ಧನಬಾದ್ ನ್ಯಾಯಾಧೀಶರ ಹತ್ಯೆ ಪ್ರಕರಣ: ಸಿಬಿಐ ಆರೋಪಿಗಳನ್ನು ರಕ್ಷಿಸುವಂತೆ ಕಾಣಿಸುತ್ತಿದೆ ಎಂದ ಹೈಕೋರ್ಟ್

Update: 2022-01-22 10:18 GMT

ರಾಂಚಿ: ಧನಬಾದ್ ನ್ಯಾಯಾಧೀಶ ಉತ್ತಮ್ ಆನಂದ್ ಅವರ ಹತ್ಯೆ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿಸಲಾಗುತ್ತಿದೆ ಎಂದು ಹೇಳಿ ಸಿಬಿಐ ಅನ್ನು ಜಾರ್ಖಂಡ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸಿಬಿಐ ತನಿಖೆ ಕೈಬಿಟ್ಟು ಆರೋಪಿಗಳನ್ನು ರಕ್ಷಿಸುವ ಇಂಗಿತ ಹೊಂದಿರುವಂತೆ ತೋರುತ್ತಿದೆ ಎಂದು ನ್ಯಾಯಾಲಯ ತೀಕ್ಣವಾಗಿ ಪ್ರತಿಕ್ರಿಯಿಸಿದೆ.

ಇಬ್ಬರು ಆರೋಪಿಗಳ ನಾರ್ಕೋ ಅನಾಲಿಸಿಸ್ ವರದಿಯನ್ನು ಓದಿದ ಮುಖ್ಯ ನ್ಯಾಯಮೂರ್ತಿ ರವಿ ರಂಜನ್ ಮತ್ತು ನ್ಯಾಯಮೂರ್ತಿ ಎಸ್ ಎನ್ ಪ್ರಸಾದ್ ಅವರ ವಿಭಾಗೀಯ ಪೀಠ, "ಆಟೋ ಚಾಲಕ ಮತ್ತಾತನ ಸಹವರ್ತಿಗೆ ಆನಂದ್ ಅವರು ನ್ಯಾಯಾಧೀಶರೆಂದು ಘಟನೆ ನಡೆಯುವುದಕ್ಕೆ ಮುಂಚಿತವಾಗಿಯೇ ತಿಳಿದಿರುವಾಗ, ಅವರ ಮೊಬೈಲ್ ಫೋನ್ ಸೆಳೆಯಲು ಹತ್ಯೆ ನಡೆಸಿದ್ದರೆಂದು ಸಿಬಿಐ ಹೇಗೆ ತೀರ್ಮಾನಕ್ಕೆ ಬರಬಹುದು,'' ಎಂದು ಪ್ರಶ್ನಿಸಿದರು. ಸಿಬಿಐ ವಾದವನ್ನು ಒಪ್ಪಲು ಸಿದ್ಧವಿಲ್ಲದ ನ್ಯಾಯಾಲಯ ಈ ಪ್ರಕರಣದ ಆಳಕ್ಕೆ ತನಿಖಾ ಸಂಸ್ಥೆ ಹೋಗಿಲ್ಲ ಎಂದು ಹೇಳಿದೆ.

"ತನಿಖೆಯು ಸಿಬಿಐನ ವಿಶ್ವಾಸಾರ್ಹತೆಯ ಬಗ್ಗೆಯೇ ಪ್ರಶ್ನೆ ಮೂಡುವಂತೆ ಮಾಡಿದೆ" ಎಂದು ನ್ಯಾಯಾಲಯ ಹೇಳಿದೆ.

"ಲಖನ್ ಆಟೋರಿಕ್ಷಾವನ್ನು ವೇಗವಾಗಿ ಓಡಿಸುತ್ತಿದ್ದ ನಾನು ಬಲಬದಿಯಲ್ಲಿ ಕುಳಿತಿದ್ದೆ, ನ್ಯಾಯಾಧೀಶರು ನಿಧಾನವಾಗಿ ಜಾಗಿಂಗ್ ಮಾಡುತ್ತಿದ್ದರು. ಅವರ ಎಡ ಕೈಯ್ಯಲ್ಲಿ ಕರ್ಚೀಫ್ ಇತ್ತು. ಲಖನ್ ಅವರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದ ಹಾಗೂ ಅವರು ನೆಲಕ್ಕುರುಳಿದರು'' ಎಂದು  ಆಟೋ ಚಾಲಕನ ಸಮೀಪವರ್ತಿ ರಾಹುಲ್ ಹೇಳಿದ್ದಾನೆ ಎಂದು ನಾರ್ಕೋ ಅನಾಲಿಸಿಸ್ ವರದಿಯಲ್ಲಿ ಹೇಳಲಾಗಿದೆಯಲ್ಲದೆ ಬೇರೆ ಯಾರೋ ನ್ಯಾಯಧೀಶರನ್ನು ಹತ್ಯೆಗೈಯ್ಯುವ ಕೆಲಸವನ್ನು ಅವರಿಗೆ ವಹಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಸಿಬಿಐ ಪರ ವರ್ಚುವಲ್ ಆಗಿ ಹಾಜರಾದ ಹೆಚ್ಚುವರಿ ಅಡ್ವಕೇಟ್ ಜನರಲ್ ಎಸ್ ವಿ ರಾಜು  ತಮ್ಮ  ವಾದ ಮಂಡನೆ ವೇಲೆ ಸಿಬಿಐ ಹೊರತಾಗಿ ಎನ್‌ಐಎ ಕೂಡ ದಕ್ಷ ತನಿಖಾ ಏಜನ್ಸಿಯಾಗಿದ್ದು, ಪ್ರಕರಣ ಅದಕ್ಕೆ ಹಸ್ತಾಂತರಿಸಬಹುದು ಎಂದು ಹೇಳಿದಾಗ ಪ್ರತಿಕ್ರಿಯಿಸಿದ ನ್ಯಾಯಾಲಯ, ಸಿಬಿಐ ಈ ಪ್ರಕರಣದ ತನಿಖೆಯಿಂದ ಹಿಂದೆ ಸರಿಯುವ ಉದ್ದೇಶ ಹೊಂದಿದಂತಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News