ಚುನಾವಣೆಯಲ್ಲಿ ಸೋಲುಂಟಾಗುತ್ತಿದ್ದಂತೆ ಮತಯಂತ್ರಗಳನ್ನು ವಶಪಡಿಸಿಕೊಳ್ಳಲು ಕರಡು ಆದೇಶ ಸಿದ್ಧಪಡಿಸಿದ್ದ ಟ್ರಂಪ್!

Update: 2022-01-22 17:52 GMT
ಡೊನಾಲ್ಡ್ ಟ್ರಂಪ್ (PTI)

ವಾಷಿಂಗ್ಟನ್, ಜ.22: ಅಮೆರಿಕದ ಅಧ್ಯಕ್ಷ ಹುದ್ದೆಗೆ 2020ರ ಚುನಾವಣೆಯಲ್ಲಿ ಸೋಲುಂಡ ಬಳಿಕ, ಮತಯಂತ್ರಗಳನ್ನು ಜಫ್ತಿ ಮಾಡುವಂತೆ ದೇಶದ ಉನ್ನತ ಸೇನಾಧಿಕಾರಿಗಳಿಗೆ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದರು ಎಂದು ಶುಕ್ರವಾರ ಬಿಡುಗಡೆಯಾದ ವರದಿ ಹೇಳಿದೆ.

ರಾಷ್ಟ್ರೀಯ ದಾಖಲೆ ಪತ್ರ ವಿಭಾಗ ಬಿಡುಗಡೆಗೊಳಿಸಿರುವ ಈ ಸ್ಫೋಟಕ ದಾಖಲೆಯಲ್ಲಿ, ಜನತೆ ಮುಂದಿನ ಅಧ್ಯಕ್ಷರಾಗಿ ಜೋ ಬೈಡನ್‌ರನ್ನು ಆಯ್ಕೆ ಮಾಡಿದ್ದರೂ, ಅಧಿಕಾರಕ್ಕೆ ಅಂಟಿಕೊಳ್ಳುವ ಉದ್ದೇಶದಿಂದ ಟ್ರಂಪ್ ಕೈಗೊಳ್ಳಲು ಬಯಸಿದ್ದ ವಿವೇಕರಹಿತ ಕ್ರಮಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ವಶಪಡಿಸಿಕೊಳ್ಳುವಿಕೆಯಿಂದ ಉದ್ಭವಿಸುವ ವಂಚನೆ ಆರೋಪವನ್ನು ನಿಭಾಯಿಸಲು ವಿಶೇಷ ನ್ಯಾಯವಾದಿಯನ್ನು ನೇಮಕ ಮಾಡಿಕೊಳ್ಳುವಂತೆ 2020ರ ಡಿಸೆಂಬರ್ 16ರಂದು ಶ್ವೇತಭವನ ಸಿದ್ಧಪಡಿಸಿದ್ದ ಈ ಆದೇಶದಲ್ಲಿ ಸೂಚಿಸಲಾಗಿತ್ತು. ಆದರೆ ಇದಕ್ಕೆ ಸಹಿ ಹಾಕಿಲ್ಲ.

ತಕ್ಷಣವೇ ಜಾರಿಗೆ ಬರುವಂತೆ, ರಕ್ಷಣಾ ಕಾರ್ಯದರ್ಶಿಯು ಎಲ್ಲಾ ಯಂತ್ರ, ಉಪಕರಣ, ವಿದ್ಯುನ್ಮಾನ ರೂಪದಲ್ಲಿ ಸಂಗ್ರಹವಾದ ಮಾಹಿತಿ ಮತ್ತು ಇತರ ದಾಖಲೆಗಳನ್ನು ಜಫ್ತಿ ಮಾಡಿ, ಅದನ್ನು ತನ್ನ ಬಳಿಯೇ ಇರಿಸಿಕೊಳ್ಳತಕ್ಕದ್ದು’ ಎಂದು ಆದೇಶದಲ್ಲಿ ಸೂಚಿಸಲಾಗಿತ್ತು.

2021ರ ಕ್ಯಾಪಿಟಲ್ ಹಿಲ್ಸ್ ಆಕ್ರಮಣ ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಮೆರಿಕ ಸಂಸತ್ತಿನ ಸಮಿತಿಯ ಮುಂದೆ ಮಂಡಿಸಲಾದ 750ಕ್ಕೂ ಅಧಿಕ ದಾಖಲೆ ಪತ್ರದಲ್ಲಿ ಈ ದಾಖಲೆಯೂ ಸೇರಿದೆ. ಈ ದಾಖಲೆಗಳನ್ನು ಬಿಡುಗಡೆಗೊಳಿಸದಂತೆ ಟ್ರಂಪ್ ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.

ಮತಯಂತ್ರಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಸೋಲು ಖಚಿತಗೊಂಡ ಬಳಿಕ ಟ್ರಂಪ್ ಹಾಗೂ ಅವರ ಸಹಾಯಕರು ನಿರಂತರ ಆರೋಪ ಮಾಡಿದ್ದರು. ಬಲಪಂಥೀಯ ನ್ಯಾಯವಾದಿ ಸಿಡ್ನಿ ಪೊವೆಲ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ‘ ಅಧ್ಯಕ್ಷ ಹುದ್ದೆಯ ಚುನಾವಣೆಯನ್ನು ವೆನೆಝುವೆಲಾ, ಕ್ಯೂಬಾ ಮತ್ತು ಬಹುಷಃ ಚೀನಾದ ಕಮ್ಯುನಿಸ್ಟ್ ಹಣದ ಮೂಲಕ ಹ್ಯಾಕ್ ಮಾಡಲಾಗಿದೆ ಎಂದಿದ್ದರು. ಪೊವೆಲ್ ಹಾಗೂ ನ್ಯೂಯಾರ್ಕ್‌ನ ಮಾಜಿ ಮೇಯರ್ ರೂಡಿ ಗಿಯುಲಾನಿ ಅವರು, ಟ್ರಂಪ್ ಪರಾಜಯಗೊಂಡ ವಾರದ ಬಳಿಕ , ಸ್ವಿಂಗ್ ರಾಜ್ಯಗಳ(ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವ ಪ್ರಮುಖ ರಾಜ್ಯಗಳು) ಫಲಿತಾಂಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಪ್ರಯತ್ನ ನಡೆಸಿದ್ದರು. ಚುನಾವಣೆಯಲ್ಲಿ ವ್ಯಾಪಕ ಅಕ್ರಮವಾಗಿದೆ ಎಂದು ಟ್ರಂಪ್ ಹಾಗೂ ಅವರ ಬೆಂಬಲಿಗರು ಪ್ರತಿಪಾದಿಸಿದ್ದರೆ, ಟ್ರಂಪ್ ಅವರ ಸರಕಾರದ ಅಧಿಕಾರಿಗಳೇ ಈ ಚುನಾವಣೆ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಸುರಕ್ಷಿತ ರೀತಿಯ ಮತದಾನಕ್ಕೆ ಸಾಕ್ಷಿಯಾಗಿದೆ ಎಂದಿದ್ದರು. ಟ್ರಂಪ್ ನೇಮಿಸಿದ್ದ ಅಟಾರ್ನಿ ಜನರಲ್ ಬಿಲ್ ಬಾರ್ ಕೂಡಾ ಈ ಆರೋಪವನ್ನು ನಿರಾಕರಿಸಿದ್ದರು.

ಡೊಮಿನಿಯನ್ ಸಂಸ್ಥೆ ಅಭಿವೃದ್ಧಿಪಡಿಸಿದ ಮತಯಂತ್ರದ ಟಚ್ ಸ್ಕ್ರೀನ್ ನಲ್ಲಿ ಮತ ಎಣಿಸುವ ಬಟನ್‌ನಲ್ಲಿ ಅಕ್ರಮ ಎಸಗಲಾಗಿದೆ. ಈ ಸಂಸ್ಥೆಯು ವಿದೇಶಿ ಏಜೆಂಟರ, ದೇಶಗಳ ಮತ್ತು ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳ ಒಡೆತನದಲ್ಲಿದ್ದು ಪ್ರಮುಖ ರಾಜ್ಯವಾದ ಜಾರ್ಜಿಯಾದಲ್ಲಿ ಈ ಬಟನ್ ಮೂಲಕ ವ್ಯಾಪಕ ಅಕ್ರಮ ನಡೆದಿದೆ ಎಂದು ಟ್ರಂಪ್ ತಂಡ ವಾದಿಸಿತ್ತು. ಬಳಿಕ ಇಲ್ಲಿ ಮತಗಳನ್ನು ಕೈಯಲ್ಲಿ ಎಣಿಸಿದಾಗಲೂ ಬೈಡನ್‌ಗೆ ಅಧಿಕ ಮತ ಚಲಾವಣೆಯಾಗಿರುವುದು ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News