ಸಿಎಆರ್ ದೇಶದಲ್ಲಿ ನಡೆದ ನಾಗರಿಕರ ಹತ್ಯೆ ಪ್ರಕರಣದ ತನಿಖೆ ನಡೆಸಲು ವಿಶ್ವಸಂಸ್ಥೆ ನಿರ್ಧಾರ‌

Update: 2022-01-22 15:55 GMT

ನ್ಯೂಯಾರ್ಕ್, ಜ.22: ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ (ಸಿಎಆರ್) ದೇಶದಲ್ಲಿ ಕಳೆದ ವಾರ 30ಕ್ಕೂ ಅಧಿಕ ನಾಗರಿಕರ ಹತ್ಯೆ ಪ್ರಕರಣದ ಬಗ್ಗೆ ವಿಶ್ವಸಂಸ್ಥೆ ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಎಆರ್ ಪಡೆ ಹಾಗೂ ರಶ್ಯಾದ ಖಾಸಗಿ ಸೇನಾ ಸಂಸ್ಥೆ ವಾಗ್ನರ್‌ನ ಬಾಡಿಗೆ ಸಿಪಾಯಿಗಳು ಜನವರಿ 16-17ರಂದು ಬಂಡುಗೋರ ಸಂಘಟನೆ(ಯೂನಿಯನ್ ಫಾರ್ ಪೀಸ್)ನ ವಿರುದ್ಧ ಬ್ರಿಯಾ ನಗರದ ಬಳಿ ನಡೆಸಿದ್ದ ಕಾರ್ಯಾಚರಣೆಯಲ್ಲಿ 30ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ . ಇವರಲ್ಲಿ ಹೆಚ್ಚಿನವರು ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.

ಸಿಎಆರ್ ಪಡೆ ಹಾಗೂ ಇತರ ಭದ್ರತಾ ಸಿಬಂದಿ ಶಾಮೀಲಾಗಿದ್ದ ಘಟನೆಯ ಬಗ್ಗೆ ವರದಿ ಲಭಿಸಿದ್ದು ಘಟನೆಯಲ್ಲಿ ಮೃತಪಟ್ಟವರು ಮತ್ತು ಸ್ಥಳಾಂತರಗೊಂಡವರ ಸಂಖ್ಯೆಯನ್ನು ದೃಢಪಡಿಸಿಕೊಳ್ಳುತ್ತಿದ್ದೇವೆ . ಬ್ರಿಯಾ ನಗರಕ್ಕೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಂಡವನ್ನು ಭದ್ರತಾ ಸಿಬಂದಿಯ ಬೆಂಗಾವಲಿನಲ್ಲಿ ರವಾನಿಸಲಾಗಿದ್ದು ಪ್ರಜೆಗಳ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡ್ಯುಜರಿಕ್ ಹೇಳಿದ್ದಾರೆ.

‘ಸೆಂಟ್ರಲ್ ಆಫ್ರಿಕನ್ ಪಡೆ ಹಾಗೂ ರಶ್ಯಾದ ಸೇನಾ ಸಿಬಂದಿ ಸಾಮೂಹಿಕ ಹತ್ಯೆಯಲ್ಲಿ ತೊಡಗಿದೆ. ಅಲ್ಲಿ ನಾಗರಿಕರನ್ನು ಉದ್ದೇಶಪೂರ್ವಕವಾಗಿ, ವಿವೇಚನೆಯಿಲ್ಲದೆ ಹತ್ಯೆ ನಡೆಸಲಾಗುತ್ತಿದ್ದರೂ ನಾವು 50 ಅಥವಾ 100 ಮಂದಿ ಮೃತರಾಗಿದ್ದಾರೆ ಎಂದಷ್ಟೇ ಹೇಳುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News