ಅಪರಾಧ ಪ್ರಕರಣಗಳಲ್ಲಿ ಸಾಮಾಜಿಕ ಮಾಧ್ಯಮದ ತಾಣಗಳನ್ನು ಅಪರಾಧಿ ಎಂದು ಹೆಸರಿಸಲು ಸಾಧ್ಯವಿಲ್ಲವೇ : ನ್ಯಾಯಾಲಯ ಪ್ರಶ್ನೆ

Update: 2022-01-21 17:25 GMT
Photo : PTI

ಮಧುರೈ (ತಮಿಳುನಾಡು), ಜ. 21: ಸಾಮಾಜಿಕ ಮಾಧ್ಯಮದ ವೇದಿಕೆಗಳು ಭಾಗಿಯಾಗಿರುವ ಕ್ರಿಮಿನಲ್ ಪ್ರಕರಣಗಳಲ್ಲಿ ಸಾಮಾಜಿಕ ಮಾದ್ಯಮ ಕಂಪೆನಿಗಳನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಲು ಸಾಧ್ಯವಿಲ್ಲ ಯಾಕೆ ? ಎಂಬ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ಪೀಠ ಗುರುವಾರ ತಮಿಳುನಾಡು ಸರಕಾರ ಹಾಗೂ ರಾಜ್ಯ ಪೊಲೀಸ್‌ಗೆ ಸೂಚಿಸಿದೆ. ಯುಟ್ಯೂಬರ್ ಸಾಟ್ಟೈ ದುರೈಮುರುಗನ್ ಅವರಿಗೆ ಮಂಜೂರು ಮಾಡಿದ ಜಾಮೀನು ರದ್ದುಗೊಳಿಸುವಂತೆ ಕೋರಿ ತಮಿಳುನಾಡು ಪೊಲೀಸರು ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಬಿ. ಪುಗಳೇಂದಿ ಅವರ ಮುಂದೆ ವಿಚಾರಣೆಗೆ ಬಂದಾಗ ಅವರು ಈ ಪ್ರತಿಕ್ರಿಯೆ ನೀಡಿದರು.

ತಂತ್ರಜ್ಞಾನ ದುರ್ಬಳಕೆ ಆಗಲು ಅವಕಾಶ ನೀಡಬಾರದು ಎಂದು ಪುಗಳೇಂದಿ ಅವರು ಪ್ರತಿಪಾದಿಸಿದರು. ಅಲ್ಲದೆ, ಸಾಮಾಜಿಕ ಮಾಧ್ಯಮದ ವೇದಿಕೆಗಳ ಮೂಲಕ ವೀಡಿಯೊಗಳನ್ನು ಪ್ರಸಾರ ಮಾಡುವ ಮೂಲಕ ಯು ಟ್ಯೂಬರ್ ದುರೈಮುರುಗನ್ ಎಷ್ಟು ಸಂಪಾದಿಸುತ್ತಾರೆ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಅವರು ಪೊಲೀಸರಿಗೆ ನಿರ್ದೇಶಿಸಿದರು.

ಸಮಗ್ರವಾಗಿ ಪರಿಶೀಲಿಸಿದಾಗ ಹಣ ಗಳಿಸಲು ಹಲವು ಜನರು ಈ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಗನ್ ತಯಾರಿ, ದರೋಡೆಯಂತಹ ಅಪರಾಧಗಳನ್ನು ನಾವು ಯು ಟ್ಯೂಬ್ ನೋಡಿ ಮಾಡಿದೆವು ಎಂದು ಕೆಲವರು ಒಪ್ಪಿಕೊಂಡಿದ್ದಾರೆ. ಆದುದರಿಂದ ಇಂತಹ ಪ್ರಕರಣಗಳಲ್ಲಿ ಯುಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮದ ವೇದಿಕೆಗಳನ್ನು ಆರೋಪಿಯೆಂದು ಸೇರಿಸಿಕೊಳ್ಳಲು ಯಾಕೆ ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದರು. ಯುಟ್ಯೂಬ್‌ನ ದುರ್ಬಳಕೆ ತಡೆಯಲು ತೆಗೆದುಕೊಳ್ಳಬಹುದಾದ ಅಗತ್ಯದ ಕ್ರಮಗಳ ಬಗ್ಗೆ ವಾರಗಳ ಒಳಗೆ ವಿಸ್ತೃತ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿ ತಮಿಳುನಾಡು ಸೈಬರ್ ಕ್ರೈಮ್ ಬ್ರಾಂಚ್‌ನ ಎಡಿಜಿಗೆ ನಿರ್ದೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News