ಬೆಂಗಳೂರು ವಿವಿ ಪಿಎಚ್‍ಡಿ ವಿವಾದ: ಮತ್ತೊಂದು ಕೌನ್ಸಿಲಿಂಗ್, ಮತ್ತೆ ಅನರ್ಹರಿಗೆ ಮಣೆ; ಆರ್ ಟಿಐನಿಂದ ಬಹಿರಂಗ

Update: 2022-01-22 17:31 GMT

ಬೆಂಗಳೂರು, ಜ.22: ಬೆಂಗಳೂರು ವಿಶ್ವವಿದ್ಯಾಲಯವು 2019ರಲ್ಲಿ ಹೊರಡಿಸಿದ್ದ ಪಿಎಚ್‍ಡಿ ಅಧಿಸೂಚನೆಯಲ್ಲಿ ಯುಜಿಸಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಅನರ್ಹರಿಗೆ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಕೇವಲ ಎರಡು ಸುತ್ತುಗಳಲ್ಲಿ ಪಿಎಚ್‍ಡಿ ಪ್ರವೇಶಕ್ಕೆ ಕೌನ್ಸಿಲಿಂಗ್ ನಡೆಸಲಾಗಿದೆ ಎಂದು ಸಾರ್ವಜನಿಕವಾಗಿ ಬಹಿರಂಗ ಪಡಿಸಿದ್ದ ವಿಶ್ವವಿದ್ಯಾಲಯವು, ವಿದ್ಯಾರ್ಥಿಗಳ ಕಣ್ಣು ತಪ್ಪಿಸಿ, ಮತ್ತೊಂದು ಸುತ್ತಿನಲ್ಲಿ ರಹಸ್ಯವಾಗಿ ಕೌನ್ಸಿಲಿಂಗ್ ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದೆ. 

ಪಿಎಚ್‍ಡಿ ಪ್ರವೇಶಕ್ಕೆ ನಡೆದ ಮೊದಲ ಸುತ್ತಿನ ಕೌನ್ಸಿಲಿಂಗ್‍ನಲ್ಲಿ ಅರ್ಹರು ಪ್ರವೇಶವನ್ನು ಪಡೆದಿದ್ದರು. ಆದರೆ ಎರಡನೇ ಸುತ್ತಿನ ಕೌನ್ಸಿಲಿಂಗ್‍ನಲ್ಲಿ ಪಿಎಚ್‍ಡಿ ನಿಯಮಾವಳಿಗಳನ್ನು ಉಲ್ಲಂಘಿಸಿ ಕೆಲ ಅನರ್ಹ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಲಾಯಿತು. ವಿವಿಯ ಕೆಲ ವಿದ್ಯಾರ್ಥಿಗಳು ಇದನ್ನು ವಿರೋಧಿಸಿದ್ದರು. ಹಾಗಾಗಿ ವಿವಿಯ ಮೌಲ್ಯಮಾಪನ ಕುಲಸಚಿವ ಡಾ. ಜಿ.ಟಿ. ದೇವರಾಜ್ ಸಾರ್ವಜನಿಕವಾಗಿ ಬಹಿರಂಗಪಡಿಸದೆ, ಮೂರನೇ ಸುತ್ತಿನ ಕೌನ್ಸಿಲಿಂಗ್ ನಡೆಸಿದ್ದಾರೆ. ಪರಿಣಾಮವಾಗಿ ಪಿಎಚ್‍ಡಿಗೆ ಅನರ್ಹರು ಪ್ರವೇಶ ಪಡೆದಿರುವುದು ಸಾಮಾಜಿಕ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಯಿಂದ ತಿಳಿದು ಬಂದಿದೆ.

ಈಗಾಗಲೇ ಕೆಲ ಸೀಟುಗಳ ಅನರ್ಹರ ಪಾಲಾದ ಕಾರಣ, ಉಳಿಕೆ ಸೀಟುಗಳಿಗೆ ವಿವಿಯು ಹೊರಡಿಸುವ ಪಿಎಚ್‍ಡಿ ಅಧಿಸೂಚನೆಗೆ ಸೀಟುಗಳು ಕಡಿಮೆ ಇದ್ದು, ಮೀಸಲಾತಿ ಅನ್ವಯ ಅರ್ಹರಿಗೆ ಸಿಗುವುದು ಸಂಶಯವಾಗಿದೆ. ಇನ್ನು ಪಿಎಚ್‍ಡಿಗೆ ಪ್ರವೇಶ ಪಡೆದ ವಿಷಯುವಾರು ಅಭ್ಯರ್ಥಿಗಳ ಪಟ್ಟಿಯಲ್ಲಿ 762 ಅಭ್ಯರ್ಥಿಗಳಿದ್ದು, ಮೀಸಲಾತಿ ವರ್ಗ ಹಂಚಿಕೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ 768 ಅಭ್ಯರ್ಥಿಗಳಿರುವುದು ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News