತ ವೇಗದಲ್ಲಿ ಚಲಿಸಿದ್ದು,ಪ್ರಯೋಗಾರ್ಥ ಪರೀಕ್ಷೆಯ ಎಲ್ಲ ಗುರಿಗಳನ್ನು ಸಾಧಿಸಿದೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದರು.

ಡಿಆರ್‌ಡಿಒ ಮತ್ತು ಎನ್‌ಪಿಒಎಂ ರಷ್ಯಾ ತಂಡಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದವು. ಬ್ರಹ್ಮೋಸ್ ಎರೋಸ್ಪೇಸ್ ಮತ್ತು ರಷ್ಯಾದ ಎನ್‌ಪಿಒಎಂ ಸಮುದ್ರ ಮತ್ತು ಭೂ ಗುರಿಗಳ ವಿರುದ್ಧ ಬ್ರಹ್ಮೋಸ್ ಕ್ಷಿಪಣಿಯ ಪರಿಣಾಮಕಾರಿತ್ವ ಮತ್ತು ಮಾರಕತೆಯನ್ನ ಹೆಚ್ಚಿಸಲು ಅದನ್ನು ನಿರಂತರವಾಗಿ ನವೀಕರಿಸುತ್ತಿವೆ.

ಅತ್ಯಂತ ಶಕ್ತಿಶಾಲಿ ಕ್ಷಿಪಣಿ ವ್ಯವಸ್ಥೆಯಾಗಿರುವ ಬ್ರಹ್ಮೋಸ್ ಈಗಾಗಲೇ ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಂಡಿದೆ. ವಿಶ್ವದ ಅತ್ಯಂತ ವೇಗದ ಕ್ಷಿಪಣಿಯಾಗಿರುವ ಬ್ರಹ್ಮೋಸ್ 8.4 ಮೀ.ಉದ್ದವನ್ನು ಮತ್ತು 450 ಕಿ.ಮೀ.ಗಳ ದಾಳಿವ್ಯಾಪ್ತಿಯನ್ನು ಹೊಂದಿದೆ. 250 ಕಿ.ಮೀ.ಇದ್ದ ವ್ಯಾಪ್ತಿಯನ್ನು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯಲ್ಲಿ ಭಾರತದ ಪ್ರವೇಶದ ಬಳಿಕ ಹೆಚ್ಚಿಸಲಾಗಿದೆ. ಕ್ಷಿಪಣಿಯು 300 ಕೆ.ಜಿ.ತೂಕದ ಸಾಂಪ್ರದಾಯಿಕ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

ಹೆಚ್ಚಿನ ನಿಖರತೆ ಮತ್ತು ವಿನಾಶಕ ಶಕ್ತಿಯೊಂದಿಗೆ ಬ್ರಹ್ಮೋಸ್ 2.8 ಮ್ಯಾಕ್ ಶಬ್ದಾತೀತ ವೇಗದಲ್ಲಿ ಕ್ರಮಿಸುತ್ತದೆ. ಇದು ನಿಖರ ದಾಳಿಗಾಗಿ ಬಳಕೆದಾರನಿಗೆ ಮೇಲುಗೈ ಒದಗಿಸುವ ಈ ಸುಧಾರಿತ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಏಕೈಕ ಶಬ್ದಾತಿತ ಕ್ಷಿಪಣಿಯಾಗಿದೆ.

ಬ್ರಹ್ಮೋಸ್ ಯಶಸ್ವಿ ಪರೀಕ್ಷಾರ್ಥ ಪ್ರಯೋಗಕ್ಕಾಗಿ ರಕ್ಷಣಾ ಸಚಿವ ಮತ್ತು ಡಿಆರ್‌ಡಿಒ ಅಧ್ಯಕ್ಷ ಡಾ.ಸತೀಶ ರೆಡ್ಡಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News