ಕುಂದಾಪುರ: ಮಕ್ಕಳಿಗೆ ಕರಕುಶಲ ವಸ್ತುಗಳ ಬಗ್ಗೆ ಪ್ರಾತ್ಯಕ್ಷಿತೆ, ಮಾಹಿತಿ ಶಿಬಿರ

Update: 2022-01-23 15:41 GMT

ಕುಂದಾಪುರ, ಜ.23: ಅಕ್ಷರ ಕಲಿಕೆ ಮಾತ್ರ ಶಿಕ್ಷಣವಲ್ಲ. ಮಕ್ಕಳನ್ನು ಕ್ರಿಯಾಶೀಲರನ್ನಾಗಿ ಮಾಡಿ ವಿವಿಧ ಕೌಶಲ್ಯಗಳೊಂದಿಗೆ ಸಮಯ ಸದ್ವಿ ನಿಯೋಗ ಮಾಡುವ ವಿವಿಧ ಚಟುವಟಿಕೆಗಳನ್ನು ಕಲಿಸುವುದು ಸಹ ಶಿಕ್ಷಣದ ಅವಿಭಾಜ್ಯ ಅಂಗ ಎಂದು ಅಜ್ರಿ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಅಶೋಕ ಕುಲಾಲ್ ಹೇಳಿದ್ದಾರೆ.

ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ ಬಾಳ್ಕುದ್ರು ಹಂಗಾರಕಟ್ಟೆ, ರೋಟರಿ ಸನ್‌ರೈಸ್ ಕುಂದಾಪುರ, ಗ್ರಾಮ ಪಂಚಾಯತ್ ಆಜ್ರಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಜ್ರಿಹರ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಜ್ರಿಹರ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಒಂದು ದಿನದ ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಶಿಬಿರ-2022ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಒಂದು ಕ್ರಿಯೆ ನಮಗೆ ಇಷ್ಟವಾದರೆ ಅದು ಹವ್ಯಾಸವಾಗಿ ನಮ್ಮ ಜೀವನ ದುದ್ದಕ್ಕೂ ಸಹಕರಿಸುತ್ತದೆ. ಭಾರತದ ಎಲ್ಲಾ ಪ್ರದರ್ಶನ ಕಲೆಗಳು ಸ್ವಾನುಭವ ದಿಂದ ಮೂಡಿ ಕಲಾತ್ಮಕ ವಸ್ತು ತಯಾರಿಗೊಳ್ಳುತ್ತದೆ. ಅಂತಹ ಕಲೆಗಳನ್ನು ಉತ್ತೇಜಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಅಶೋಕ ಕುಲಾಲ್ ನುಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಂದಾಪುರ ರೋಟರಿ ಸನ್‌ರೈಸ್‌ನ ಅಧ್ಯಕ್ಷೆ ಗಿರಿಜಾ ಮಾಣಿಗೋಪಾಲ ಮಾತನಾಡಿ ಮಕ್ಕಳಲ್ಲಿ ಸೃಜನಶೀಲತೆಗೆ ಒತ್ತು ನೀಡುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಇಂತಹ ಶಿಬಿರಗಳಿಂದ ಮಕ್ಕಳಲ್ಲಿ ಮನೋಸ್ಥೈರ್ಯ, ಹೊಂದಾಣಿಕೆ ಸಮಸ್ಯೆ ಎದುರಿಸುವ ಶಕ್ತಿ, ಧೈರ್ಯ ಜೊತೆಗೆ ಕಲಾತ್ಮಕ ವಸ್ತುಗಳಾದ ಸ್ಪಂಜಿನಿಂದ ಗೊಂಬೆ, ಎಂಬೋಸಿಂಗ್ ಪೈಂಟ್, ಪೇಪರ್ ಕ್ರಾಫ್ಟ್, ಪೇಪರ್‌ ಬ್ಯಾಗ್, ಹೂಗುಚ್ಛ ತಯಾರಿಸಲು ಮಾಹಿತಿ ದೊರೆಯುತ್ತದೆ ಎಂದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಗಣಪ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ರೋಟರಿ ಸನ್‌ರೈಸ್‌ನ ಮಾಜಿ ಅಧ್ಯಕ್ಷ ಅಬುಶೇಖ್ ಸಾಹೇಬ್, ಅಜ್ರಿ ಗ್ರಾಪಂನ ಸದಸ್ಯ ಮೂರ್ತಿ ಶೆಟ್ಟಿ, ಅಜ್ರಿಯ ಉದ್ಯಮಿ ಕೇಶವ ಗಾಣಿಗ, ಶಾಲೆಯ ಮುಖ್ಯ ಶಿಕ್ಷಕ ಶಂಕರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ಹಂಗಾರಕಟ್ಟೆ ಬಾಳ್ಕುದ್ರು ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಮೇಶ್ ವಕ್ವಾಡಿ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾ ಮೋಹನ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರೆ ಶ್ರೀರಕ್ಷಾ ವಂದಿಸಿದರು. ಸುಮಾರು 66 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News